ದೇಶದಲ್ಲಿ ಡಿಜಿಟಲ್ ಕ್ರಾಂತಿಯಾದ ಮೇಲೆ ಪಾರದರ್ಶಕ ವ್ಯವಹಾರ ನಡೆಯಲು ಆರಂಭವಾಗಿದ್ದು, ಜನರಿಗೆ ಲಾಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 60 ಗ್ರಾಮಗಳು ಸಂಪೂರ್ಣ ಡಿಜಿಟಲೀಕರಣವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶನಿವಾರ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಬಾಳ್ತಿಲ ಎಂಬಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹಯೋಗದೊಂದಿಗೆ ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ಆಶ್ರಯದಲ್ಲಿ ಬಾಳ್ತಿಲ ಗ್ರಾಮ ವ್ಯಾಪ್ತಿಯ ಸಂಘದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಗದುರಹಿತ ವಹಿವಾಟಿನ ಬಗ್ಗೆ ಕಾರ್ಯಾಗಾರ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿ, ರೈತ ಸದಸ್ಯರಿಗೆ ರೂಪೇ ಕಾರ್ಡ್ ವಿತರಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ನಗದುರಹಿತ ವ್ಯವಹಾರ ಪರಿಕಲ್ಪನೆಯನ್ನು ಡಿಸಿಸಿ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆಯೇ ಮಾಡಿ ತೋರಿಸಿ ಮಾದರಿಯಾಗಿತ್ತು. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಸಹಕಾರಿ ಬ್ಯಾಂಕುಗಳು ಜನರ ನಡುವೆ ತೆರಳಿ ಸೇವಾಕಾರ್ಯ ಕೈಗೊಳ್ಳುವ ಕಾರಣ ಹಳ್ಳಿಯ ಕಟ್ಟಕಡೆಯ ಮನುಷ್ಯನ ಪ್ರೀತಿ ವಿಶ್ವಾಸ ಗಳಿಸಿಕೊಂಡಿದೆ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬ್ಯಾಂಕಿನ ಸೇವಾಚಟುವಟಿಕೆಗಳನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ ನಾಯ್ಕ್, ಸಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಶುಭ ಹಾರೈಸಿದರು.
ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ಜಯಂತ್ ಶೆಟ್ಟಿ, ಉಷಾ ಕಾಮತ್, ವಲಯ ಮೇಲ್ವಿಚಾರಕ ಕೇಶವ ಕಿಣಿ ಎಚ್, ಮುಖ್ಯ ಕಾರ್ಯನಿರ್ವಹಣಾಕಾರಿ ಸುರೇಶ ಕೆ, ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ, ಸೇವಾ ಸಂಘ ಉಪಾಧ್ಯಕ್ಷ ಸುಧಾಕರ ರೈ, ಗಿರಿಯಪ್ಪ ಗೌಡ, ಜಯರಾಮ ರೈ, ಗೋಪಾಲಕೃಷ್ಣ ಭಟ್, ಮೃಣಾಲಿನಿ ನಾಯಕ್ ಸಹಿತ ಸಂಘದ ನಿರ್ದೇಶಕರು ವೇದಿಕೆಯಲ್ಲಿದ್ದರು. ರಾಜೇಶ್ ಕೊಟ್ಟಾರಿ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಡಿಜಿಟಲ್ ಕ್ರಾಂತಿಯಿಂದ ಜನರಿಗೆ ಲಾಭ: ನಳಿನ್"