ತನ್ನ ಸದಸ್ಯ ಪತ್ರಕರ್ತ ಇಂತಿಯಾಝ್ ಅವರನ್ನು ಪೊಲೀಸರು ಬಂಧಿಸಿರುವುದನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಕ್ಷೇಪಿಸಿದ್ದು, ಈ ಕುರಿತು ಗೃಹಸಚಿವರಿಗೆ ಬಂಟ್ವಾಳ ತಹಶೀಲ್ದಾರ್ ಮೂಲಕ ಮನವಿ ಅರ್ಪಿಸಿದೆ.
ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ನೇತೃತ್ವದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಶುಕ್ರವಾರ ಮಧ್ಯಾಹ್ನ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮೂಲಕ ಮನವಿ ಅರ್ಪಿಸಿದರು. ಪ್ರಕರಣಗಳನ್ನು ಪರಿಶೀಲಿಸಿ ಹಿಂಪೆಯುವಂತೆ ಸಂಘ ವಿನಂತಿಸಿದ್ದು, ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಮನವಿ ಮಾಡಿದ್ದು, ಬಂಧಿಸಿರುವುದು ಖಂಡನೀಯ ಎಂದಿದೆ. ಅದೇ ರೀತಿ ಖಾಸಗಿ ಚಾನೆಲ್ ವರದಿಗಾರರ ಮೇಲೆ ವರದಿಗೆ ತೆರಳಿದ್ದ ಸಂದರ್ಭ ಹಲ್ಲೆ ನಡೆಸಿರುವುದನ್ನೂ ಖಂಡಿಸಿದ್ದು, ರಕ್ಷಣೆ ಒದಗಿಸುವಂತೆ ಮುಖ್ಯಮಂತ್ರಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಒತ್ತಾಯಿಸಿದ್ದಾರೆ.
ಕ್ಯಾಂಪಸ್ ಫ್ರಂಟ್ ಖಂಡನೆ: ಪತ್ರಕರ್ತರ ಬಂಧನವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ. ಇದು ಪತ್ರಿಕಾ ಸ್ವಾತಂತ್ರ್ಯ ದಮನ ಕೃತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟದ ಕುರಿತು ಚಿಂತನೆ ನಡೆಸಲಾಗುವುದು ಎಂದು ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷರಾದ ನಬೀಲ್ ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Be the first to comment on "ಪತ್ರಕರ್ತರಿಗೆ ರಕ್ಷಣೆ ಒದಗಿಸುವಂತೆ ಮನವಿ"