ನಾವು ನೀಡಿದ ಭರವಸೆಗಳು ಹುಸಿಯಲ್ಲ. ಅದು ನಿಜವಾಗಿದೆ. ಇಂದು ನಡೆದ ಕಾರ್ಯಕ್ರಮವೇ ಇದಕ್ಕೆ ಸಾಕ್ಷಿ. ರಾಜ್ಯದ ೨೨೪ ಕ್ಷೇತ್ರಗಳಲ್ಲೂ ಇಂಥ ಅಭಿವೃದ್ಧಿ ನಡೆದಿವೆ. ನಾವು ನುಡಿದಂತೆ ನಡೆದಿದ್ದೇವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಬಿಜೆಪಿಯವರು ಭಾಷಣಗಳಲ್ಲಷ್ಟೇ ಹೇಳುತ್ತಾರೆ. ನಾವು ಅದನ್ನು ಮಾಡಿ ತೋರಿಸಿದ್ದೇವೆ.
ಈ ರೀತಿಯಾಗಿ ಸೇರಿದ್ದ ಸಹಸ್ರಾರು ಜನಸ್ತೋಮದ ಸಮ್ಮುಖ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಭಾನುವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಸುಮರು ೨೫೨.೫ ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಭಾಷಣದಲ್ಲಿ ಬಿಜೆಪಿ ವಿರುದ್ಧ ಕಟು ಟೀಕಾ ಪ್ರಕಾರ ನಡೆಸಿದರು.
ಬೆಳಗ್ಗೆ ಸುಮಾರು ೧೨ರ ವೇಳೆ ಬಿ.ಸಿ.ರೋಡಿಗೆ ಆಗಮಿಸಿದ ಮುಖ್ಯಮಂತ್ರಿ ವಿಶೇಷ ಮಿನಿ ಬಸ್ಸಿನ ಮೂಲಕ ಬಂಟ್ವಾಳ ನಗರ ಸಂಚಾರ ಮಾಡಿದರು. ಮೊದಲಿಗೆ ಮಿನಿ ವಿಧಾನಸೌಧವನ್ನು ಉದ್ಘಾಟಿಸಿದ ಅವರು, ಬಳಿಕ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಮೆಸ್ಕಾಂ ವಿಭಾಗೀಯ ಕಚೇರಿ ಉದ್ಘಾಟಿಸಿದರು. ಅಲ್ಲಿಂದ ಬಂಟ್ವಾಳದಲ್ಲಿರುವ ನೂತನ ನಿರೀಕ್ಷಣಾ ಮಂದಿರ, ಬಳಿಕ ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅದಾದ ನಂತರ ಪಂಜೆ ಮಂಗೇಶರಾಯರ ಸ್ಮಾರಕ ಸಭಾಭವನದ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಬಂಟ್ವಾಳ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಕೆಎಸ್ಸಾರ್ಟಿಸಿ ಉದ್ಘಾಟನಾ ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ ಮಧ್ಯಾಹ್ನ ೨ ಗಂಟೆಯಾಗಿತ್ತು.
ಈ ಸಂದರ್ಭ ಮುಖ್ಯಮಂತ್ರಿ ಜೊತೆಗಿದ್ದ ಲೋಕೋಪಯೋಗಿ ಇಲಾಖೆ ಸಚಿವ ಡಾ. ಎಚ್.ಸಿ.ಮಹಾದೇವಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಸಚಿವ ಯು.ಟಿ.ಖಾದರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಈಶ್ವರ ಬಿ.ಖಂಡ್ರೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಇಲಾಖಾ ಯೋಜನೆಗಳ ಕಟ್ಟಡ ಉದ್ಘಾಟನೆ, ಯೋಜನೆಗೆ ಚಾಲನೆ ದೊರಕುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದೆಯೂ ಕಾಂಗ್ರೆಸ್ ಬರಲಿದೆ. ಎಲ್ಲ ಎಂಟು ಕ್ಷೇತ್ರಗಳಲ್ಲೂ ಜಯಶಾಲಿಯಾಗಲಿದೆ. ದ.ಕ. ಜಿಲ್ಲೆಯ ಜನ ಜಾತ್ಯಾತೀತವಾದಿಗಳು. ಕೋಮುವಾದಿಗಳ ಪರ ಇಲ್ಲ. ಆದರೆ ಇಲ್ಲಿ ಕೋಮುವಾದಿಗಳ ಕಾಟ ಜಾಸ್ತಿ ಎಂದು ಹೇಳಿದ ಸಿಎಂ ಮಾತಿನುದ್ದಕ್ಕೂ ಮಾಜಿ ಸಿಎಂ ಯಡಿಯೂರಪ್ಪ ಸಹಿತ ಬಿಜೆಪಿಯನ್ನು ಟೀಕಿಸಿದರು.
