ಜಾತ್ಯತೀತ ಪಕ್ಷ, ಸಂಘಟನೆಗಳ ಸಹಭಾಗಿತ್ವದಲ್ಲಿ ಡಿಸೆಂಬರ್ 12, ಮಂಗಳವಾರ ಬೆಳಗ್ಗೆ 9ರಿಂದ ಫರಂಗಿಪೇಟೆಯಿಂದ ಮಾಣಿವರೆಗಿನ ಕಾಲ್ನಡಿಗೆ ಜಾಥಾದ ಲಾಂಛನ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಗಳೂರಿನಲ್ಲಿ ಗುರುವಾರ ನಡೆಯಿತು.
ಫರಂಗಿಪೇಟೆಯಿಂದ ಜಾಥಾ ಆರಂಭಗೊಂಡು ಸಂಜೆ 4 ಗಂಟೆಗೆ ಮಾಣಿ ತಲುಪುವ ಜಾಥಾದ ಅಂತ್ಯದಲ್ಲಿ ಸಭಾ ಕಾರ್ಯಕ್ರಮ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂಬ ಹೆಸರುಪಡೆದಿದ್ದರೂ ಭ್ರಾತೃತ್ವ ಮತ್ತು ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಲು ಏಕತೆ, ಸಾಮರಸ್ಯದ ನಡಿಗೆ ನಡೆಸಲು ಚಿಂತನೆ ನಡೆಸಲಾಗಿತ್ತು. ಇದರ ಭಾಗವಾಗಿಯೇ ಡಿ.12ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ ಎಂಬ ಘೋಷವಾಕ್ಯದಡಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಸುದ್ದಿಗಾರರಿಗೆ ನಡಿಗೆಯ ರೂವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಇದು ಪಕ್ಷಾತೀತವಾಗಿರಲಿದೆ. ನಾನಾ ಧರ್ಮ, ಸಾಮಾಜಿಕ ಸಂಘಟನೆ ಮುಖಂಡರು, ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಹಿಂಸೆ ಪ್ರಚೋದಕರಿಗೆ ನಮ್ಮ ಬೆಂಬಲವಿಲ್ಲ. ಇದು ಶಾಂತಿಪ್ರಿಯರಿಗೆ ಮಾತ್ರ ಇರುವ ನಡಿಗೆ. ಶಾಂತಿಪ್ರಿಯ ಜನತೆ ನಮ್ಮೊಂದಿಗೆ ಕೈಜೋಡಿಸಿ ಸಾಮರಸ್ಯಕ್ಕೆ ಹೆಜ್ಜೆ ಹಾಕೋಣ ಎಂದು ರೈ ಹೇಳಿದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಸುಶೀಲ್ ನೊರೋನ್ಹ, ರೀಟಾ ನೊರೋನ್ಹ, ಯೋಗೀಶ ಶೆಟ್ಟಿ ಜೆಪ್ಪು, ವಸಂತ ಆಚಾರಿ, ಮುನೀರ್ ಕಾಟಿಪಳ್ಳ, ಯಾದವ ಶೆಟ್ಟಿ, ಎಂ.ದೇವದಾಸ, ಟಿ.ನಾರಾಯಣ ಪೂಜಾರಿ, ವಾಸುದೇವ ಕುಳೂರು, ಚಂದು ಎಲ್, ವಿಶುಕುಮಾರ್, ಸೀತಾರಾಮ ಬೆರಿಂಜ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಸಾಮರಸ್ಯದ ನಡಿಗೆ – ಸೌಹಾರ್ದತೆಯೆಡೆಗೆ ಲಾಂಛನ, ಪೋಸ್ಟರ್ ಬಿಡುಗಡೆ"