ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 23: ಇನ್ನೊಮ್ಮೆ ಕವಲುದಾರಿಗೆ

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ .ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ.

pa gO cartoon by Harini

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ). ಲೇಖನಮಾಲೆಯ 23ನೇ ಕಂತು ಇಲ್ಲಿದೆ. ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ. ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ಬಂಟ್ವಾಳನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.

ಜಾಹೀರಾತು

ವಿಶೇಷ ಸೃಷ್ಟಿಗಳ ಲೋಕದಲ್ಲಿ –ಅಂಕಣ 23: ಇನ್ನೊಮ್ಮೆ ಕವಲುದಾರಿಗೆ

ಮೈಬಿಸಿಯಾದಾಗ, ಶಮನಕ್ಕೆ ಎ.ಪಿ.ಸಿ.ಗುಳಿಗೆ ನುಂಗಿ ಕಾಫಿ ಕುಡಿದರೆ ಸಾಕೆಂಬ ಭಾವನೆ ಒಂದೇ ದಿನದಲ್ಲಿ ತಪ್ಪಾಯಿತು. ಜ್ವರ -ಹೊಟ್ಟೆನೋವುಗಳ ಕಾಟ ಹೆಚ್ಚಿ, ಕಚೇರಿ ಮೂಲೆಯ ಚಾಪೆಯಲ್ಲಿ ಬಿದ್ದು ನರಳುವುದನ್ನು ಎರಡನೆಯ ದಿನ ಗಮನಿಸಿದ ಸಹೋದ್ಯೋಗಿಗಳು ತಮಗೆ ತಿಳಿದಂತೆ ತರಿಸಿ ಕೊಡಿಸಿದ ಔಷಧಿಗಳೂ ವಿಫಲವಾದವು. ಕಾರ್ಯಾಲಯದ ಸಮೀಪವಿದ್ದ ಡಾ.ಬಿ.ಆರ್.ಹೆಗ್ಡೆಯವರು ಬಂದು ಪರೀಕ್ಷಿಸಿ ಹೇಳಿದ ಮೇಲಷ್ಟೇ ಟೈಫಾಯ್ಡ್ ಪೀಡೆ ಬೆಳಕಿಗೆ ಬಂದುದು. ಅಷ್ಟಾಗುವಾಗ (ಅನಂತರ ತಿಳಿದಂತೆ) ಐದು ದಿನ ಕಳೆದಿತ್ತು.

ಅಂಚೆ ಚೀಟಿ, ನಾಣ್ಯ, ಕನ್ನಡ ನಿಯತಕಾಲಿಕ ಹವ್ಯಾಸಿ ಸಂಗ್ರಹಕಾರ ಸಾಗರ ತಾಲೂಕಿನ ಅನಿಲಿಕೊಪ್ಪದ ನಿವಾಸಿ ನಿವೃತ್ತ ಪ್ರೌಢಶಾಲಾ ಮುಖ್ಯೋಪಾದ್ಯಾಯ ಶ್ರೀ. ಮೋಹನ್ ಜಿ. ಹೆಗ್ಡೆ, ಬಂದಗದ್ದೆ ಅವರ ಪತ್ರಿಕೆಯ ಸಂಗ್ರಹದಲ್ಲಿ ಲಭ್ಯವಾದ ಮಂಗಳೂರಿನಿಂದ ಪ್ರಕಟಣೆಯಾಗುತಿದ್ದ ಕನ್ನಡ ದಿನಪತ್ರಿಕೆ ವಾರ್ತಾಲೋಕದ ದಿನಾಂಕ 11 ಜನವರಿ 1964ರ ಆವೃತ್ತಿ.

