ಸ್ವೊರ್ಡ್ ಕಟ್ ಯುವಕ ಪ.ಗೋ (1970ರ ಸಂಗ್ರಹ)
ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ. ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 13ನೇ ಕಂತು ಇಲ್ಲಿದೆ.
ವಿಶೇಷಸೃಷ್ಟಿಗಳಲೋಕದಲ್ಲಿ –ಅಂಕಣ13: ಬಹುಶಃ ನೀವು ಪ್ರೆಸಿಡೆಂಟರನ್ನು ಹೋಗಿ ನೋಡುವುದಿಲ್ಲ
ಕಾಂಗ್ರೆಸ್ ಸಂದೇಶದ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಿಸುವ ಕಾರ್ಯಕ್ರಮವನ್ನು, ಚಾಮರಾಜಪೇಟೆಯ ಸಿದ್ಧಾರೂಢ ಮಠದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
1990 ರ ದಶಕದ ಚಿತ್ರ:ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡ ಅಂದಿನ ಕರ್ನಾಟಕ ರಾಜ್ಯದ ಕಾನೂನು ಸಚಿವರಾದ ಎಮ್.ವೀರಪ್ಪ ಮೊಯ್ಲಿಯವರ ಜೊತೆ ಸಂವಾದದಲ್ಲಿ ಟೈಮ್ಸ್ ಆಫ್ ಇಂಡಿಯಾ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ.
ಕಾರ್ಯಕ್ರಮ ನಿಯೋಜಿಸಿದವರು, ಆಗಿನ್ನೂ ವಿನೋದ ಮಾಸಪತ್ರಿಕೆಯ ಸಂಪಾದಕರಷ್ಟೇ ಆಗಿದ್ದ, ಚಾಮರಾಜಪೇಟೆ ಕಾಂಗ್ರೆಸ್ ಘಟಕದ ಮುಖ್ಯ ಕಾರ್ಯಕರ್ತ ನಾರಾಯಣ ಅವರು. ಮಹಾತ್ಮಾಗಾಂಧಿಜನ್ಮ ಜಯಂತಿಯ 60ನೇ ವಾರ್ಷಿಕಾಚರಣೆಯ ಸಂಕೇತವಾಗಿ, 60 ಮಂದಿ ಹೊಸ ಚಂದಾದಾರರಿಗೆ, ಹನುಮಂತಯ್ಯನವರು ಪತ್ರಿಕೆಯನ್ನು ವಿತರಿಸಿ ಉದ್ಘಾಟಿಸುವ ಕಾರ್ಯಕ್ರಮ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ ಕಾರ್ಯಕ್ರಮದ ನೆನಪು ಹುಟ್ಟಿಸಿ, ಅವರನ್ನು ಸಮಯಕ್ಕೆ ಸರಿಯಾಗಿ ಕರೆದೊಯ್ದೆ. ಆವರಣ ಪ್ರವೇಶಿಸುತ್ತಿದ್ದಂತೆ, ಸಮಯಕ್ಕೆ ಮೊದಲೇ ಬಂದಲ್ಲಿ ಹಾಜರಾಗಿದ್ದ ಹನುಮಂತಯ್ಯ “ಮೈ ಹುಶಾರಿಲ್ಲ, ನಾರಾಯಣ, ಪ್ರೋಗ್ರಾಂ ಶುರು ಮಾಡಿಸ್ತೀಯಾ ?” ಎನ್ನುವುದು ಕೇಳಿಸಿತು. ಅಪ್ಪಣೆಯಂತೆ ಕಾರ್ಯಕ್ರಮ ಆರಂಭವಾಯಿತು.
