ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿರುವ ಶ್ರೀ ಮೂಕಾಂಬಿಕಾ ದೇವಾಲಯ ವತಿಯಿಂದ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ದೇವಿನಗರದಲ್ಲಿರುವ ಪ್ರೌಢಶಾಲೆಗಳನ್ನು ದತ್ತು ತೆಗೆದುಕೊಂಡು ನೆರವು ನೀಡುತ್ತಿರುವ ಆದೇಶವನ್ನು ಸರಕಾರ ಹಿಂಪಡೆದಿದ್ದು ಈಗ ವಿವಾದಕ್ಕೆ ಕಾರಣವಾಗಿದ್ದು, ಇದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೇಡಿನ ರಾಜಕಾರಣದ ಭಾಗ ಎಂದು ವಿದ್ಯಾಕೇಂದ್ರಗಳ ಮುಖ್ಯಸ್ಥ ಕಲ್ಲಡ್ಕ ಡಾ. ಪ್ರಭಾಕರ ಭಟ್ ಆರೋಪಿಸಿದ್ದಾರೆ.
ಮಂಗಳವಾರ ಶಿಕ್ಷಣ ಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವೇನಾದರೂ ಹೋರಾಟ ಮಾಡುವಿರೆಂದಾದರೆ ನೇರ ನನ್ನೊಂದಿಗೆ ಹೋರಾಡಿ, ಮಕ್ಕಳ ಬಳಿ ಅಲ್ಲ. ಇಲ್ಲಿ ಬಡವರಿದ್ದಾರೆ, ದುರ್ಬಲರಿದ್ದಾರೆ. ಮಕ್ಕಳೊಂದಿಗೆ ನೀವು ಹೋರಾಟ ಮಾಡುತ್ತೀರಾ, ಅದು ಹೇಡಿತನ. ಧೈರ್ಯ ಇದ್ದರೆ, ನಂಬಿಕೆ ಇದ್ದರೆ ಯಾರೊಂದಿಗೆ ಹೋರಾಟ ಮಾಡಬೇಕೋ ಅವರೊಂದಿಗೆ ಹೋರಾಟ ಮಾಡಲಿ ಎಂದು ಸವಾಲೆಸೆದರು.
ಇಲ್ಲಿ ಶೇ.೯೪ರಷ್ಟು ಮಂದಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನನ್ನ ವಿರುದ್ಧ ಸೇಡಿಗೆ ಮಕ್ಕಳಿಗೆ ತೊಂದರೆ ಕೊಡುವುದು ಯಾಕೆ, ಇದಕ್ಕೆ ನಾವು ಜಗ್ಗುವುದಿಲ್ಲ. ಜನರ ಬಳಿ ಭಿಕ್ಷೆ ಬೇಡಿಯಾದರೂ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತೇವೆ ಎಂದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಕೆಲ ಘಟನೆಗಳಿಂದ ಅವರಿಗೆ ಅಪಮಾನವಾಗಿದೆ. ಅದರ ಸೇಡು ತೀರಿಸುವ ಕೆಲಸವನ್ನು ಅವರು ಆರಂಭಿಸಿದ್ದಾರೆ. ಅದರ ಫಲವಾಗಿಯೇ ಶಾಲೆಗೆ ಬಿಸಿಯೂಟಕ್ಕಾಗಿ ಕೊಡುವ ಅನುದಾನವನ್ನು ಸ್ಥಗಿತಗೊಳಿಸುವ ಕೆಲಸ ನಡೆದಿದೆ. ಇದು ಅನ್ಯಾಯದ ಗೆಲುವು ಹಾಗೂ ಅಧರ್ಮದ ಗೆಲುವು ಎಂದು ನಾನು ಭಾವಿಸುತ್ತೇನೆ. ಅವರು ಅಧರ್ಮದ ರೀತಿಯಲ್ಲಿ ನಡೆದುಕೊಂಡರು. ನಾವು ಧರ್ಮದ ಕೆಲಸ ಮಾಡುತ್ತಿದ್ದೇವೆ. ಗೆದ್ದೇ ಗೆಲ್ಲುತ್ತೇವೆ. ಜನರು ನಮಗೆ ಬೆಂಬಲ ಕೊಡುತ್ತಾರೆ ಎಂದರು.
