ನವೆಂಬರ್ 3 ರಂದು ಖಾಸಗಿ ಆಸ್ಪತ್ರೆಗಳು ಮುಷ್ಕರಕ್ಕೆ ಕರೆ ನೀಡಿದ್ದರೂ, ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳು ಎಂದಿನಂತೆ ಸಾರ್ವಜನಿಕರ ಸೇವೆಗೆ ಲಭ್ಯವಿದೆ.
ಜಿಲ್ಲೆಯಲ್ಲಿರುವ ಎಲ್ಲಾ 65 ಪ್ರಾಥಮಿಕ ಆರೋಗ್ಯ ಕೇಂದ್ರ, 7 ಸಮುದಾಯ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ನಿರಂತರವಾಗಿ ಲಭ್ಯವಿರಲಿದೆ. ಆಸ್ಪತ್ರೆಗಳ ಹೊರರೋಗಿ ಮತ್ತು ಒಳರೋಗಿ ವಿಭಾಗ ಸೇರಿದಂತೆ ಶಸ್ತ್ರಚಿಕಿತ್ಸೆಗಳ ಸೌಲಭ್ಯವೂ ಸಾರ್ವಜನಿಕರಿಗೆ ಲಭ್ಯವಿರಲಿದೆ. ತಾಲೂಕು ಆಸ್ಪತ್ರೆಗಳಲ್ಲಿ ಸ್ಪೆಷಾಲಿಸ್ಟ್ ಡಾಕ್ಟರ್‍ಗಳು ಚಿಕಿತ್ಸೆಗೆ ಲಭ್ಯವಿರುತ್ತಾರೆ. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದು, ರಜೆಯಲ್ಲಿರುವ ವೈದ್ಯರನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.
ಹೀಗಾಗಿ ಸಾರ್ವಜನಿಕರು ಯಾವುದೇ ಚಿಕಿತ್ಸೆ, ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಅಥವಾ ಯಾವುದೇ ಸಾಮಾನ್ಯ ಕಾಯಿಲೆಗಳಿಗೆ ವೈದ್ಯರನ್ನು ಭೇಟಿಯಾಗಲು ಇಚ್ಚಿಸಿದ್ದಲ್ಲಿ ಜಿಲ್ಲೆಯ ಯಾವುದೇ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು. ಇದಲ್ಲದೇ, ಆರೋಗ್ಯ ಇಲಾಖೆಯ 17 ಅಂಬ್ಯುಲೆನ್ಸ್‍ಗಳು ಹಾಗೂ 108 ಆರೋಗ್ಯ ಕವಚ ಅಂಬ್ಯಲೆನ್ಸ್‍ಗಳು ಸಾರ್ವಜನಿಕರಿಗೆ ಸೇವೆ ನೀಡಲು ಸನ್ನದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
ವೆನ್‍ಲಾಕ್ ಆಸ್ಪತ್ರೆ: ಮಂಗಳೂರಿನ .ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಎಂದಿನಂತೆ ಪ್ರತೀ ನಿತ್ಯ ದೊರಕುವ ವೈದ್ಯಕೀಯ ಚಿಕಿತ್ಸೆಗಳು ಸಾರ್ವಜನಿಕರಿಗೆ ದೊರಕಲಿದೆ.
ಎಲ್ಲಾ ವೈದ್ಯಕೀಯ ಸೇವೆಗಳನ್ನು ಆಸ್ಪತ್ರೆಯಲ್ಲಿ ಯಾವುದೇ ವ್ಯತ್ಯಯ ಇಲ್ಲದೆ ಕಾರ್ಯನಿರ್ವಹಿಸಲಾಗುವುದು. ಆಸ್ಪತ್ರೆಯ ಸಿಬ್ಬಂದಿಯವರು ರಜೆಯಲ್ಲಿ ತೆರಳದೆ ಫಾರ್ಮಸಿ/ಪ್ಯಾರ ಮೆಡಿಕಲ್/ನರ್ಸಿಂಗ್/ ಗ್ರೂಪ್ ಡಿ/ಹೌಸ್ ಕೀಪಿಂಗ್ ನವರಿಗೆ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಲು ಸೂಚಿಸಿದೆ. ಎಲ್ಲಾ ಓಪಿಡಿ/ತುರ್ತು ಚಿಕಿತ್ಸಾ ಘಟಕಗಳು ಸರಕಾರಿ ವೈದ್ಯರ/ಎನ್‍ಹೆಚ್‍ಎಂ ನೆರವಿನಿಂದ ನಡೆಸಲಾಗುತ್ತದೆ. ಕ್ಯಾಶುವಲ್ಟಿ/ತುರ್ತು ಚಿಕಿತ್ಸೆಗಳನ್ನು ಓಪಿಡಿ/ಐಪಿಡಿ ಘಟಕದ ಮುಖ್ಯಸ್ಥರ ನೇತೃತ್ವದಲ್ಲಿ ಸೂಕ್ತವಾಗಿ ನಿರ್ವಹಿಸಲಾಗುವುದು.
ತುರ್ತುಚಿಕಿತ್ಸಾ/ಪ್ಯಾರಮೆಡಿಕಲ್/ ರೇಡಿಯೊಲಜಿ/ಬ್ಲಡ್‍ಬ್ಯಾಂಕ್/ ಮಲೇರಿಯಾ/ಡಿಆರ್‍ಟಿಬಿ/ಪಿಸಿಯೋಥೆರಪಿ/ಡಿಇಐಸಿ/ಕಿಚನ್ ಘಟಕಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಅಂಬ್ಯುಲೆನ್ಸ್ ವಾಹನಗಳನ್ನು ತುರ್ತು ಸ್ಥಿತಿ ನಿಭಾವಣೆಗಾಗಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಆಸ್ಪತ್ರೆಯ ಔಷಧಿ ಉಗ್ರಾಣದಲ್ಲಿ ಜೀವರಕ್ಷಕ ಔಷಧಿಗಳ ದಾಸ್ತಾನು ಇಡಲಾಗಿದೆ ಎಂದು ವೆನ್‍ಲಾಕ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
Be the first to comment on "ಶುಕ್ರವಾರ ಸರಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಚಿಕಿತ್ಸೆ ಲಭ್ಯ"