(ಬಂದಿದ್ದ ನಾಲ್ಕೈದು ಪತ್ರಿಕಾಪ್ರತಿನಿಧಿಗಳನ್ನು ಕಂಡು ವರದಿ ತಯಾರಿಸಿ ಹಂಚಿಸುವ ಉಳಿಯಿತು ಎಂದುಕೊಂಡೆ…)
ತನ್ನ ಭಾಷಣವನ್ನು ‘ಅನುಮತಿಯೊಂದಿಗೆ ಕುಳಿತುಕೊಂಡೇ’ ಆರಂಭಿಸಿದ ಹನುಮಂತಯ್ಯ ಸಿದ್ಧಾಂತ –ತತ್ವಗಳ ವಿಶ್ಲೇಷಣೆಯನ್ನು ಮೊದಲಿಗೆ ಎತ್ತಿಕೊಂಡರು. ಮಾಕ್ಸ್ ಪ್ರತಿಪಾದಿಸಿದ “From each according to ability -to each according to needs” (ನನ್ನ ಅನುವಾದ ಶಕ್ತಿಯಂತೆ, ಪ್ರತಿಯೊಬ್ಬನಿಂದ ಶಕ್ತ್ಯಾನುಸಾರ ಪ್ರತಿಯೊಬ್ಬನ ಅವಶ್ಯಕತೆಗೆ), ಸಿದ್ಧಾಂತದ ಇಂಗ್ಲಿಷ್ ವಾಕ್ಯಜೋಡಣೆಯಲ್ಲಿ ಅದರಿಂದಾದ ಒಂದು ತಪ್ಪಿಗೆ–
ವೀರಣ್ಣಗೌಡರ ಆಕ್ಷೇಪ ಬಂತು. ಕಾರ್ಯಕ್ರಮಕ್ಕೆ ಹೊಸ ತಿರುವು ಕೊಟ್ಟಿತು. ಇಂದಿನ ಹಲವು ನಿಮಿಷ ನಡೆದ ಚರ್ಚೆಯಲ್ಲಿ ಅಪ್ರಸ್ತುತ ವಿಷಯಗಳೂ ತೂರಿಬಂದವು. ನಾರಾಯಣಯ ವಿನೀತ ಪ್ರಾರ್ಥನೆಯಿಲ್ಲದಿದ್ದರೆ, ಕಾರ್ಯಕ್ರಮವೇ ಅರ್ಧಕ್ಕೆ ನಿಂತುಹೋಗುವಷ್ಟು ಕಾವು ಕಂಡುಬಂದಿತ್ತು!
ಕೊನೆಯಲ್ಲಿ, ಪ್ರತಿಗಳನ್ನು 60 ಚಂದಾದಾರರಿಗೆ ವಿತರಣೆ ಮಾಡಬೇಕೆಂದು ನಾರಾಯಣರು ಕೇಳಿಕೊಂಡಾಗ, ಹನುಮಂತಯ್ಯ“ಅದು ಯಾಕೆ 60 ಜನ? ನೂರು ಆದ್ರೂ ಇರಬೇಕಿತ್ತು” ಎಂದು ಪ್ರಶ್ನಿಸಿ, ವೀರಣ್ಣಗೌಡರ ಉತ್ತರಕ್ಕಾಗಿ ಕಾದರು. ಗೌಡರಿಂದ ಉತ್ತರ ಬರಲ್ಲಿ,60ರ ಸಂಕೇತವನ್ನು ವಿವರಿಸುವ ‘ಧೈರ್ಯ’ ನಾರಾಯಣರಿಗೂ ಇರಲಿಲ್ಲ!
“ಅಷ್ಟೆಲ್ಲ ಜನಕ್ಕೆ ಹಂಚೋವಷ್ಟು ಟೈಮ್ ನನಗಿಲ್ಲ. ಸಿಂಬಾಲಿಕ್ ಆಗಿ ಕೆಲವರಿಗೆ ನೀಡ್ತೀನಿ” ಎಂದಾಗ, ಮೌನವಾಗಿ ಒಪ್ಪಿಕೊಂಡು,ತಮ್ಮ ಪ್ರತಿ ಪಡೆದ ಕೃತಾರ್ಥರ ಒಂದೆರಡು ಭಾವಚಿತ್ರಗಳನ್ನೂ ತೆಗೆಯಲಾಯಿತು.
ಕಾರ್ಯಕ್ರಮ ಮುಗಿಸಿದ ಮೇಲೆ, ಪ್ರೆಸಿಡೆಂಟರ ಕಾರಿನಲ್ಲೇ ಮರಳುವ ಅವಕಾಶ ಸಿಗಲಿಲ್ಲ. ಆದ್ದರಿಂದ ವರದಿಗಾರ ಮಿತ್ರರ ಜೊತೆಯಲ್ಲೇ ಹೆಜ್ಜೆ ಹಾಕಿದೆ. ದೊಡ್ಡ ಪ್ರೋಗ್ರಾಮ್ ನ ಮೇಲೆ, ವರಿಂದ ಬಂದ ಟೀಕೆ–ಟಿಪ್ಪಣಿಗಳೆಲ್ಲವನ್ನೂ ಕಿವಿಕೊಟ್ಟು ಕೇಳಿದೆ.