ಮತದಾರರಿಗೆ ಅಗೌರವ ತರುವುದಿಲ್ಲ: ರೈ
ಅಧ್ಯಕ್ಷತೆ ವಹಿಸಿ ಮಾತನಾಡಿದ ರಮಾನಾಥ ರೈ, ಬಂಟ್ವಾಳ ಮತದಾರರಿಗೆ ಅಗೌರವವನ್ನು ತರುವುದಿಲ್ಲ ಎಂದು ಹೇಳಿದರು. ವಿರೋಧ ಪಕ್ಷದಲ್ಲಿದ್ದಾಗಲೂ ನಾನು ಕೆಲಸ ಮಾಡಿದ್ದೇನೆ. ಈಗಲೂ ಅಭಿವೃದ್ಧಿಯಷ್ಟೇ ನನ್ನ ಧ್ಯೇಯ ಎಂದು ಹೇಳಿದರು.
ಜನಸ್ತೋಮ ನಿಯಂತ್ರಿಸಲು ಹರಸಾಹಸ:
ಬಿ.ಸಿ.ರೋಡಿನಲ್ಲಿ ಸಿಎಂ ಮತ್ತು ಸಚಿವರ ದಂಡು ಆಗಮಿಸಿದ ಹಿನ್ನೆಲೆಯಲ್ಲಿ ಇಡೀ ಪಟ್ಟಣಕ್ಕೆ ಆಗಮಿಸುವ ಮತ್ತು ತೆರಳುವ ವಾಹನಗಳನ್ನು ಕೆಲಕಾಲ ನಿರ್ಬಂಧಿಸಲಾಯಿತು. ಸಿಎಂ ಆಗಮಿಸಿದ ಸಂದರ್ಭ ನೂಕುನುಗ್ಗಲು ಏರ್ಪಟ್ಟು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಸವಲತ್ತು ವಿತರಣೆ:
ಸಭಾ ಕಾರ್ಯಕ್ರಮದಲ್ಲಿ ಸೀತಾ, ಕಲ್ಯಾಣಿ, ಅಪೊಲಿನ್, ಸದಾಶಿವ ಪೂಜಾರಿ, ಭೋಜ ಮೂಲ್ಯ ಅವರಿಗೆ ಅವರಿಗೆ ೯೪ಸಿಸಿ ಮತ್ತು ಸಿ, ಮನಸ್ವಿನಿ ಯೋಜನೆಯಡಿ ಮೈತ್ರಿ ಅವರಿಗೆ ಹಾಗೂ ಗಿರಿಜನ ಉಪಯೋಜನೆಯಡಿ ಡೊಮಬಯ್ಯ ನಾಯ್ಕ್ ಮತ್ತು ಮೀನುಗಾರಿಕೆಯಡಿ ಸೌಮ್ಯಾ, ನಸೀಮಾ ಅವರಿಗೆ ಸಾಂಕೇತಿಕವಾಗಿ ಸವಲತ್ತು ವಿತರಣೆ ನಡೆಯಿತು.
