- ಹರೀಶ ಮಾಂಬಾಡಿ
ಬೆಳ್ಳಗಿನ ಕಾಂಕ್ರೀಟ್ ಇದೆ ಎಂದು ಸುಖವಾಗಿ ವಾಹನ ಚಲಾಯಿಸಲು ಹೊರಟರೆ ಎಚ್ಚರ! ಯಾವುದಾದರೂ ಒಂದು ಬದಿಯಲ್ಲಿ ನಿಮ್ಮ ಚಕ್ರ ಸಿಕ್ಕಿಹಾಕಿಕೊಂಡೀತು!

Pic: Harish Mambady
ನೆನಪಿಡಿ, ಇದು ಬಿ.ಸಿ.ರೋಡಿನ ಸರ್ವೀಸ್ ರಸ್ತೆ. ಒಂದೆರಡು ದಿನಗಳಿಂದ ಇಡೀ ರಸ್ತೆಯಲ್ಲಿ ಘನ ವಾಹನಗಳೂ ಓಡಾಟ ನಡೆಸುತ್ತಿವೆ. ಯಾವ ಹೊತ್ತಿನಲ್ಲಿ ವಾಹನ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೀವು ನಡೆದುಕೊಂಡು ಹೋಗುವವರಾದರೆ ಅಪಾಯ!
ಬಂಟ್ವಾಳನ್ಯೂಸ್ ಈ ಕುರಿತು ಸರಣಿ ವರದಿಗಳನ್ನು ಮಾಡಿತ್ತು. ಅಂತೂ ಕಾಂಕ್ರೀಟ್ ರಸ್ತೆ ಕೆಲಸ ಆರಂಭಗೊಂಡಿತು ಎನ್ನುವಾಗ ಕೆಲಸವಾದ ಜಾಗದಲ್ಲೆಲ್ಲಾ ವಾಹನಗಳು ಓಡಾಡಲು ಆರಂಭಿಸಿವೆ.

Pic: Harish Mambady
ಕೆಲ್ಸ ಮುಗೀತಾ:

Pic: Harish Mambady
ಸರ್ವೀಸ್ ರಸ್ತೆ ಉದ್ದ 550 ಮೀಟರ್. ಇದೀಗ ಅರ್ಧದಷ್ಟು ಕಾಮಗಾರಿ ನಡೆದಿವೆ. ಇನ್ನು ಪ್ರಮುಖ ಜಾಗವೇ ಬಾಕಿ ಉಳಿದಿವೆ. ಬಿ.ಸಿ.ರೋಡಿನ ಮಿನಿ ವಿಧಾನಸೌಧದೆಡೆ ತಿರುಗುವ ಜಾಗದಲ್ಲಿ ಅರ್ಧಂಬರ್ಧ ಮಣ್ಣು ಅಗೆದು ಗುಡ್ಡೆ ಹಾಕಿದ್ದು ಅಲ್ಲೇ ಬಿದ್ದಿವೆ. ಒಟ್ಟಾರೆಯಾಗಿ ಫ್ಲೈಓವರ್ ಬದಿಯಿಂದ ಸ್ಟೇಟ್ ಬ್ಯಾಂಕ್ ಬದಿಯವರೆಗಿನ ರಸ್ತೆ ಕಾಂಕ್ರೀಟ್ ಕೆಲಸ ನಡೆದಿವೆ. ಕೆಲವೆಡೆ ಅಗಲವಾದ ಜಾಗದಲ್ಲಿ ಕೆಲಸ ನಡೆದಿದ್ದರೆ, ಉಳಿದೆಡೆ ಎಷ್ಟು ಜಾಗ ಇದೆಯೋ ಅಷ್ಟೇ ಕೆಲಸ ನಡೆದಿವೆ. ಮೊದಲು ರಸ್ತೆ ಇದ್ದಷ್ಟೇ ಅಗಲದಲ್ಲಿ ಕೆಲಸ ಆಗಿದೆ. ಇನ್ನು ಅಷ್ಟೇ ದೂರದ ಕೆಲಸ ಬಾಕಿ ಉಳಿದಿದೆ.

Pic: kishore peraje
ಸೆ.20ರಂದು ಸಂಸದ ನಳಿನ್ ಕುಮಾರ್ ಕಟೀಲ್ 1.72 ಕೋಟಿ ರೂ. ವೆಚ್ಚದ ಸರ್ವೀಸ್ ರಸ್ತೆ ಅಗಲಗೊಳಿಸುವ ಕಾಮಗಾರಿಗೆ ಚಾಲನೆ ನೀಡಿದ್ದರು. ಆ ಸಂದರ್ಭ ಪಕ್ಷದ ಪ್ರಮುಖರೊಡನೆ ರಸ್ತೆಯಲ್ಲೆಲ್ಲ ತಿರುಗಾಡಿದ ಅವರು, ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದರು. 550 ಮೀಟರ್ ಉದ್ದದ ಈ ಸರ್ವೀಸ್ ರಸ್ತೆ ಕೆಲಸ 60 ದಿನಗಳಲ್ಲಿ ಮುಗಿಯಲಿದೆ. ಈ ಸಂದರ್ಭ, ರಸ್ತೆ ಅತಿಕ್ರಮಣ, ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗುವ ಬಸ್ ತಂಗುದಾಣಗಳನ್ನು ತೆರವುಗೊಳಿಸಲಾಗುವುದು. ರಾ.ಹೆ.ಪ್ರಾ. ಇಲಾಖೆಯೇ ಗುರುತಿಸಿದ ಸ್ಥಳದಲ್ಲಿ ಬಸ್ ತಂಗುದಾಣವನ್ನು ಸಂಸದರ ಅನುದಾನದಿಂದಲೇ ನಿರ್ಮಿಸಲಾಗುತ್ತಿದೆ, ಇದು ತನ್ನ ಶ್ರಮದಿಂದಾಗಿಯೇ ಕೆಲಸ ಆರಂಭಗೊಂಡಿದೆ ಎಂದು ರಸ್ತೆ ಕಾಮಗಾರಿಗೆ ಟೇಪ್ ಕತ್ತರಿಸುವ ಮೂಲಕ ವಿಶಿಷ್ಟವಾಗಿ ಚಾಲನೆ ನೀಡಿ ಘೋಷಿಸಿದ್ದರು.
PICTURES: HARISH MAMBADY and KISHORE PERAJE
READ THIS:
Be the first to comment on "ಪೂರ್ತಿಯಾಗದ ಸರ್ವೀಸ್ ರಸ್ತೆ ಕಾಂಕ್ರೀಟ್, ಸಂಚಾರ ಡೇಂಜರ್!"