ಅಂದು ಮೊದಲ್ಗೊಂಡು ಮುಂದಿನ ಮೂರು ತಿಂಗಳು, ‘…. ಸಂದೇಶ’ದ ಪ್ರದೇಶ ಕಾಂಗ್ರೆಸ್ ವಾತಾವರಣದಲ್ಲಿ ಕಂಡುಬಂದ ನೋಟುಗಳು, ಗಳಿಸಿದ ಅನುಭವಗಳು, ಆದ ಸ್ವಾರಸ್ಯಗಳು ಉಲ್ಲೇಖನಾರ್ಹ.
ಕಾಂಗ್ರೆಸ್ ಭವನದಲ್ಲೇ ದಿನವಿಡೀ ಕಳೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನನ್ನದು. ಆದರೂ ಸರಿ, ಮಾಡಬೇಕಾದ ಕೆಲಸವನ್ನು ಮಾಡಿ ಮುಗಿಸಿದರಾಯಿತು. ಹೇಗೂ ಹಾಕಬೇಕಾದ ಹಾಜರಿ ಪುಸ್ತಕ ಅಲ್ಲಿಲ್ಲವೆಂದು ವರ್ತಿಸುತ್ತಿದ್ದ ನನ್ನಬಗ್ಗೆ– ದೂರು ಸಲ್ಲಿಸಲು,ಅಲ್ಲಿದ್ದ ‘ಪ್ರೆಸಿಡೆಂಟ್ ನಿಷ್ಠ’ರಾದ ಪೂರ್ಣಕಾಲಿಕ ಸಿಬ್ಬಂದಿಯವರಿಗೆ ಹೆಚ್ಚು ಸಮಯ ತಗಲಲಿಲ್ಲ, ಸಿಕ್ಕಿದ ಒಂದು ಸಂದರ್ಭದಲ್ಲಿ ಗೌಡರು ‘ನನ್ನನ್ನು ಸರಿಯಾಗಿ ಕೂರಿಸಿಕೊಂಡರು.’ ಪರಿಣಾಮ, ಯಾವ ರೀತಿಯಲ್ಲೂ ಸಂಬಂಧವಿರದಿದ್ದ ಕೆಲಸವನ್ನು ಕೂಡಾ ನನ್ನ ತಲೆಗೆ ಸಿಬ್ಬಂದಿಯವರು ಕಟ್ಟಿ(ಸಿ)ದರು.
ಹೆಗಡೆಯವರಲ್ಲಿ ನಾನು ಸಲ್ಲಿಸಿದ ಪ್ರತಿಭಟನೆ “ಬಹುಶಃ ನೀವು ಪ್ರೆಸಿಡೆಂಟರನ್ನು ಹೋಗಿ ನೋಡುವುದಿಲ್ಲ. ಅವರಿಗೆ ಕಾಣಿಸಿಕೊಳ್ತಾ ಇರಿ” ಎಂಬ ಸಲಹೆಯನ್ನಷ್ಟೇ ಪ್ರತಿಪಾದಿಸಿತು. ‘ಸಿಬ್ಬಂದಿ ಧಾಳಿ’ಯಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ನಾನೇ ಹಾಕಿಕೊಳ್ಳುವಂತೆ ಮಾಡಿತು.