ನಾವು ಸಹಕಾರ ಕೇಳುವ ಸಂದರ್ಭ 52 ಶಾಲೆಗಳಿಗೆ ಅನ್ನಪ್ರಸಾದ ಯೋಜನೆ ಮಂಜೂರುಗೊಂಡಿತ್ತು. ಆ ಸಂದರ್ಭ ಎಂ.ಪಿ.ಪ್ರಕಾಶ್ ಅವರ ಊರಾದ ಹೂವಿನ ಹಡಗಲಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಕನಕಪುರದ ಶಾಲೆಯೊಂದಕ್ಕೂ ಇದೇ ರೀತಿಯ ನೆರವು ನೀಡಲಾಗಿದೆ. ಆ ಸಂದರ್ಭ ಕೇವಲ ನಮ್ಮ ಶಾಲೆಯೊಂದಕ್ಕೆ ನೆರವು ನೀಡಿದ್ದಲ್ಲ ಎಂದು ಭಟ್ ಹೇಳಿದರು.
ಇಲ್ಲಿನ ಶಿಕ್ಷಣ ಸಂಸ್ಥೆ ಇಡೀ ಸಮಾಜಕ್ಕೆ ಸೇರಿದ್ದು. ಆದರೆ ದ್ವೇಷ ಸಾಧನೆಗೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸ್ಥೆ ಮೇಲೆ ಪ್ರಹಾರ ಎಸಗಿದ್ದಾರೆ. ಎಲ್ಲರ ಸಹಕಾರದೊಂದಿಗೆ ನಡೆಸುವ ಸಂಸ್ಥೆಗೆ ಅನ್ಯಾಯ ಮಡುವುದೆಂದರೆ ದೇವರಿಗೆ ಅನ್ಯಾಯ ಮಾಡುವುದು. ಈ ರೀತಿಯ ರಾಕ್ಷಸೀ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಹೇಳಿದ ಭಟ್, ನಾವು ಜನರಿಂದ, ಜನರಿಗೋಸ್ಕರ ಕೆಲಸ ಮಾಡುತ್ತಿದ್ದೇವೆ. ಆರ್ಥಿಕವಾಗಿ ತೊಂದರೆ ಆಗುತ್ತದೆ.ನಾವು ಮತ್ತೆ ಜನರ ಬಳಿ ಹೋಗುತ್ತೇವೆ. ಅನ್ನದಾನ,ವಸ್ತ್ರದಾನ, ವಿದ್ಯಾದಾನ ಮುಂದುವರಿಯುತ್ತದೆ ಎಂದರು.
೨೦೦೭-೦೮ನೇ ಸಾಲಿನಿಂದ ೨೦೧೬-೧೭ನೇ ಸಾಲಿನವರೆಗೆ ಶ್ರೀರಾಮ ವಿದ್ಯಾಕೇಂದ್ರಕ್ಕೆ ೨.೩೨ ಕೋಟಿ ರೂಗಳು ಹಾಗೂ ಪುಣಚ ಶ್ರೀದೇವಿ ವಿದ್ಯಾಕೇಂದ್ರಕ್ಕೆ ೫೦ ಲಕ್ಷ ರೂಗಳು ಸೇರಿದಂತೆ ಒಟ್ಟಾರೆ ಬಂಟ್ವಾಳ ತಾಲೂಕಿನ ಈ ಶಿಕ್ಷಣ ಸಂಸ್ಥೆಗಳಿಗೆ ಕೊಲ್ಲೂರು ದೇವಳ ವತಿಯಿಂದ ೨.೮೩ ಕೋಟಿ ರೂ. ಖರ್ಚು ಮಾಡಲಾಗಿದೆ.
ಆದರೆ ದೇವಾಲಯ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದತ್ತು ತೆಗೆದುಕೊಂಡು ನಿರ್ವಹಿಸಲು ಅವಕಾಶ ಇರುವುದಿಲ್ಲ. ಹೀಗೆ ದೇವಾಲಯ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದತ್ತು ತೆಗೆದುಕೊಂಡು ನಿರ್ವಹಣೆ ಮಾಡುವುದು ದೇವಾಲಯಕ್ಕೆ ಅಕ ಆರ್ಥಿಕ ಹೊರೆಯಾಗುತ್ತದೆ ಎಂದು ತಿಳಿಸಿ, ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಆದೇಶವನ್ನು ಸರಕಾರ ಹಿಂಪಡೆದಿದೆ. ಈ ಶೈಕ್ಷಣಿಕ ವರ್ಷದಿಂದಲೇ ಕೊಲ್ಲೂರಿನಿಂದ ನೆರವು ನಿಂತಿದೆ.
Be the first to comment on "ನೆರವು ಹಿಂದೆಗೆದದ್ದು ಸೇಡಿನ ರಾಜಕಾರಣ: ಡಾ.ಪ್ರಭಾಕರ ಭಟ್"