- ಸಜಿಪಮೂಡ ಗ್ರಾಪಂನಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟನೆ
ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕೆ ಅಕ್ಷರಜ್ಞಾನ ಅವಶ್ಯ. ಹುಟ್ಟಿಸಿದ ಮಕ್ಕಳಿಗೆ ಶಿಕ್ಷಣ ನೀಡುವುದು ತಂದೆತಾಯಿಯ ಆದ್ಯ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾ ಸಾಕ್ಷರತಾ ಸಮಿತಿ, ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ, ಸಜಿಪಮೂಡ ಗ್ರಾಮ ಪಂಚಾಯತ್ ಹಾಗೂ ಜನ ಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರಗಳ ಸಹಭಾಗಿತದಲ್ಲಿ ಸಜಿಪಮೂಡದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಸಭಾಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ-೨೦೧೭ ಉದ್ಘಾಟಿಸಿ ಮಾತನಾಡಿದರು.
ಎಷ್ಟೇ ಬಡತನ ಇದ್ದರೂ ಶಿಕ್ಷಣಜ್ಞಾನ ಪಡೆಯುವುದು ಅವಶ್ಯ ಎಂದ ರಮಾನಾಥ ರೈ, ಇಂದು ಕುಡಿತವನ್ನು ಬಿಟ್ಟು ಶಿಕ್ಷಣದ ಅರಿವು ಪಡೆಯುವತ್ತ ನಮ್ಮ ಗಮನವಿರಬೇಕು ಎಂದರು.
ನೀರಿಗಾಗಿ ಜಗಳ ಬೇಡ:
ನೀರಿಗಾಗಿ ಇಂದು ಜಿಲ್ಲೆ ಜಿಲ್ಲೆಗಳ ನಡುವೆ ಜಗಳವಾಡುವ ಪರಿಸ್ಥಿತಿ ಬಂದಿದೆ. ಪಶ್ಚಿಮವಾಹಿನಿ ಯೋಜನೆಗಾಗಿ ಜಿಲ್ಲೆಗೆ ೨೦೦ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ನದಿಗಳು ಇರುವಲ್ಲಿ ಅಣೆಕಟ್ಟು ರಚಿಸಿ ನೀರನ್ನು ಹಿಡಿದಿಟ್ಟು ಅಂತರ್ಜಲ ವೃದ್ಧಿಸುವ ಕಾರ್ಯ ಇದರಿಂದ ನಡೆಯುತ್ತದೆ. ಹಂತಹಂತವಾಗಿ ಈ ಯೋಜನೆ ಜಾರಿಗೆ ಬರಲಿದೆ. ನಾವು ಅಂತರ್ಜಲ ವೃದ್ಧಿಯತ್ತ ಗಮನಹರಿಸಬೇಕಾದ ಕಾಲ ಬಂದಿದೆ. ಮಳೆಕೊಯ್ಲು ಕಡೆಗೆ ಗಮನಹರಿಸೋಣ ಎಂದು ರೈ ಹೇಳಿದರು.
ಅಕ್ಷರ ಕಲಿತವರಿಗಿದೆ ಸಾಮಾಜಿಕ ಜವಾಬ್ದಾರಿ:
ಅಕ್ಷರ ಕಲಿತವರಿಗೆ ಸಾಮಾಜಿಕ ಜವಾಬ್ದಾರಿ ಇದೆ ಎಂದು ಹೇಳಿದ ಜಿ.ಪಂ.ಮುಖ್ಯಕಾರ್ಯನಿರ್ವಹಣಾಕಾರಿ ಡಾ.ಎಂ.ಆರ್.ರವಿ, ನಮ್ಮ ಸಮಾಜದಲ್ಲಿ ಇನ್ನೂ ಶಿಕ್ಷಣದಿಂದ ವಂಚಿತರಾದ ಅನಕ್ಷರಸ್ತರಿದ್ದಾರೆ, ಅವರನ್ನೂ ಎಲ್ಲರ ಜೊತೆ ಮುಖ್ಯವಾಹಿನಿಗೆ ಕರೆದೊಯ್ಯುವ ಕಾರ್ಯ ಆಗಬೇಕಾಗಿದೆ. ಶಿಕ್ಷಣದಿಂದ ವಂಚಿತರಾದವರು ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಾರೆ, ನೋವು ಅನುಭವಿಸುತ್ತಿದ್ದಾರೆ ಇಂತಹಾ ವಿಚಾರಗಳ ಬಗ್ಗೆ ನಾವೆಲ್ಲರೂ ಜಾಗೃತರಾಗಿ ಸುಶಿಕ್ಷಿತ ಸಮಾಜ ನಿರ್ಮಾಣದ ಸಂಕಲ್ಪ ತೊಡಬೇಕಾಗಿದೆ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ತಾ.ಪಂ.ಸದಸ್ಯರಾದ ಸಂಜೀವ ಪೂಜಾರಿ, ಜಿ.ಪಂ.ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕಾರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ರೋಶನಿ ನಿಲಯದ ಪ್ರೊ.ವಿನಿತಾ, ಸಜಿಪ ಮೂಡ ಗ್ರಾ.ಪಂ.ಅಧ್ಯಕ್ಷ ಗಣಪತಿ ಭಟ್, ಗ್ರಾ.ಪಂ.ಅಭಿವೃದ್ಧಿ ಅಕಾರಿ ನಿರ್ಮಲ ಉಪಸ್ಥಿತರಿದ್ದರು.
ಜಿಲ್ಲಾ ವಯಸ್ಕರ ಶಿಕ್ಷಣಾಕಾರಿ ಸುಧಾಕರ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಭಾಗೀರಥಿ ರೈ ಸ್ವಾಗತಿಸಿದರು. ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ವೇಳೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರೊ. ಜಗದೀಶ ಬಾಳ, ಪ್ರೇಮಾ, ಯಶೋಧಾ, ಜೋಸೆಫ್, ಅಬೂಬಕ್ಕರ್ ಸಜಿಪ, ಗಣೇಶ್, ಡೇವಿಡ್, ಎ.ಪಿ.ಸದಾಶಿವ ಅವರನ್ನು ಗೌರವಿಸಲಾಯಿತು. ಪ್ರೇರಣಾ ಗೀತೆಯ ಗುಚ್ಛ ಅಕ್ಷರದೀಪವನ್ನು ಸಚಿವರು ಬಿಡುಗಡೆಗೊಳಿಸಿದರು.
ಏಳು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಸಜಿಪಮೂಡ ಗ್ರಾಪಂ ವ್ಯಾಪ್ತಿಯಲ್ಲಿ ೩೫೨ ಮಂದಿ ಅಕ್ಷರವಂಚಿತರು ಇರುವ ಕುರಿತು ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂತು. ಇವರನ್ನು ಗುರುತಿಸಿ ಅವರನ್ನು ಸಾಕ್ಷರರನ್ನಾಗಿ ಮಾಡುವ ಜವಾಬ್ದಾರಿಯನ್ನು ಇಲಾಖೆ ವಹಿಸಿದ್ದು, ಇದಕ್ಕೆ ಗ್ರಾಪಂ ಸಹಿತ ನಾನಾ ಸಂಘ, ಸಂಸ್ಥೆಗಳು ಎನ್ನೆನ್ನೆಸ್ ಸಾಥ್ ನೀಡಿವೆ.
Be the first to comment on "ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕೆ ಅಕ್ಷರಜ್ಞಾನ ಅವಶ್ಯ: ರಮಾನಾಥ ರೈ"