ಅದುವರೆಗೂ, ಅಗತ್ಯವಿದ್ದ ರಕ್ಷಣೆಯನ್ನು ಪಡೆದುಕೊಳ್ಳಲು ಶಕ್ತಿಯ ಪ್ರಾತಿನಿಧ್ಯದಿಂದ ಸಾಧ್ಯವೆಂಬ ವಿಚಾರ ನನಗೆ ಹೊಳೆದಿರಲಿಲ್ಲ.ಆ ಜ್ಞಾನೋದಯವಾದ ಕೆಲವೇ ದಿನಗಳಲ್ಲಿ, ಅವಕಾಶವನ್ನು ಉಪಯೋಗಿಸಿಕೊಂಡೆ. ನಿಜಲಿಂಗಪ್ಪನವರು ಪಕ್ಷದ ಪರವಾಗಿ ಒಂದು ಪತ್ರಿಕಾಗೋಷ್ಠಿಯನ್ನು ಭವನದಲ್ಲಿ ಕರೆದಿದ್ದರು. ಗೋಷ್ಠಿಯ ಕೋಣೆಗೆ ನುಗ್ಗುತ್ತಿದ್ದ ವರದಿಗಾರರ ಜೊತೆಯಲ್ಲಿದ್ದ ನನ್ನನ್ನು ಕಂಡ,ಸಿಬ್ಬಂದಿ ಪ್ರಮುಖ “ಊಂ ?ನೀವೆಲ್ಲಿಗೆ?” ಎಂದಷ್ಟೇ ನುಡಿದು, ನನ್ನನ್ನು ತಡೆದ.
ಮಾತಿನಲ್ಲಿ ಉತ್ತರವೀಯದೆ, ಕಿಸೆಯಲ್ಲಿರಿಸಿದ್ದ ಮಾನ್ಯತಾಪತ್ರವನ್ನು ತೆಗೆದು ತೋರಿಸಿ ಒಂದು ಕುಹಕನಗೆ ಹೊರಡಿಸಿದೆ.ಕೋಣೆಯೊಳಗೆ ನುಗ್ಗಿ, ಗೋಷ್ಠಿಯ ಹಲವರಲ್ಲಿ ಒಬ್ಬನಾದೆ.
ನನ್ನ ಇರವನ್ನು ಗಮನಿಸಿದ ನಿಜಲಿಂಗಪ್ಪ. ಆಗಾಗ ನನ್ನ ಕಡೆ ನೋಡುತ್ತಿದ್ದರು. ಇವನನ್ನು ಎಲ್ಲೋ ಕಂಡಂತಿದೆ ಎಂಬ ಹಾಗೆ,ಹುಬ್ಬುಗಂಟಿಕ್ಕುತ್ತಿದ್ದರು. ಪರಿಚಯವನ್ನು ಅವರು ಕೇಳಲಿಲ್ಲ– ನಾನು ಹೇಳಲೂ ಇಲ್ಲ.
ಗೋಷ್ಠಿ ಮುಗಿಸಿ ಹೊರಬಂದ ಮೇಲೆ -“ನೀವೂ ಪೇಪರ್ನವ್ರು ಅಂತ ಮೊದ್ಲೇ ಗೊತ್ತಾಗಿರ್ಲಿಲ್ಲ” ಎಂದು ನಯವಾಗಿ ಮಾತನಾಡಿಸಿದ(ಸಿಬ್ಬಂದಿ) ಪ್ರಮುಖ, “ಸಾರ್” ಸಂಬೋಧನೆಯನ್ನೂ (ಪ್ರಥಮಬಾರಿಗೆ) ಸೇರಿಸಿದಾಗ, ಒಮ್ಮೆಲೆ ಬಿಗುಮಾನ ಪ್ರದರ್ಶಿಸಿದೆ.ಹಾಜರಾತಿ ಸಮಯದಿಂದ ವಿನಾಯಿತಿಯನ್ನೂ ಅಂದೇ ಪಡೆದೆ.
ಆದರೆ, ಸಂದೇಶದ ನೌಕರನಾಗಿ ಹೆಚ್ಚು ದಿನ ಕಳೆಯಲು ಸಾಧ್ಯವಾಗದೆಂಬ ಯೋಚನೆ ಕೂಡಾ ಅದೇ ದಿನ ಮೂಡಿತು.
ಈ ನಡುವೆ ಸಂಯುಕ್ತ ಕರ್ನಾಟಕದ ಬೆಂಗಳೂರು ಮುದ್ರಣದ ಸಿದ್ಧತಾ ವ್ಯವಸ್ಥೆಯ ಪ್ರಗತಿ –ಮಾಹಿತಿ ಸಲ್ಲಿಸುತ್ತಿದ್ದೆ. ಅಲ್ಲಿಗೆ ಪ್ರವೇಶ ದೊರಕಿಸಿಕೊಳ್ಳುವ ಪ್ರಯತ್ನ ಇನ್ನೂ ಹೆಚ್ಚಬೇಕೆಂಬ ತೀರ್ಮಾನಕ್ಕೆ ಅಂದೇ ಬಂದೆ.