 ಆ ಐದು ದಿನಗಳಲ್ಲಿ ಯಾವಾಗಲೋ ಒಂದು ದಿನ – ಯಾವ ಕ್ಷೇಮ ಸಮಾಚಾರವನ್ನೂ ತಿಳಿಸದೆ ಕೆಲವು ತಿಂಗಳುಗಳನ್ನೇ ಕಳೆದಿದ್ದ – ಗಂಡನನ್ನು ವಿಚಾರಿಸಿಕೊಳ್ಳಲು ಕಚೇರಿಗೆ ಬಂದ ಪತ್ನಿಯೂ ನನ್ನ ಪಾಡನ್ನು ನೋಡಿದಳು. ಡಾ.ಹೆಗ್ಡೆಯವರು ‘ನೋಡಿಕೊಳ್ಳೂವವರ ವ್ಯವಸ್ಥೆ ಮಾಡಿದರೆ ತಮ್ಮ ಚಿಕಿತ್ಸಾಲಯದ ಮಾಳಿಗೆಯಲ್ಲೇ ರೋಗಿಯನ್ನು ಉಳಿಸಿಕೊಳ್ಳುವೆನೆಂದಾಗ, ಸ್ವತಃ ದಾದಿಯಾಗಲೂ ಒಪ್ಪಿದಳು.

ಜಾಹೀರಾತು

 ಹೆಚ್ಚುಕಡಿಮೆ 45 ದಿನಗಳನ್ನು ಡಾ.ಹೆಗ್ಡೆಯವರ ಆಶ್ರಯದಲ್ಲಿ ಕಳೆದು -ತನ್ಮಧ್ಯೆ ಗೋವಿಂದರಾಯರ ಸಹಾಯದಿಂದ ದೊರೆತಿದ್ದ ಬಾಡಿಗೆ ಮನೆಯಲ್ಲಿ ವಸತಿ ಹೂಡಿ, ಒಂದು ವಾರದ ಅತ್ಯಗತ್ಯ ವಿಶ್ರಾಂತಿ ಅನುಭವಿಸುತ್ತಿದ್ದೆ. ಆಗ, ಹಲವಾರು ಕಾರಣಗಳಿಂದ ಕನ್ನಡವಾಣಿಯ ವ್ಯವಹಾರ-ವ್ಯವಸ್ಥೆಗಳಲ್ಲಿ ತುಂಬಾ ಬದಲಾವಣೆಗಳಾಗಿವೆ, ನನ್ನ ಮೇಲಿದ್ದ ಮಮತೆ-ಅನುಕಂಪಗಳೂ ಕುಗ್ಗಿವೆ ಎಂಬ ಸುಳಿವು ಸಿಕ್ಕಿತು. ಆದರೂ ನಿಜಸ್ಥಿತಿ ತಿಳಿಯುವುದಿಲ್ಲ. ನೋಡಿಯೇ ತಿಳಿಯಬೇಕು ಎಂದುಕೊಂಡು, ವಾರ ಕಳೆದ ಕೂಡಲೇ ಕೆಲಸಕ್ಕೆ ಹಾಜರಾದೆ.

  ಕೇಳಿದ ಸುದ್ದಿ ನಿಜವಾಗಿತ್ತು.

 ನಾನು ಮರಳಿ ಕೆಲಸಕ್ಕೆ ಹಾಜರಿ ಹಾಕುವ ಹೊತ್ತಿಗೆ-

ಜಾಹೀರಾತು

 ಪತ್ರಿಕೆಯ ಮುದ್ರಣಾಲಯ ಬದಲಿತ್ತು. ಕಚೇರಿಯೂ ಆ ಮುದ್ರಣಾಲಯಕ್ಕೆ ವರ್ಗಾವಣೆಯಾಗಿತ್ತು. ಮುದ್ರಣಾಲಯದ ಕಾರ್ಯಭಾಗಕ್ಕಷ್ಟೇ ನನ್ನನ್ನು ಮೀಸಲಾಗಿಡುವ ನಿರ್ಧಾರವೂ ಆಗಿತ್ತು. (ಪತ್ರಿಕೆಯ ಇತರ ವಿಭಾಗಗಳಲ್ಲಿನ ಕೆಲಸಗಳಿಗೆ ನನ್ನ ಅಗತ್ಯವಿಲ್ಲವೆಂಬ ಪರ್ಯಾಯ ಸೂಚನೆಯೂ ಅದರಲ್ಲಿ ಅಡಕವಾಗಿತ್ತು.)

