- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಕಲಗಚ್ಚು ಅಥವಾ ಅಕ್ಕಿ ತೊಳೆದ ನೀರನ್ನು ಎಲ್ಲರೂ ಬಿಸಾಡುವವರೇ. ಆದರೆ ಇದು ಅತ್ಯಂತ ಸತ್ವಭಾರಿತವಾಗಿದ್ದು ಮನುಷ್ಯನ ಶರೀರಕ್ಕೂ ಸಹ ಪುಷ್ಟಿದಾಯಕವಾಗಿದೆ ಮತ್ತು ಹಲವಾರು ಸಂದರ್ಭಗಳಲ್ಲಿ ವ್ಯಾಧಿಶಾಮಕವಾಗಿಯೂ ಕೆಲಸಮಾಡುತ್ತದೆ.
ತಯಾರಿಸುವ ವಿಧಾನ :
ಮೊದಲಿಗೆ ಅಕ್ಕಿಯಲ್ಲಿರುವ ಧೂಳು, ಕಸ,ಮಣ್ಣು ಇತ್ಯಾದಿಗಳನ್ನು ಹೋಗಲಾಡಿಸಲು ನೀರಿಗೆ ಹಾಕಿ ಕದಡಿ ನೀರನ್ನು ಚೆಲ್ಲಬೇಕು. ನಂತರ ಅಕ್ಕಿಯ ಪ್ರಮಾಣದ 8 ಪಟ್ಟು ಶುದ್ದ ನೀರನ್ನು ಹಾಕಿ ಅಕ್ಕಿಯನ್ನು ಚೆನ್ನಾಗಿ ಹಿಸುಕಬೇಕು. ನಂತರ ನೀರನ್ನು ಬೇರೆ ಪಾತ್ರೆಗೆ ಹಾಕಬೇಕು .ಈ ನೀರಿನಲ್ಲಿ ಅಕ್ಕಿಯಲ್ಲಿರುವ ಬಹುಪಾಲು ಸತ್ವಗಳಾದ ವಿಟಮಿನ್ಗಳು ,ಜಿಂಕ್ ,ಕಬ್ಬಿಣಾಂಶ ,ಪೊಟ್ಯಾಸಿಯಂ ,ಮೆಗ್ನೀಷಿಯಂ ಇತ್ಯಾದಿಗಳು ಅಡಕವಾಗಿವೆ.
- ವಾಂತಿ ಮತ್ತು ಭೇದಿಯ ಸಮಸ್ಯೆಯಿಂದ ಬಳಲುತ್ತಿರುವವರು ಕಲಗಚ್ಚಿಗೆ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಶರೀರಕ್ಕೆ ಬಲ ಮತ್ತು ಉತ್ಸಾಹವನ್ನು ನೀಡುತ್ತದೆ.
- ಇದು ಗರ್ಭಿಣಿಯರ ವಾಂತಿಯನ್ನೂ ಸಹ ಕಡಿಮೆ ಮಾಡುತ್ತದೆ.
- ಶರೀರದಲ್ಲಿ ಕುರ ಅಥವಾ ಬೊಕ್ಕೆ ಮೂಡಿದಾಗ ವಿಭೂತಿಯನ್ನು ಕಲಗಚ್ಚಿನಲ್ಲಿ ಕಲಸಿ ಲೇಪಿಸಬೇಕು
- ಕಲಗಚ್ಚಿಗೆ ಹಾಲು ಸೇರಿಸಿ ಕುಡಿದರೆ ಬಾಣಂತಿಯರಲ್ಲಿ ಎದೆ ಹಾಲಿನ ಉತ್ಪತ್ತಿ ಅಧಿಕವಾಗುತ್ತದೆ.
- ಇದು ಬೇಗನೆ ಜೀರ್ಣವಾಗುವ ಕಾರಣ ಮಕ್ಕಳಿಗೆ ದಿನಾ ಕುಡಿಸುವುದರಿಂದ ಮಕ್ಕಳ ಬೆಳವಣಿಗೆ ಸರಿಯಾಗಿ ಆಗುತ್ತದೆ ಮತ್ತು ಮಾಂಸಖಂಡಗಳು ಪುಷ್ಟಿಯಾಗುತ್ತವೆ.
- ಪ್ರತಿನಿತ್ಯ ತಲೆಕೂದಲನ್ನು ಕಲಗಚ್ಚಿನಲ್ಲಿ ತೊಳೆಯುವುದರಿಂದ ಕೂದಲಿನ ಬುಡ ದೃಢವಾಗುತ್ತದೆ ಮತ್ತು ಕೂದಲು ನುಣುಪಾಗುತ್ತದೆ
- ಕಲಗಚ್ಚಿಗೆ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಮಹಿಳೆಯರಲ್ಲಿನ ಕೆಲವು ತರಹದ ಬಿಳಿಸೆರಗು ವಾಸಿಯಾಗುತ್ತದೆ. .
- ಅಕ್ಕಿತೊಳೆದ ನೀರು ಶರೀರದ ತಾಪಮಾನವನ್ನು ಮತ್ತು ನೀರಿನ ಅಂಶವನ್ನು ಸರಿದೂಗಿಸುವ ಕಾರಣ ಜ್ವರದಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪಾನೀಯವಾಗಿದೆ.
- ನಿಯಮಿತವಾಗಿ ಕಲಗಚ್ಚನ್ನು ಕುಡಿಯುವುದರಿಂದ ಮಹಿಳೆಯರಲ್ಲಿ ಮುಟ್ಟಿನ ಪ್ರಕ್ರಿಯೆಯು ಸರಿಯಾಗಿ ಆಗುತ್ತದೆ.
- ಕಲಗಚ್ಚಿನಲ್ಲಿ ಮುಖ ತೊಳೆಯುವುದರಿಂದ ಮುಖದ ಕಾಂತಿ ಅಧಿಕವಾಗಿ ಚರ್ಮದ ಸುಕ್ಕು ಕಡಿಮೆಯಾಗುತ್ತದೆ.
- ಕಲಗಚ್ಚಿನ ಸೇವನೆಯಿಂದ ಮಲಬದ್ಧತೆಯು ನಿವಾರಣೆಯಾಗುತ್ತದೆ.
- ಬೆಂಕಿಯ ದಗೆಯಿಂದ(sun burn ) ಚರ್ಮವನ್ನು ರಕ್ಷಿಸಲು ಕಲಗಚ್ಚಿಗೆ ಬಟ್ಟೆಯನ್ನು ಮುಳುಗಿಸಿ ಶರೀರದ ಮೇಲೆ ಉಜ್ಜಬೇಕು.
- ಕಲಗಚ್ಚಿಗೆ ಕಲ್ಲುಸಕ್ಕರೆ ಹಾಕಿ ಕುಡಿದರೆ ಪಿತ್ತ ಸಂಬಂಧಿ ಎದೆಉರಿ,ವಾಕರಿಕೆ,ತಲೆನೋವು ಕಡಿಮೆಯಾಗುತ್ತದೆ.
- ಕೆಲವೊಂದು ಸಂಶೋಧನೆಗಳ ಪ್ರಕಾರ ಕಲಗಚ್ಚು ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಹಕಾರಿಯಾಗಿದೆ.
Be the first to comment on "ಕಲಗಚ್ಚು ಎಷ್ಟು ಸತ್ವಭರಿತ ಗೊತ್ತೇ?"