ಕೊಲೆಗಾರ

  • Story by ಅನಿತಾ ನರೇಶ್ ಮಂಚಿ

www.bantwalnews.com

ಜಾಹೀರಾತು

ಜಾಹೀರಾತು

ಘಟನೆ ಒಂದು
ನಾನೊಬ್ಬ ಬಾಡಿಗೆ ಕೊಲೆಗಾರ, ಆದರೆ ನನ್ನನ್ನು ನೀನು ನಂಬಬಹುದು. ನಿನ್ನ ಪ್ರೀತಿಯನ್ನು ನಿನ್ನದಾಗಿಸಿಕೊಳ್ಳಲು ನಾನು ಸಹಾಯ ಮಾಡಬಲ್ಲೆ.

ಜಾಹೀರಾತು

ಮನು ತನ್ನ ಚೂರಿಯ ಹರಿತವನ್ನು ಬೆರಳುಗಳಲ್ಲಿಯೇ ಪರೀಕ್ಷಿಸುತ್ತಾ ನುಡಿದ.

ಅಪನಂಬಿಕೆಯಿಂದಲೇ ಮಿತ್ರನತ್ತ ನೋಡಿದ ಶಿವನ ಕಂಗಳಲ್ಲಿ ಒಪ್ಪಿಗೆಯ ಮುದ್ರೆಯಿತ್ತು.

ನಾನು ಇನ್ನೆರಡು ದಿನಗಳ ಕಾಲ ಈ ಊರಲ್ಲಿರುತ್ತೇನೆ. ನನಗೂ ಇಲ್ಲಿ ಕೆಲಸವಿದೆ. ಆ ಎರಡು ದಿನಗಳನ್ನು ನಿನ್ನ ಜೊತೆ ಕಳೆಯುವುದು ನನಗೆ ಸಂತಸವೆನಿಸುತ್ತದೆ

ಜಾಹೀರಾತು

ಓಹ್.. ಹೌದೇ.. ಆದರೆ ಇವತ್ತು ನನ್ನ ಗೆಳತಿ ನನ್ನನ್ನು ಅವಳ ಮನೆಗೆ ಅಹ್ವಾನಿಸಿದ್ದಾಳೆ. ಅವಳ ತಂದೆ ಇನ್ನೆರಡು ದಿನಗಳ ಕಾಲ ಊರಲ್ಲಿರುವುದಿಲ್ಲ. ಆ ಎರಡು ದಿನಗಳು ನಮ್ಮದೇ..

ನೀನದನ್ನು ನಂಬಿದೆಯಾ.. ಏನೂ ಮೋಸವಿಲ್ಲ ತಾನೇ..

ನೀನು ನನ್ನ ಹಳೇ ಮಿತ್ರನೇನೋ ಹೌದು. ಆದರೆ ಎಷ್ಟೋ ವರ್ಷಗಳ ಬಳಿಕ ನಿನ್ನನ್ನು ನೋಡುತ್ತಿದ್ದೇನೆ. ನಿನ್ನನ್ನೇ ನಂಬುತ್ತಿದ್ದೇನೆ ಎಂದ ಮೇಲೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅವಳನ್ನು ನಂಬದಿರಲು ಸಾಧ್ಯವೇ ಹೇಳು..

ಜಾಹೀರಾತು

ಆದರೂ ಅವಳಪ್ಪನ ಬಗ್ಗೆ ಎಚ್ಚರದಿಂದಿರು. ನಿನಗೆ ಶ್ರೀಮಂತರ ಬಗ್ಗೆ ಗೊತ್ತಿಲ್ಲ. ನಿನ್ನ ಪ್ರಾಣ ತೆಗೆಯಲೂ ಹೇಸಲಾರರು ಅವರು. ನನ್ನ ಬಳಿ ಬರುವಂತಹ ಸಮಸ್ಯೆಗಳೆಲ್ಲ ಇಂತಹವುಗಳೇ.. ನೀನು ನಿತ್ಯವೂ ಅವಳಿಗೆ ಸಂಗೀತ ಕಲಿಸಲು ಅವಳ ಮನೆಗೆ ಹೋಗುತ್ತಿರುತ್ತೀಯಲ್ಲಾ..ನಿಮ್ಮಿಬ್ಬರ ಪ್ರೀತಿಯ ಬಗ್ಗೆ ಸಂಶಯ ಬಂದಿರುವ ಅವಳ ಅಪ್ಪ ಸಮಯ ನೋಡಿ ನಿನ್ನನ್ನು ನಿವಾರಿಸಿಕೊಳ್ಳಲೂಬಹುದು

ಏನೇ ಆಗಲಿ ನಾನೀಗ ಅವಳ ಮನೆಗೆ ಹೊರಡಲೇಬೇಕು. ಅಂದ ಹಾಗೆ ನೀನು ಇಲ್ಲಿ ಯಾವ ಕೆಲಸಕ್ಕೆ ಬಂದಿದ್ದೀಯಾ? ಕೊಲೆಗಾರ ಅಂದ ಮೇಲೆ ಕೊಲೆ ಮಾಡಲೇ ಇರಬಹುದು. ಯಾರವರು..?