 ಈ ವಿದ್ಯಮಾನವನ್ನು ನಾನು ನಿರೀಕ್ಷಿಸಿಯೇ ಇದ್ದೆ. ಆದ್ದರಿಂದ ಅಷ್ಟೊಂದು ‘ತಲೆಬಿಸಿ’ ಆಗಲಿಲ್ಲ. ನನ್ನನ್ನು ಅತೀವ ಮಾನಸಿಕ ಒತ್ತಡಕ್ಕೆ ಒಳಮಾಡಿದ ವಿಚಾರಗಳು ಬೇರೆಯೇ ಇದ್ದವು.

 ‘ನಾನು ಕಾಯಿಲೆ ಬಿದ್ದಿದ್ದ ಅವಧಿಯ ‘ವೇತನ’ ಕೊಡಲಾಗುವುದಿಲ್ಲ. ಅಲ್ಲದೆ, ನನ್ನ ಚಿಕಿತ್ಸೆಗಾಗಿ ವೆಚ್ಚವಾದ ಹಣವನ್ನು ಮುಂದಿನ ವೇತನದಲ್ಲಿ ಕಡಿತ ಮಾಡಿ ಕಂತಿನಲ್ಲಿ ವಸೂಲು ಮಾಡಲಾಗುವುದು’ ಎಂಬ ಒಂದು ಸೂಚನೆಯಿಂದ ಒತ್ತಡ ಪ್ರಾರಂಭವಾಯಿತು.

ಜಾಹೀರಾತು

 ಅದಕ್ಕೆ, ಪ್ರಸಾರ ಸಂಖ್ಯೆಯಲ್ಲಿ ಆಗಿದ್ದ ಗಣನೀಯ ಇಳಿತ ಮತ್ತು ಲಿಮಿಟೆಡ್ ಕಂಪನಿಯ ಪಾಲು ಬಂಡವಾಳಕ್ಕಾಗಿ ಸಂಗ್ರಹಿಸಿ ಪ್ರತ್ಯೇಕ ಖಾತೆಯಲ್ಲಿ ಉಳಿಸಿದ್ದ ಹಣವೂ ಸೇರಿದಂತೆ ಕೂಡಿಟ್ಟಿದ್ದ ಸಂಪೂರ್ಣ ನಿಧಿ ‘ಕರಗಿ ಹೋದ’ ಸುದ್ದಿ ಇವುಗಳೂ ಸೇರಿ ಒತ್ತಡವನ್ನು ಹೆಚ್ಚಿಸಿದವು.

 ಅವೆಲ್ಲವನ್ನೂ ಸಹಿಸಿಕೊಂಡು, ಕೆಲವು ತಿಂಗಳನ್ನಾದರೂ ಕಳೆಯುವುದು ನನಗೆ ಅನಿವಾರ್ಯವಾಗಿತ್ತು. ಆದರೆ, ಒದ್ದಾಟಗಳೆಲ್ಲವೂ ವಿಫಲವೆನಿಸುವ ಸ್ಥಿತಿಗೆ ನಾನು ಮುಟ್ಟಲು ಮೂರೇ ತಿಂಗಳುಗಳು ಸಾಕಾದವು.

 ಕನ್ನಡವಾಣಿಯ ಸಂಬಂಧ ಕಡಿದುಕೊಳ್ಳುವ ಮುನ್ನಾದಿನ -“ನಾನಿಲ್ಲಿ ಕೆಲಸ ಮುಂದುವರಿಸಲಾರೆ. ನನ್ನಿಂದ ಸಂಸ್ಥೆಗೆ ಸಲ್ಲಬೇಕಾಗಿರುವ ಬಾಕಿಯನ್ನು ಮನ್ನಾ ಮಾಡಿ” ಎಂದು ಸಲ್ದಾನರಲ್ಲಿ ತಿಳಿಸಿದೆ. ಮತ್ತೆ ಒಂದು ವಾರ ಮನೆಯಲ್ಲೆ ಉಳಿದು ಮುಂದಿನ ದಾರಿ ಹುಡುಕತೊಡಗಿದೆ.