ಆಗ, ಮುಖ್ಯಮಂತ್ರಿ ಬಿ.ಡಿ.ಜತ್ತಿಯವರ (ವಿಧಾನ ಮಂಡಲ) ಪಕ್ಷದ ಗುಂಪಿಗೂ, ಪ್ರದೇಶ ಕಾಂಗ್ರೆಸ್ ವರಿಷ್ಠರ ಗುಂಪಿಗೂ ತೀವ್ರ ಮೇಲಾಟ ನಡೆಯುತ್ತಿತ್ತು. ಹೆಗಡೆ ವೀರೇಂದ್ರ ಪಾಟೀಲರ ಸ್ವತಂತ್ರ ‘ಧ್ವನಿ’ಗೆ ಪಕ್ಷದಲ್ಲಿ ಮನ್ನಣೆಯೂ ಇತ್ತು.
ಅದೇ ಸಮಯದಲ್ಲಿ ತನ್ನ ಪುತ್ರಿಗೆ ಪಕ್ಷದಲ್ಲಿ ಸ್ಥಾನ ದೊರಕಿಸಲು ನೆಹರೂರವರು ಮಾಡಿದ ಪ್ರಯತ್ನಗಳಿಂದಾಗಿ ಇಂದಿರಾ ಗಾಂಧಿಯವರು ಕಾಂಗ್ರೆಸ್ಸಿನ ಮಹಿಳಾ ವಿಭಾಗದ ಪ್ರಮುಖರಾಗಿದ್ದರು. ವಿಭಾಗದ ಸಮ್ಮೇಳನಕ್ಕಾಗಿ ಒಂದು ಬಾರಿ ಬೆಂಗಳೂರಿಗೆ ಬಂದು ತಂಗಿದ್ದರು.
ತನ್ನ ವಸತಿಸ್ಥಳದಲ್ಲಿ ಹತ್ತಾರು ಬಗೆಯ ‘ವಿ.ಐ.ಪಿ.’ ಸೌಕರ್ಯಗಳನ್ನು ಬಯಸಿದ್ದ ಇಂದಿರಾಗಾಂಧಿ, ಅವುಗಳನ್ನು ಕೂಡಲೇ ಪೂರೈಸುವಂತೆ, ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಹೆಗಡೆಯವರಿಗೆ ಎಡೆಬಿಡದೆ ಆದೇಶಗಳನ್ನು ಕಳುಹಿಸಿದರು. ಒಮ್ಮೆಯಂತೂ,ಆದೇಶ ಹೊತ್ತು ತಂದ ವ್ಯಕ್ತಿಯೊಡನೆ–
“ಏನಂತ ಅವರಿಗೆ ಬೇಕಾಗಿರೋದು ? She is not the Prime Minister to demand all these!” ಎಂದು (ನನ್ನೆದುರಿಗೆ) ಗುಡುಗಿದ್ದ ಹೆಗಡೆ ‘ಧ್ವನಿ’ಯೂ ಆ ಕಾಲದ್ದು.
(ಮುಂದಿನ ಭಾಗದಲ್ಲಿ)
(ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಲೇಖಕ ಪ.ಗೋ. ಅವರದ್ದು.. ಇದು ಹೊಸ ದಿಗಂತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಬಳಿಕ 2005ರಲ್ಲಿ ಪುಸ್ತಕರೂಪದಲ್ಲಿ ಹೊರಬಂದ ಲೇಖನಮಾಲೆಯ ಮರುಪ್ರಕಟಣೆ. ಇದನ್ನು ಬಂಟ್ವಾಳನ್ಯೂಸ್ ಗೆ ಒದಗಿಸಿಕೊಟ್ಟವರು ಲೇಖಕ ಪ.ಗೋ. ಅವರ ಪುತ್ರ ಪ. ರಾಮಚಂದ್ರ)
Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 13: ಬಹುಶಃ ನೀವು ಪ್ರೆಸಿಡೆಂಟರನ್ನು ಹೋಗಿ ನೋಡುವುದಿಲ್ಲ"