ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಜನತಾ ಪ್ರಭುವಿನ ಬಳಿ, ನಾಲ್ಕು ವರ್ಷಗಳ ಸಿದ್ದರಾಮಯ್ಯ ಆಡಳಿತ ವೈಫಲ್ಯ ಮುಂದಿಟ್ಟು ಜನರ ಆಶೀರ್ವಾದ ಬೇಡುವುದಕ್ಕೋಸ್ಕರ ಮುಂದಿನ ಚುನಾವಣೆಯಲ್ಲಿ ನವಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ವತಿಯಿಂದ ಪರಿವರ್ತನಾ ಯಾತ್ರೆ ನಡೆಯುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿ.ಸಿ.ರೋಡಿನ ಬಂಟ್ವಾಳ ಬಿಜೆಪಿ ಕಚೇರಿ ಎದುರು ನವಕರ್ನಾಟಕ ಯಾತ್ರೆ ನಿಮಿತ್ತ ಬಿ.ಸಿ.ರೋಡಿನಿಂದ ಬೆಂಗಳೂರಿಗೆ ತೆರಳುವ ಬೈಕ್ ರ್‍ಯಾಲಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.2ರಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಧ್ವಜ ಹಸ್ತಾಂತರ ಮಾಡುವ ಮೂಲಕ ರಾಜ್ಯಾದ್ಯಂತ ಯಾತ್ರೆಗೆ ಚಾಲನೆ ದೊರಕಲಿದೆ, ಯಡಿಯೂರಪ್ಪ ಅವರ ಕೈಬಲಪಡಿಸಲು ಜಿಲ್ಲೆಯಿಂದ ಯಾತ್ರೆ ಹೊರಟಿದೆ ಎಂದರು.
ದ.ಕ.ಜಿಲ್ಲೆಯಿಂದ ಬಂಟ್ವಾಳವನ್ನು ಯಾತ್ರೆಗೆಂದು ಆಯ್ಕೆ ಮಾಡಲಾಗಿದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು ಇದು ಎಲ್ಲದಕ್ಕೂ ಕೇಂದ್ರವಾದರೆ, ಮತ್ತೊಂದು ಇದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕ್ಷೇತ್ರ ಎಂದು ಹೇಳಿದ ನಳಿನ್, ಸಚಿವರ ಕಾರ್ಯವೈಖರಿ ಮತ್ತು ಸಿದ್ದರಾಮಯ್ಯನವರ ಜನವಿರೋಧಿ ನೀತಿಗೆ ಉತ್ತರವಾಗಿ ಬಂಟ್ವಾಳದಿಂದ ಯಾತ್ರೆ ಆರಂಭಗೊಳ್ಳುತ್ತಿದೆ ಎಂದರು.
ದ.ಕ.ದಿಂದ2 ಸಾವಿರ ಕಾರ್ಯಕರ್ತರು:
ಪ್ರತಿ ಮತಗಟ್ಟೆಯಿಂದ ಆರು ಯುವ ಕಾರ್ಯಕರ್ತರು ಬೆಂಗಳೂರಿಗೆ ಸಂಕಲ್ಪ ಯಾತ್ರೆಗೆ ಯಡಿಯೂರಪ್ಪ ಜೊತೆ ನಾವಿದ್ದೇವೆ ಎಂಬ ಬೆಂಬಲ ಸೂಚಕವಾಗಿ ತೆರಳಲಿದ್ದಾರೆ. ಈಗಾಗಲೇ ಒಂದು ಸಾವಿರ ಬೈಕುಗಳಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಹೊರಟಿದ್ದಾರೆ. ಪರಿವರ್ತನಾ ಯಾತ್ರೆ ನಾಳೆ ಪ್ರಾರಂಭವಾದರೆ 72 ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡುತ್ತಾರೆ. ಅದಾದ ಬಳಿಕ ರಾಜ್ಯದಲ್ಲಿ ಪರಿವರ್ತನೆಯ ಅಲೆ ಏಳುತ್ತದೆ. ಮತದಾರರು ಚುನಾವಣೆ ಎದುರು ನೋಡುತ್ತಿದ್ದಾರೆ. ಜನವಿರೋಧಿ ಸಿದ್ದರಾಮಯ್ಯ ಸರಕಾರ ಹೊಡೆದುರುಳಿಸಬೇಕು ಎಂಬ ಸಂಕಲ್ಪ ಜನರಿಗಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಆಶಯ ಜನರಿಗಿದೆ. ಪರಿವರ್ತನಾ ಯಾತ್ರೆ ಕೊನೆಯಲ್ಲಿ ಈ ಆಶಯಗಳು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಪ್ರಮುಖ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ಕ್ಷೇತ್ರಾಧ್ಯಕ್ಷ ದೇವದಾಸ್ ಶೆಟ್ಟಿ, ರಾಮದಾಸ ಬಂಟ್ವಾಳ, ಪ್ರಮುಖರಾದ ಸತ್ಯಜಿತ್ ಸುರತ್ಕಲ್, ಸತೀಶ ಕುಂಪಲ, ಜಿ.ಆನಂದ, ದಿನೇಶ ಭಂಡಾರಿ, ರಾಮದಾಸ ಬಂಟ್ವಾಳ, ಎ.ಗೋವಿಂದ ಪ್ರಭು, ರಮಾನಾಥ ರಾಯಿ, ಪದ್ಮನಾಭ ಮಯ್ಯ, ಯಶೋಧರ ಕರ್ಬೆಟ್ಟು, ವಜ್ರನಾಥ ಕಲ್ಲಡ್ಕ ಸಹಿತ ಪಕ್ಷ ಪ್ರಮುಖರು ಉಪಸ್ಥಿತರಿದ್ದರು.
Be the first to comment on "ನವಕರ್ನಾಟಕ ನಿರ್ಮಿಸಲು ಬಿಜೆಪಿ ಸಂಕಲ್ಪ: ನಳಿನ್ ಕುಮಾರ್ ಕಟೀಲ್"