ಜಾಹೀರಾತು

 ಸಮಾಲೋಚನೆಗೆ ಯಾರೂ ಇರಲಿಲ್ಲ. ಸ್ವಯಂ ನಿರ್ಧಾರವೇ ಉಳಿದಿದ್ದ ದಾರಿ. ಪತ್ರಿಕೋದ್ಯಮವಲ್ಲದ ಬೇರಾವ ವೃತ್ತಿಯನ್ನೂ ಕೈಗೊಳ್ಳಲಾರದ ಹಂತಕ್ಕೆ ಬಂದಿದ್ದ ಕಾರಣ –

 ಹೇಗಾದರೂ ಸರಿ. ಸಣ್ಣ ಪ್ರಮಾಣದ ‘ಸಂಜೆದೈನಿಕ’ವೊಂದನ್ನು ಹೊರಡಿಸಿಯೇ ಬದುಕಬೇಕಷ್ಟೇ ಎಂದು ತೀರ್ಮಾನಿಸಿದೆ.

 ಕೂಡಲೇ, ಆ ಮೊದಲು ಒಮ್ಮೆ ಅನುಮತಿ ದೊರಕಿಸಿಕೊಂಡಿದ್ದ ‘ವಾರ್ತಾಲೋಕ’ದ ಹೆಸರಿಗೆ ಸಂಬಂಧಿಸಿದ ಕಡತಗಳಿಗೆ ಪುನರುಜ್ಜೀವನ ಕೊಡುವಂತೆ ಪ್ರಾರ್ಥಿಸುವ ಪತ್ರವನ್ನು ಬರೆದು ಪ್ರೆಸ್ ರಿಜಿಸ್ಟಾರಿಗೆ ಕಳುಹಿಸಿದೆ.

ಜಾಹೀರಾತು

 ಬರೇ ಹದಿನಾರು ದಿನಗಳಲ್ಲಿ ರಿಜಿಸ್ಟಾರರಿಂದ ಅನುಮತಿ ಬಂದಿತು. ಮತ್ತೊಂದು ವಾರದಲ್ಲಿ ವಾರ್ತಾಲೋಕ ದೈನಿಕ ಪ್ರಕಟಣೆಯೂ ಪ್ರಾರಂಭವಾಯಿತು.

 ವಾರ್ತಾಲೋಕದ ಆರಂಭ ದಿಸೆಯಲ್ಲಿ ಅದಕ್ಕಿದ್ದ ‘ಆರ್ಥಿಕ ಬಲ’ (ಹಿತೈಷಿಗಳಿಂದ ಬೇಡಿ ಸಂಗ್ರಹಿಸಿದ್ದ) 236ರೂ.ಗಳು ಮಾತ್ರ. ದೈನಂದಿನ ವೆಚ್ಚಗಳಿಗೆ ಬೇಕಾಗುವಷ್ಟು ಹಣದ ಸಂಗ್ರಹವಿಲ್ಲದೆ ಹೋದರೆ, ಪಡುವ ಶ್ರಮವೂ ಕಠಿಣವಾಗುತ್ತದೆ ಎಂಬ ಅರಿವು ಇತ್ತು. ಆದರೆ ಬೇರೆ ಉಪಾಯವಿರಲಿಲ್ಲ.

 ಮೊದಲಿಗೆ ಒಬ್ಬಿಬ್ಬರು ಮಿತ್ರರು ಸುದ್ದಿ ಒದಗಿಸುವ ಮತ್ತು ಸಂಪಾದಕೀಯ ಸಹಾಯ ನೀಡುವ ಅಂಶಕಾಲಿಕ(ಪಾರ್ಟ್ ಟೈಮ್) ನೆರವನ್ನು ಒದಗಿಸುತ್ತಿದ್ದರು. ಅದು, (ಅವರ ವೈಯಕ್ತಿಕ ತಾಪತ್ರಯವೂ ಸೇರಿದಂತೆ) ಹಲವಾರು ಕಾರಣಗಳಿಂದ ಕ್ರಮೇಣ ನಿಂತುಹೋಯಿತು.

