ಹಾವು ಕಡಿತಕ್ಕೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಭಾರತೀಯ ಸೇನಾ ಯೋಧನ ನೆರವಿಗೆ ಮಧ್ಯರಾತ್ರಿ ಧಾವಿಸಿ, ತುರ್ತು ಚಿಕಿತ್ಸೆ ಒದಗಿಸುವಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಯಶಸ್ವಿಯಾಗಿದ್ದಾರೆ.
ಭಾನುವಾರ ಮಧ್ಯರಾತ್ರಿ 1.15 ಗಂಟೆಗೆ ಮುಡಿಪು ಕೋಡಕಲ್ಲು ಎಂಬಲ್ಲಿನ ನಿವಾಸಿ ಸಂತೋಷ್ ಕುಮಾರ್ ಎಂಬವರ ತಮ್ಮ ಸಚಿವರ ಮೊಬೈಲ್‍ಗೆ ಕರೆ ಮಾಡಿ ತನ್ನ ಅಣ್ಣ ಸಂತೋಷ್‍ಗೆ ರಾತ್ರಿ ಹಾವು ಕಡಿದಿದ್ದು, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಆತನಿಗೆ 10 ಇಂಜಕ್ಷನ್‍ಗಳ ಅಗತ್ಯವಿದೆ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಅಸಹಾಯಕರಾದ ಸಂತೋಷ್ ಕುಟುಂಬಸ್ಥರು ರಾತ್ರಿ 1.15 ಗಂಟೆಗೆ ನೇರವಾಗಿ ಸಚಿವ ಯು.ಟಿ. ಖಾದರ್ ಅವರಿಗೆ ಕರೆ ಮಾಡಿದ್ದರು. ವಿಷಯ ತಿಳಿದು ಸಚಿವರು ತಕ್ಷಣವೇ ರಾತ್ರಿ 1.30 ಗಂಟೆಗೆ ಆಸ್ಪತ್ರೆಗೆ ಧಾವಿಸಿ ಬಂದರು.
ತುರ್ತುಚಿಕಿತ್ಸೆ ವಾರ್ಡ್‍ನಲ್ಲಿದ್ದ ರೋಗಿಯನ್ನು ಭೇಟಿಯಾದ ಸಚಿವರು, ವೈದ್ಯರೊಂದಿಗೆ ಸಮಾಲೋಚಿಸಿದ್ದು, ಆತನಿಗೆ ತುರ್ತಾಗಿ 10 ಚುಚ್ಚುಮದ್ದು ಕೊಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೂಡಲೇ ಸಚಿವರು ವೆನ್‍ಲಾಕ್ ಆಸ್ಪತ್ರೆಯಿಂದ ಚುಚ್ಚುಮದ್ದು ತರಿಸುವ ಏರ್ಪಾಡು ಮಾಡಿದರು. ಇದೀಗ ಸಂತೋಷ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ.
ಸೋಮವಾರ ಬೆಳಿಗ್ಗೆಯೂ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ, ಸಂತೋಷ್ ಆರೋಗ್ಯ ಸ್ಥಿತಿ ವಿಚಾರಿಸಿದರು. ಸಂತೋಷ್ ಕುಮಾರ್ ಭಾರತೀಯ ಸೇನೆಯ ಯೋಧರಾಗಿದ್ದು, ಕಳೆದ ವರ್ಷ ಕಾಶ್ಮೀರದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಪಾಲ್ಗೊಂಡಿದ್ದರು. ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಮುಡಿಪು ಕೊಡಕಲ್ಲಿಗೆ ಆಗಮಿಸಿದ್ದರು.
Be the first to comment on "ಯೋಧಗೆ ಹಾವು ಕಡಿತ, ಚಿಕಿತ್ಸೆಗೆ ನೆರವಾದ ಸಚಿವ ಖಾದರ್"