ಪಶ್ಚಿಮವಾಹಿನಿ ಯೋಜನೆಯಡಿ ಇಲ್ಲಿನ ಅರಳ ಗ್ರಾಮದ ಪುಚ್ಚಮೊಗರು ಫಲ್ಗುಣಿ ಹೊಳೆಗೆ ರೂ 8 ಕೋಟಿ ವೆಚ್ಚದ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ರಾಯಿ ಮತ್ತು ಕೊಯಿಲ ಗ್ರಾಮದ ವಿವಿಧೆಡೆ ರಸ್ತೆ ಅಭಿವೃದ್ಧಿ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಅಣ್ಣಳಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇ ವೇಳೆ ರಾಯಿ ಗ್ರಾಮದ ಹೋರಂಗಳ ಮತ್ತು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೂಡುರಸ್ತೆಗೆ ಪಾಂಚಕೋಡಿ ಎಂಬಲ್ಲಿ ರೂ 3೦ ಲಕ್ಷ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ, ರೂ 20ಲಕ್ಷ ವೆಚ್ಚದಲ್ಲಿ ಕೊಯಿಲ ಗ್ರಾಮದ ಅಣ್ಣಳಿಕೆ –ಹಿರ್ಣಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್, ಜಿಲ್ಲಾಪಂಚಾಯಿತಿ ಸದಸ್ಯರಾದ ಬಿ. ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಸದಸ್ಯ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ, ರಾಯಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ದೇವಪ್ಪ ಕರ್ಕೇರಾ, ರಾಜೇಂದ್ರ ಜೈನ್, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಉಮೇಶ ಭಟ್, ಎಂಜಿನಿಯರ್ ಅರುಣ್ ಪ್ರಕಾಶ್, ಅಮೃತ ಕುಮಾರ್ ಮತ್ತಿತರರು ಇದ್ದರು. ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ ಸ್ವಾಗತಿಸಿ ವಂದಿಸಿದರು.
Be the first to comment on "ಫಲ್ಗುಣಿ ಹೊಳೆಗೆ ರೂ 8 ಕೋಟಿ ವೆಚ್ಚದ ಹೊಸ ಕಿಂಡಿ ಅಣೆಕಟ್ಟು"