ಜಾಹೀರಾತು

 ಪತ್ರಿಕೆಯನ್ನು ಮುದ್ರಿಸುತ್ತಿದ್ದವರಿಗೆ ಕೊಡಬೇಕಾಗಿದ್ದ ಹಣದ ಬಾಕಿ ಹೆಚ್ಚುತ್ತಾ ಹೋಗುತ್ತಿದ್ದ ಸಮಯದಲ್ಲಿ ಸ್ನೇಹಿತರೊಬ್ಬರು ಮುದ್ರಣಾಲಯ ಪ್ರಾರಂಭಿಸುತ್ತಿದ್ದೇನೆ. ದಿನ ಬಾಡಿಗೆ ಆಧಾರದಲ್ಲಿ ಅದನ್ನು ನಡೆಸುತ್ತೀಯಾ? ಎಂದಾಗ ಆ ಕೂಡಲೆ ಒಪ್ಪಿಕೊಂಡೆ.

 ಬಹುವೇಗದಲ್ಲಿ ವ್ಯವಸ್ಥೆ ಮಾಡಿದ ಕಾರಣ, ಅಚ್ಚುಕೂಟವೂ ಪ್ರಾರಂಭವಾಯಿತು. ವಾರ್ತಾಲೋಕದ ಮುದ್ರಣಕ್ಕೂ ಅಲ್ಲಿ ವ್ಯವಸ್ಥೆಯಾಯಿತು.

 ಆ ಚಟುವಟಿಕೆಗಳಲ್ಲಿ ನಿರತನಾಗಿದ್ದಾಗ, ವ್ಯವಹಾರದಲ್ಲಿನ ವಾಣಿಜ್ಯಿಕ ದಕ್ಷತೆ ನನ್ನಲ್ಲಿ ಇದೆಯೆ ? ಎಂದು ವಿಮರ್ಶಿಸುವ ಅವಕಾಶವೇ ದೊರೆಯಲಿಲ್ಲ. ಪತ್ರಿಕೆಯು ಎಲ್ಲಾ ರೀತಿಯಲ್ಲೂ ಆಗ ಇದ್ದ ಇನ್ನೊಂದು ಸಂಜೆ ದೈನಿಕದೊಂದಿಗೆ ಸ್ಪರ್ಧಿಸಬೇಕಾಗಿತ್ತು. ಸ್ಪರ್ಧೆಯ ದಾರಿಗಳನ್ನು ಹುಡುಕುವುದರಲ್ಲೇ ಸಮಯ ಮುಗಿಯುತ್ತಿತ್ತು.

ಜಾಹೀರಾತು

 ಅಂಥ ಸಂದರ್ಭದಲ್ಲೂ, ಒಂದೆರಡು ಸಣ್ಣ ಪ್ರಮಾಣದ ವಿಶೇಷ ಪುರವಣಿಗೆಗಳನ್ನೂ ಪ್ರಕಟಿಸಿ ಪತ್ರಿಕೆ ಹೆಸರನ್ನು ಓದುಗರು ಗುರುತಿಸುವಂತೆ ಮಾಡಿದ್ದೆ.

 ಪ್ರಧಾನಿ ನೆಹರೂರವರ ನಿಧನದ ಸುದ್ದಿಯನ್ನು ( ಒಂದೆರಡೇ ವಾಕ್ಯಗಳಲ್ಲಿ ಆದರೂ ಸಮಯಕ್ಕೆ ಸರಿಯಾಗಿ ) ಮೊತ್ತಮೊದಲು ಮಂಗಳೂರಿನಲ್ಲಿ ಪ್ರಕಟಿಸಲು ಸಾಧ್ಯವಾದುದಕ್ಕೆ ಹೆಮ್ಮೆಪಟ್ಟಿದ್ದೆ. (ಅದರಿಂದ ಆರ್ಥಿಕ ಲಾಭವೇನೂ ಆಗಿರಲಿಲ್ಲ ಎಂಬ ಸತ್ಯವನ್ನು ಒತ್ತಟ್ಟಿಗಿರಿಸಿದ್ದೆ).

