ಹೊರ ಜಿಲ್ಲೆಗಳಿಗೆ ಮರಳು ಸಾಗಾಟವನ್ನು ತಕ್ಷಣ ನಿಲ್ಲಿಸಬೇಕು, ಜಿಲ್ಲೆಯ ಜನರಿಗೆ ನ್ಯಾಯಯುತ ಬೆಲೆಯಲ್ಲಿ ಮರಳು ನೀಡಲು ಕ್ರಮ ಕೈಗೊಳ್ಳಬೇಕು, ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಅ.13ರಂದು ಬೆಳಿಗ್ಗೆ ಬಿ.ಸಿ.ರೋಡ್‌ನಲ್ಲಿ ಪ್ರತಿಭಟನಾ ಜಾಥಾ ಹಾಗೂ ಸಭೆ ನಡೆಯಲಿದೆ.
ಕ್ಷೇತ್ರ ಬಿಜೆಪಿ ಸಮಿತಿಯ ಅಧ್ಯಕ್ಷ ದೇವದಾಸ್ ಶೆಟ್ಟಿ ಶನಿವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿಭಟನೆಯ ಬಳಿಕವೂ ಜಿಲ್ಲಾಡಳಿತ, ಸರಕಾರ ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಬಿಜೆಪಿ ಕಾರ್ಯಕರ್ತರೇ ಮರಳು ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸುವ ಕಾರ್ಯ ಮಾಡಲಿದೆ. ನದಿಯಿಂದ ಮರಳನ್ನು ಎತ್ತಿ ಜನರಿಗೆ ನೇರವಾಗಿ ಕೊಡುವ ಕೆಲಸವನ್ನು ಬಿಜೆಪಿ ವತಿಯಿಂದ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಿಲ್ಲೆಯ ಸಂಪತ್ತು ಮರಳು:
ಮರಳು ದ.ಕ.ಜಿಲ್ಲೆಗೆ ದೇವರು ಕೊಟ್ಟ ಸಂಪತ್ತು. ಆದರೆ ಅದನ್ನು ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಪ್ರತಿ ತಿಂಗಳು ೩ರಿಂದ ೫ ಸಾವಿರ ಲೋಡ್ ಮರಳು ಹೊರ ಜಿಲ್ಲೆಗಳಿಗೆ ಸಾಗಾಟವಾಗುತ್ತಿದ್ದು, ಸಾಕಷ್ಟು ರಾಜಧನವನ್ನು ಸಂಪಾದಿಸಬಹುದು. ಮರಳಿನ ರಾಜಧನದಿಂದಲೇ ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧಿಸಬಹುದು. ಆದರೆ ಈ ಅವಕಾಶವನ್ನು ಜಿಲ್ಲಾಡಳಿತ ಕಳೆದುಕೊಂಡಿದ್ದು, ಭ್ರಷ್ಟಾಚಾರದ ಮೂಲಕ ರಾಜಧನವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು ಈ ಸಂದರ್ಭದಲ್ಲಿ ಆರೋಪಿಸಿದರು.
ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಇಚ್ಛಾಶಕ್ತಿಯಿದ್ದರೆ ಆನ್‌ಲೈನ್ ಮೂಲಕ ವ್ಯವಹಾರ ಮಾಡಿ ರಾಜಬೊಕ್ಕಸವನ್ನು ತುಂಬಿಸಬಹುದು ಎಂದು ಅವರು ಸಲಹೆ ನೀಡಿದರು.
ಗಾಂಜಾ ಸಮಸ್ಯೆ:
ದ.ಕ.ಜಿಲ್ಲೆಯಲ್ಲಿ ಗಾಂಜಾ ಮಾರಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಂದಾಗಿ ಅಶಾಂತಿ ಉಂಟಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಶೆಟ್ಟಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಕ್ಮಯ ಪೂಜಾರಿ, ಪಕ್ಷದ ಮುಖಂಡರಾದ ಜಿ.ಆನಂದ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ಸೀತರಾಮ ಪೂಜಾರಿ, ರಮಾನಾಥ ರಾಯಿ ಮತ್ತಿತರರು ಇದ್ದರು.
Be the first to comment on "ಜನರಿಗೆ ನ್ಯಾಯೋಚಿತ ಬೆಲೆಗೆ ಮರಳು ಆಗ್ರಹಿಸಿ 13ರಂದು ಬಿಜೆಪಿ ಪ್ರತಿಭಟನೆ"