ಕ್ಷಮಿಸು ಶಿವಾ.. ನನ್ನ ವೃತ್ತಿಯಲ್ಲ್ಲಿ ರಹಸ್ಯಗಳನ್ನು ಕಾಪಿಡುವುದು ಬಹಳ ಮುಖ್ಯ. ಆ ವೃತ್ತಿಧರ್ಮವನ್ನು ನಿರಂತರವಾಗಿ ಪಾಲಿಸುವ ಕಾರಣದಿಂದ ನಾನಿಲ್ಲಿಯವರೆಗೂ ಎಲ್ಲಿಯೂ ಕುರುಹುಗಳನ್ನುಳಿಸದೇ, ಯಾರ ಕಣ್ಣಿಗೂ ಬೀಳದೇ ಉಳಿದಿದ್ದೇನೆ. ಆದರೂ ನೀನು ನನ್ನ ಮಿತ್ರನಾದ ಕಾರಣ ಹೋಗುವ ಮೊದಲು ಹೆಸರನ್ನು ಹೇಳಿ ಹೋಗುತ್ತೇನೆ.ನಿನ್ನ ಭದ್ರತೆಯ ಬಗ್ಗೆ ನನಗೆ ಅನುಮಾನ. ಈ ಚೂರಿ ತೆಗೆದುಕೋ.. ಇದು ನಿನ್ನನ್ನು ಅಪಾಯದಿಂದ ಪಾರು ಮಾಡುವುದು

ಜಾಹೀರಾತು

ಓಹ್.. ನಿನ್ನ ಕಾಳಜಿಗಾಗಿ ವಂದನೆಗಳು ಮನು.. ನೀನು ಹೊರಡುವ ಮೊದಲು ನಿನ್ನನ್ನು ಕಾಣುವೆ

ಘಟನೆ ಎರಡು

ಸಂಗೀತ ಹೇಳಿಕೊಡಲು ಇಷ್ಟು ಹೊತ್ತಿನಲ್ಲಿ ಮನೆಗೆ ಬಂದೆಯಾ ಪಾಪಿ.. ನಿನ್ನ ಹುನ್ನಾರ ನನಗೆ ಗೊತ್ತು ನಾನಿಲ್ಲದ ಹೊತ್ತಲ್ಲಿ ಬಂದು ನನ್ನ ಮಗಳ ಮನಸ್ಸು ಕೆಡಿಸಿ, ಅವಳನ್ನು ನಿನ್ನವಳನ್ನಾಗಿಸುವ ಬಯಕೆ ಅಲ್ಲವೆ.. ಜೊತೆಗೆ ಕೆಲಸ ಮಾಡದೇ ನನ್ನ ಶ್ರೀಮಂತಿಕೆ ಹರಿದು ನಿನ್ನನ್ನು ಸೇರುತ್ತದೆ ಎಂಬ ಕೆಟ್ಟ ಆಸೆ ಬೇರೆ.. ಯಾರೋ ಒಬ್ಬ ಪುಣ್ಯಾತ್ಮ ನನಗೆ ಫೋನ್ ಮಾಡಿ ವಿಷಯ ತಿಳಿಸಿದ. ನನ್ನ ಲಕ್ಷಗಟ್ಟಲೆಯ ಬಿಸಿನೆಸ್ ಡೀಲ್ ಹಾಳಾದರೆ ಹೋಗಲಿ. ಮಗಳು ನಿನ್ನಂತಹ ಮೂರ್ಖನ ಪಾಲಾಗುವುದು ಬೇಡ ಎಂದು ನಾನಿಲ್ಲಿ ಉಳಿದೆ. ನಿನ್ನ ಕೊನೆಯ ದಿನವಿಂದು .. ನೀನೀಗ ಸಾಯುತ್ತೀಯ.. ಎಂದು ಪಿಸ್ತೂಲ್ ತೆಗೆಯ ಹೊರಟ ಗೋವಿಂದರಾಯ.