 ಮೊದಲೇ ಹೇಳಿದಂತೆ ನನ್ನ ವ್ಯವಹಾರದ ಪರಿಣತಿಯ ಲೋಪ, ಮುಂದೊಂದು ದಿನ ತನ್ನನ್ನು ನಡುದಾರಿಯಲ್ಲಿ ಕೆಡವಿತು. ಮುದ್ರಣಾಲಯವನ್ನು ನನಗೆ ವಹಿಸಿಕೊಟ್ಟಿದ್ದ ನನ್ನ ಸ್ನೇಹಿತರು, ಮುನ್ಸೂನೆ  ಕೂಡಾ ಕೊಡದೆ ಅದನ್ನು ಬೇರೊಬ್ಬರಿಗೆ ಮಾರಿದರು. ಮುದ್ರಣ ಪರಿಕರಗಳೆಲ್ಲವನ್ನೂ ಮಾರಿದವರಲ್ಲಿಗೆ ಹಠಾತ್ತಾಗಿ ಸಾಗಿಸಿದರು.

ಜಾಹೀರಾತು

 ಖರೀದಿದಾರರು ವಾರ್ತಾಲೋಕವನ್ನು ತಮ್ಮಲ್ಲಿ ಮುದ್ರಸಲು ಒದಗಿಸಿದ ತಾತ್ಕಾಲಿಕ ಅನುಕೂಲ ಯಾವ ಪ್ರಯೋಜನಕ್ಕೂ ಬಾರದಾಗಿ ಇನ್ನೊಮ್ಮೆ ಕವಲುದಾರಿಗೆ ನಾನು ಬಂದು ನಿಲ್ಲುವಂತಾಯಿತು.

 ಬೇರಾವ ಕಾರಣಕ್ಕಲ್ಲವಾದರೂ, ಮನೆಯಲ್ಲಿದ್ದ ಮೂರು ಜೀವಗಳ ಹೊಟ್ಟೆ ತುಂಬಿಸಲು ಮಾಡಿದ್ದ ಒಂದು ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ಪತ್ರಿಕೆ ನಡೆಸಲೇಬೇಕಾಗಿತ್ತು.

 (ವಾರ್ತಾಲೋಕದ 130 ಪ್ರತಿಗಳನ್ನು ತನ್ನದೇ ಒಂದು ಲೈನಿಗೆ ಹಂಚುವ ಮತ್ತು ಅದರಿಂದ ಪ್ರತಿ ತಿಂಗಳ, 26 ದಿನಗಳಲ್ಲಿ ದಿನವಹೀ ಬರುವ ಮೂರು ರೂ. ತೊಂಭತ್ತು ಪೈಸೆಗಳನ್ನು ವಸೂಲು ಮಾಡಿ ಮನೆವಾರ್ತೆ ನಡೆಸುವ ಹೊಣೆಯನ್ನು ನನ್ನ ಪತ್ನಿ ವಹಿಸಿಕೊಂಡಿದ್ದಳು.)

ಜಾಹೀರಾತು

 ಆ ಕಾರಣಕ್ಕಾದರೂ ಪತ್ರಿಕೆ ನಡೆಸಬೇಕು. ಎಂತಹ ದುಸ್ಥಿತಿಯೇ ಆಗಲಿ, ಸಂಪೂರ್ಣ ಸ್ವಂತದ್ದೆನಿಸುವ ಮುದ್ರಣವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ನಿರ್ಧಾರ ತಳೆದೆ.   

 

(ಮುಂದಿನ ಭಾಗದಲ್ಲಿ)

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 23: ಇನ್ನೊಮ್ಮೆ ಕವಲುದಾರಿಗೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*