ಗಣ್ಯರ ಉಪಸ್ಥಿತಿ:
ಸಿಎಂ ಕಾರ್ಯಕ್ರಮದುದ್ದಕ್ಕೂ ಜಿಲ್ಲೆ ಮತ್ತು ಸ್ಥಳೀಯ ಗಣ್ಯರ ದಂಡೇ ನೆರೆದಿತ್ತು. ಸಚಿವ ಪ್ರಮೋದ್ ಮಧ್ವರಾಜ್, ಸಿಎಂ ವಿಶೇಷ ಕಾರ್ಯದರ್ಶಿ ಮಿರ್ಜಾ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಐಜಿಪಿ ಹೇಮಂತ್ ನಿಂಬಾಳ್ಕರ್, ಮಾಜಿ ಸಚಿವ ಅಭಯಚಂದ್ರ ಜೈನ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ರಾಜ್ಯ ಮಆಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯುಸ್ ಎಲ್. ರೋಡ್ರಿಗಸ್, ಮಂಗಳೂರು ಮೇಯರ್ ಕವಿತಾ ಸನಿಲ್, ಮೂಡುಬಿದಿರೆ ಶಾಸಕ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಡಿ.ಎಸ್. ಗಟ್ಟಿ, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಪುತ್ತೂರು ಬ್ಲಾಕ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಂಟ್ವಾಳ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ವಾಸು ಪೂಜಾರಿ ಲೊರೆಟ್ಟೋ, ತಾಪಂ ಸದಸ್ಯರಾದ ಉಸ್ಮಾನ್ ಕರೋಪಾಡಿ, ಪ್ರಭಾಕರ ಪ್ರಭು, ಹೈದರ್ ಕೈರಂಗಳ, ಪುರಸಭಾ ಸದಸ್ಯರಾದ ಬಿ. ಪ್ರವೀಣ್ ಜಕ್ರಿಬೆಟ್ಟು, ಗಂಗಾಧರ ಪೂಜಾರಿ ಮಂಡಾಡಿ, ಜಗದೀಶ ಕುಂದರ್,ವಸಂತಿ ಚಂದಪ್ಪ, ಪ್ರಭಾ ಆರ್. ಸಾಲಿಯಾನ್, ಜೆಸಿಂತಾ ಡಿಸೋಜ, ಚಂಚಲಾಕ್ಷಿ, ಸಂಜೀವಿ, ನಾಮನಿರ್ದೇಶಿತ ಸದಸ್ಯರಾದ ಲೋಕೇಶ ಸುವರ್ಣ ಅಲೆತ್ತೂರು, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಮೊದಲಾದವರು ಉಪಸ್ಥಿತರಿದ್ದರು.
ಬೃಹತ್ ಎಲ್‌ಸಿಡಿ ಪರದೆಯಲ್ಲಿ ಪ್ರಸಾರ
ಮುಖ್ಯಮಂತ್ರಿ ಕಾರ್ಯಕ್ರಮದ ಸಭಾ ವೇದಿಕೆ ಹಿಂದೆ ಬೃಹತ್ ಎಲ್‌ಸಿಡಿ ಪರದೆಯನ್ನು ಅಳವಡಿಸಲಾಗಿತ್ತು. ಕಾರ್ಯಕ್ರಮಗಳು ನಡೆಯುತ್ತಿದ್ದಂತೆ ಅದರ ಹಿಂದೆಯೇ ಬೃಹತ್ ದೃಶ್ಯಾವಳಿಗಳು ಕಂಡುಬಂದವು. ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಫಲಕ ಅನಾವರಣವನ್ನೂ ರಿಮೋಟ್ ಕಂಟ್ರೋಲ್ ಮೂಲಕ ನಡೆಸಲಾಯಿತು.
ತುಳುನಾಡ ಖಾದ್ಯ ಸವಿದ ಸಿಎಂ
ಸಭಾ ಕಾರ್ಯಕ್ರಮದ ಬಳಿಕ ಇಲಾಖೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ನಡೆಯಿತು. ಅದಾದ ಬಳಿಕ ಮನೋರಂಜನಾ ಕಾರ್ಯಕ್ರಮಗಳು ನಡೆದವು.
ಬಿ.ಸಿ.ರೋಡಿನ ರಂಗೋಲಿ ಹೋಟೆಲ್‌ನಿಂದ ಮುಖ್ಯಮಂತ್ರಿ ಮತ್ತು ಬಳಗಕ್ಕೆ ಮಧ್ಯಾಹ್ನದ ಊಟಕ್ಕೆ ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು ತುಳುನಾಡಿನ ಖಾದ್ಯಗಳ ವಿಶೇಷಗಳನ್ನು ಸಿಎಂ ಸವಿದರು.
ಸಮಗ್ರ ವಿಡಿಯೋ ವರದಿಗಾಗಿ ಕ್ಲಿಕ್ ಮಾಡಿರಿ:
Be the first to comment on "ಭರವಸೆ ನೀಡಿದ್ದಷ್ಟೇ ಅಲ್ಲ, ನುಡಿದಂತೆ ನಡೆದಿದ್ದೇವೆ – ಮುಖ್ಯಮಂತ್ರಿ"