ಜಾಹೀರಾತು

ಅವನ ಕೈ ಕಿಸೆಯೊಳಗಿಳಿದು ಮರಳುವಷ್ಟರಲ್ಲಿ, ಶಿವನ ಕೈಯಲ್ಲಿದ್ದ ಚೂರಿ ಗೋವಿಂದರಾಯನ ಹೊಟ್ಟೆಯೊಳಕ್ಕಿಳಿದಿತ್ತು. ಕೂಡಲೇ ಹೊರಗಿನಿಂದ ಪೊಲಿಸ್ ವಾಹನಗಳ ಸದ್ದು ಕೇಳಿ ಬಂತು. ಅವನು ತಪ್ಪಿಸಿಕೊಳ್ಳಲಾಗದಂತೆ ಅವನನ್ನು ಸುತ್ತುವರಿದು ಬಂಧಿಸಿದ್ದರು.

ಘಟನೆ ಮೂರು

ನಿನ್ನ ದುಸ್ಥಿತಿಗೆ ಬೇಸರವೆನಿಸುತ್ತದೆ ಶಿವಾ.. ಆದರೇನು ಮಾಡಲಿ … ನನ್ನ ಕೆಲಸ ಮುಗಿದಿದೆ. ಇನ್ನು ನಾನಿಲ್ಲಿ ನಿಲ್ಲುವಂತಿಲ್ಲ

ಜಾಹೀರಾತು

ಸರಳಿನೊಳಗಿಂದಲೇ ಶಿವ ಹೇಳಿದ.

ನನ್ನ ಚಿಂತೆ ಬಿಡು. ಆದರೂ ನೀನು ನನಗೆ ಉಪಕಾರ ಮಾಡಿದೆ. ನಿನ್ನ ಚೂರಿ ಅಲ್ಲದಿದ್ದರೆ ನಾನು ಈಗ ಜೀವ ಸಹಿತ ಇರುತ್ತಿರಲಿಲ್ಲ

ಛೇ.. ಅದರಲ್ಲೇನಿದೆ ಬಿಡು.. ಆದರೆ ಶಿವಾ ನಾವಿನ್ನೆಂದೂ ಭೇಟಿಯಾಗಲಾರೆವು. ಯಾಕೆಂದರೆ ನಾನು ಒಂದು ಜಾಗದಲ್ಲಿ ಒಂದೇ ಕೆಲಸವನ್ನು ಒಪ್ಪಿಕೊಳ್ಳುತ್ತೇನೆ. ಮತ್ತೆಂದೂ ಅಲ್ಲಿಗೆ ಬರುವುದಿಲ್ಲ. ಇದು ನನ್ನ ನಿಯಮ. ನಾನು ಕೊಲೆಗಾರ ಆಗಿರಬಹುದು. ಆದರೆ ನನ್ನ ಕೈ ಯಾವತ್ತೂ ಒಂದು ಹನಿ ನೆತ್ತರನ್ನೂ ಸೋಕಿಸಿಕೊಂಡಿಲ್ಲವೆಂದು ಪ್ರಮಾಣ ಮಾಡಿ ಹೇಳಬಲ್ಲೆ. ನೀನು ದಾರಾಳವಾಗಿ ನನ್ನ ಕೈ ಕುಲುಕಬಹುದು…ಎಲ್ಲಿ .. ಆ ಸರಳುಗಳ ಎಡೆಯಿಂದಲೇ ಕೈ ನೀಡು..

ಜಾಹೀರಾತು

ಓಹ್.. ನಿಜಕ್ಕೂ ನಿನ್ನ ಕೈ ಕೋಮಲವಾಗಿದೆ. ಅಂದ ಹಾಗೇ ನೀನು ಇಲ್ಲಿ ಕೊಲೆ ಮಾಡಬೇಕಿದ್ದ ವ್ಯಕ್ತಿ ಯಾರಾಗಿದ್ದ? ಹೋಗುವ ಮೊದಲು ಹೇಳುತ್ತೇನೆಂದು ಮಾತು ಕೊಟ್ಟಿದ್ದೆ

ಹೋ..ಶಿವಾ.. ನನ್ನ ಮರೆವಿಗಿಷ್ಟು.. ನೀನು ನೆನಪಿಸದಿದ್ದರೆ ಹಾಗೇ ಹೋಗಿಬಿಡುತ್ತಿದ್ದೆ. ಅವನ ಹೆಸರು ಗೋವಿಂದರಾಯ.. ನಿನ್ನ ಗೆಳತಿಯ ಅಪ್ಪ..

*****

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Anitha Naresh Manchi
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Be the first to comment on "ಕೊಲೆಗಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*