- ಮಂಗಳಪದವಿನಲ್ಲಿ ಕಳವಿಗೆ ವಿಫಲ ಯತ್ನ
ಮಂಗಳವಾರ ಬೆಳಗ್ಗೆ ಮಂಗಳಪದವಿನಲ್ಲಿರುವ ಗಾಯತ್ರಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿಗೆ ಕಳ್ಳರು ನುಗ್ಗಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ವಿಟ್ಲ ಆಸುಪಾಸಿನಲ್ಲಿ ಕಳ್ಳರ ಇರವನ್ನು ಸಾಬೀತುಪಡಿಸಿದೆ. ಮತ್ತೆ ವಿಟ್ಲ ಪರಿಸರದಲ್ಲಿ ಕಳ್ಳರ ಕಾಟ ಚಿಗಿತುಕೊಂಡಿರುವ ಅನುಮಾನ ಮೂಡಿಸಿದೆ.
ಹಾಗೆ ನೋಡಿದರೆ, ಬಂಟ್ವಾಳ ತಾಲೂಕಿನಲ್ಲಿ ಕಳೆದ ಮೂರು ನಾಲ್ಕು ತಿಂಗಳ ಹಿಂದೆ ದೇವಸ್ಥಾನ, ಮನೆಗಳಿಗೆ ರಾತ್ರಿ ಹಗಲಿನ ತಾರತಮ್ಯ ಇಲ್ಲದೆ ಕಳ್ಳರು ನುಗ್ಗಿದ ಘಟನೆ ವರದಿಯಾಗಿತ್ತು. ಯಾವ ಪ್ರಕರಣದಲ್ಲೂ ಸ್ಪಷ್ಟ ಸುಳಿವು ಪೊಲೀಸರಿಗೆ ದೊರಕಿದ ಕುರಿತು ಮಾಹಿತಿ ನೀಡಿಲ್ಲ.
ಕಳೆದ ತಿಂಗಳು ಗಂಭೀರ ಪ್ರಕರಣಗಳು ನಡೆಯದೇ ಇದ್ದರೂ ಇದೀಗ ಮತ್ತೆ ಬ್ಯಾಂಕುಗಳು, ಅಂಗಡಿಗಳತ್ತ ಕಳ್ಳರ ಚಿತ್ತ ನೆಟ್ಟಿದೆ.
ಮಂಗಳಪದವು ಮುಖ್ಯ ಪೇಟೆಯಲ್ಲಿರುವ ಗಾಯತ್ರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿ ಇದರ ಮುಂಭಾಗದ ಶಟರ್ ಮುರಿದು ಒಳನುಗ್ಗಿದ ಕಳ್ಳರು ಫೈನಾನ್ಸ್ನೊಳಗಡೆ ಹಣಕ್ಕಾಗಿ ಜಾಲಾಡಿದ್ದಾರೆ. ಪ್ರಮುಖ ಲಾಕರ್ ಅನ್ನು ಮುರಿಯಲು ಯತ್ನಿಸಿದ್ದು, ಅದು ಸಾಧ್ಯವಾಗದ ಕಾರಣ ಬರಿಗೈಯಲ್ಲಿ ಹಿಂತಿರುಗಿದ್ದಾರೆ. ಕಚೇರಿ ಸಿಬ್ಬಂದಿಗಳು ಬೆಳಿಗ್ಗೆ ಬಂದಾಗ ಈ ಘಟನೆ ಬಗ್ಗೆ ಬೆಳಕಿಗೆ ಬಂದಿದೆ. ಬಳಿಕ ಅವರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್, ವಿಟ್ಲ ಎಸೈ ನಾಗಾರಾಜ್, ಶ್ವಾನದಳ ಹಾಗೂ ಬೆರಳಚ್ಚು ತಂಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಮ್ಮ ಕಚೇರಿಯಲ್ಲಿ ಯಾವುದೇ ಸಿಸಿ ಕ್ಯಾಮಾರ ಅಳವಡಿಸದ ಕಾರಣ ಹಾಗೂ ಮಂಗಳಪದವಿನ ಎಲ್ಲಿಯೂ ಸಿಸಿ ಕ್ಯಾಮಾರಗಳನ್ನು ಅಳವಡಿಸದ ಕಾರಣ ಕಳ್ಳರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Be the first to comment on "ಮತ್ತೆ ವಿಟ್ಲ ಪರಿಸರದಲ್ಲಿ ಕಳ್ಳರ ಕಾಟ"