ಮೃತ್ಯುಸ್ವರೂಪಿಯಾದ ಟ್ಯಾಂಕರ್: ಓರ್ವ ಸಾವು

 

 ಕಾರೊಂದಕ್ಕೆ ತೈಲ ಸಾಗಾಟದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಬಂಟ್ವಾಳ ಕೆಳಗಿನಪೇಟೆ ನಿವಾಸಿ ಮೂಸಬ್ಬ (85) ಸಾವನ್ನಪ್ಪಿದ್ದಾರೆ.

ಮಾಣಿ ಸಮೀಪ ಬುಡೋಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಘಟನೆ ನಡೆದಿದ್ದು, ಮೂಸಬ್ಬರ ಮಗ ಮುಹಮ್ಮದ್(46), ಸೊಸೆ ತಾಹಿರ(39) ಮೊಮ್ಮಕ್ಕಳಾದ ಮುಹಮ್ಮದ್ ಇರ್ಫಾನ್(20) ಫಾತಿಮಾ ತಸ್ಲೀಮ(17), ಮುಹಮ್ಮದ್ ಇಸ್ಫಾಕ್(13) ಗಾಯಗೊಂಡಿದ್ದು ತುಂಬೆ ಮತ್ತು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಂಟ್ವಾಳದ ಮೂಸಬ್ಬ ಅವರು, ಇವರು ವ್ಯಾಪಾರದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಸಕಲೇಶಪುರದಲ್ಲಿ ನೆಲೆಸಿದ್ದಾರೆ. ಈದುಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ಶಾಂತಿಅಂಗಡಿಯ ತಾಹಿರಾ ಅವರ ಮನೆಗೆ ಬರುತ್ತಿದ್ದ ಸಂದರ್ಭ, ಮಾಣಿ ಸಮೀಪದ ಬುಡೋಳಿಯಲ್ಲಿ ತೈಲ ಸಾಗಟದ ಟ್ಯಾಂಕರ್ ಢಿಕ್ಕಿ ಹೊಡೆಯಿತು.

ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಎಲ್ಲರನ್ನೂ ಕೂಡಲೇ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇವರಲ್ಲಿ ಮಹಮ್ಮದ್ ಇರ್ಫಾನ್ ಮತ್ತು ಮೂಸಬ್ಬ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೂಸಬ್ಬ ಮೃತಪಟ್ಟರು.