ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಮೂಲಕ ಸಾಧ್ಯವಾಗುತ್ತದೆ. ಪರಸ್ಪರ ಸಾಮರಸ್ಯ ಇಂದಿನ ಅವಶ್ಯಕತೆಯಾಗಿದ್ದು ಯುವ ಜನತೆ ವಿದ್ಯಾಭ್ಯಾಸದ ಜೊತೆಗೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದರು.
ಅಗ್ರಾರ್ ಚರ್ಚ್ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡದ ವಿದ್ಯಾರ್ಥಿಗಳ ವಾರ್ಷಿಕ ವಿಶೇಷ ಎನ್.ಎಸ್.ಎಸ್. ಶಿಬಿರದ ಸಮಾರೋಪ ಸಮಾರಂಭದಲ್ಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಗ್ರಾರ್ ಚರ್ಚ್‌ನ ಧರ್ಮಗುರು ಗ್ರೆಗೊರಿ ಡಿ’ಸೋಜ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಅಶಾಂತಿ ಅಸಹಿಷ್ಣುತೆಯಿಂದ ತುಂಬಿದ ಸಮಾಜದಲ್ಲಿ ಉಪ್ಪಿನಂತೆ ಬೆರೆತು ಎಲ್ಲರಿಗೂ ಬೇಕಾದವರಾಗಬೇಕು. ಬೆಳಕಿನಂತೆ ಬೇರೆಯವರಿಗೂ ದಾರಿ ತೋರಿಸಿ ಸರಿ ದಾರಿಯಲ್ಲಿ ನಡೆಯಬೇಕು. ಕಲಿತ ಜ್ಞಾನವನ್ನು ಇನ್ನೊಬ್ಬರಿಗೆ ಹಂಚುವ ಮೂಲಕ ಎಲ್ಲರ ಬದುಕಿನಲ್ಲಿ ಸಂತಸ ನೆಲೆಯಾಗಲು ಸಹಕರಿಸಬೇಕು ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್, ಪುರಸಭಾ ಸದಸ್ಯೆ ವಸಂತಿ ಚಂದಪ್ಪ, ಶಿಕ್ಷಣ ಸಂಯೋಜಕ ಶ್ರೀಕಾಂತ್ ಎಮ್, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ, ಕ್ಯಾಥೊಲಿಕ್ ಸಭಾಧ್ಯಕ್ಷ ಆಂಟನಿ ಸಿಕ್ವೇರಾ, ಉದ್ಯಮಿಗಳಾದ ಪಿ.ಜೆ.ರೊಡ್ರಿಗಸ್ , ಲೈನಲ್ ಪಿರೇರಾ, ಅಲ್ಫೋನ್ಸ್ ಮಿನೇಜಸ್ ,ವಿನ್ಸೆಂಟ್ ಕಾರ್ಲೊ ಉಪಸ್ಥಿತರಿದ್ದರು.
ಕಾಲೇಜಿನ ಪ್ರಭಾರ ಪ್ರಿನ್ಸಿಪಾಲ್ ಯುಸೂಫ್ ಸ್ವಾಗತಿಸಿ, ಉಪನ್ಯಾಸಕ ಅಬ್ದುಲ್ ರಝಾಕ್ ನಿರೂಪಿಸಿ ,ಸಹ ಶಿಬಿರಾಧಿಕಾರಿ ಬಾಲಕೃಷ್ಣ ಬೆಳ್ಳಾರೆ ವಂದಿಸಿರು. ಶಿಬಿರಾರ್ಥಿಗಳಾದ ಚೈತ್ರ, ವಿನೊದ್ , ಪ್ರಮೋದ್ ,ಜೆಸಿಲಾ ಪರ್ವಿನ್, ಗೌಸಿಯಾ ಶಿಬಿರದ ಅನಿಸಿಕೆ ವ್ಯಕ್ತ ಪಡಿಸಿದರು.
Be the first to comment on "ಸಾಮರಸ್ಯಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಪೂರಕ: ಸದಾಶಿವ ಬಂಗೇರ"