ಯುವಕರಲ್ಲಿ ರಾಷ್ಟ್ರೋತ್ಥಾನದ ಧ್ಯೇಯೋದ್ದೇಶ, ಚಿಂತನೆ ಇದ್ದಾಗ ಸಮಾಜದಲ್ಲಿ ಉತ್ತಮ ಕಾರ್‍ಯ ಸಾಧನೆಯಾಗಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ಹಿತವನ್ನುಂಟು ಮಾಡುವ, ಸಂತೋಷ ಕೊಡುವ ಕಾರ್‍ಯಕ್ರಮಗಳನ್ನು ನೀಡುವ ಸಂಘಟನೆಗಳು ನಮ್ಮ ಮಧ್ಯೆ ಉಳಿದು ಬೆಳೆಯುತ್ತವೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಇಟ್ಟೆಲ್ ತುಳುವೆರೆ ಕೂಟ ಆಶ್ರಯದಲ್ಲಿ ಭಾನುವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಥದ ಗದ್ದೆಯಲ್ಲಿ ನಡೆದ ಕೆಸರ್‌ಡೊಂಜಿ ದಿನೊ-ಕೆಸರ್‌ದ ಕಂಡೊಂಡು ತುಳುನಾಡ್ದ ಗೊಬ್ಬುಲೆ ಪಂತೊ ಉದ್ಘಾಟಿಸಿ ಆಶೀರ್ವಚನ ನೀಡಿದರು. ಧರ್ಮ ಪ್ರಜ್ಞೆ, ಜೀವನ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಯುವಶಕ್ತಿ ಸದ್ವಿನಿಯೋಗವಾಗಬೇಕು, ಗದ್ದೆ ಬೇಸಾಯ, ಕೃಷಿ ಸಂಸ್ಕೃತಿಯ ಪುನರುತ್ಥಾನಕ್ಕೆ ಇಂತಹ ಕೂಟಗಳು ಪ್ರೇರಣೆಯಾಗಲಿ ಎಂದು ತಿಳಿಸಿದರು.
ನಮ್ಮತನವನ್ನು ಉಳಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಯುವಕರಲ್ಲಿ, ಮಕ್ಕಳಲ್ಲಿ ಸ್ವದೇಶಿ ಪ್ರೇಮ ಮೂಡಬೇಕಾದ ಅವಶ್ಯಕತೆಯಿದೆ. ಈ ಹಾದಿಯಲ್ಲಿ ಮುನ್ನಡೆಯಲು ಇಂತಹ ಕಾರ್‍ಯಕ್ರಮಗಳು ಪೂರಕವಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಮಾಜಿಕ ಕಾರ್‍ಯಕರ್ತ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅಭಿಪ್ರಾಯ ಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್ ವಹಿಸಿದ್ದರು. ವಿಟ್ಲದ ಉದ್ಯಮಿ ಸುಬ್ರಾಯ ಪೈ, ಸಾಯಿಗಣೇಶ್ ಗ್ಯಾಸ್ ಸರ್ವಿಸ್‌ನ ಸತೀಶ್ ಕುಮಾರ್ ಆಳ್ವ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿರ್ದೇಶಕ ಮನೋರಂಜನ್ ರೈ ಕರೈ, ಭಾರತ್ ಶಾಮಿಯಾನದ ಸಂಜೀವ ಪೂಜಾರಿ, ಇಟ್ಟೆಲ್ ತುಳುಕೂಟದ ಅಧ್ಯಕ್ಷ ಕರುಣಾಕರ ನಾಯ್ತೋಟು ಭಾಗವಹಿಸಿದ್ದರು.
ಇಟ್ಟೆಲ್ ತುಳುಕೂಟದ ಸ್ಥಾಪಕ ಅಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿದರು. ಗೌರವ ಸಲಹೆಗಾರ ರವೀಶ್ ಶಿವಾಜಿನಗರ ವಂದಿಸಿದರು. ಹರೀಶ್ ವಿಟ್ಲ ಕಾರ್‍ಯಕ್ರಮ ನಿರೂಪಿಸಿದರು.
ಕೆಸರು ಗದ್ದೆಯಲ್ಲಿ ಮೂರು ವಿಭಾಗಗಳಲ್ಲಿ ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ತೆಂಗಿನಕಾಯಿ ಬಿಸಾಡುವುದು, ಮಡಕೆ ಒಡೆಯುವುದು, ದಂಪತಿಗಳಿಗೆ ಉಪ್ಪುಗೋಣಿ ಓಟ, ಹಾಳೆಯಲ್ಲಿ ಎಳೆಯುವ ಹಾಗೂ ಇನ್ನಿತರ ಸ್ಪರ್ಧೆಗಳು ನಡೆದವು.
Be the first to comment on "ಯುವಕರ ರಾಷ್ಟ್ರೋತ್ಥಾನದ ಧ್ಯೇಯ, ಚಿಂತನೆಯಿಂದ ಉತ್ತಮ ಕಾರ್ಯ ಸಾಧನೆ-ಒಡಿಯೂರುಶ್ರೀ"