ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಪಾಣೆಮಂಗಳೂರು ಶ್ರೀ ಅನಂತನಾಥ ಸ್ವಾಮಿ ಜಿನಚೈತ್ಯಾಲಯದಲ್ಲಿ ಚಾತುರ್ಮಾಸ ಕಾರ್ಯಕ್ರಮ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಬಂಟ್ವಾಳಕ್ಕೆ ಆಗಮಿಸಿದ ಪರಮಪೂಜ್ಯ ಮುನಿಶ್ರೀ 108 ವೀರ ಸಾಗರ ಮಹಾರಾಜರ ಮಂಗಲ ಪುರಪ್ರವೇಶ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಭಾನುವಾರ ನಡೆಯಿತು.
ಮೂಡುಬಿದರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಹಿತ ನಾನಾ ಗಣ್ಯರು ಮುನಿಶ್ರೀಗಳವರನ್ನು ಸ್ವಾಗತಿಸಿ, ಆಶೀರ್ವಾದ ಪಡೆದರು.
ಈ ಸಂದರ್ಭ ಮಾತನಾಡಿದ ಶ್ರೀ ಚಾರುಕೀರ್ತಿ ಮಹಾಸ್ವಾಮೀಜಿ, ಮುನಿಶ್ರೀಗಳ ಆಗಮನದಿಂದ ಕ್ಷೇತ್ರ ಸುಭಿಕ್ಷವಾಗಲಿ, ಮನುಷ್ಯರಷ್ಟೇ ಅಲ್ಲ, ಪಶು, ಪಕ್ಷಿ, ಮರ ಗಿಡಗಳೂ ಸಮೃದ್ಧಿಯಾಗಿ ಆತಂಕರಹಿತವಾಗಿರಲಿ, ಚಾತುರ್ಮಾಸ ಕಾರ್ಯಕ್ರಮ ಪಾಣೆಮಂಗಳೂರಿನಲ್ಲಿ ನಡೆಯುತ್ತಿದ್ದು, ಅದರ ಪುಣ್ಯ ಎಲ್ಲ ಸಮುದಾಯದವರಿಗು ಲಭಿಸಲಿ ಎಂದು ಹಾರೈಸಿದರು.
ಈ ಸಂದರ್ಭ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮುನೀಶ್ವರರು ಕ್ಷೇತ್ರಕ್ಕೆ ಪ್ರವೇಶಿಸಿದ್ದು, ಜನರಿಗೆ ಸನ್ಮಂಗಳ ಉಂಟುಮಾಡಲಿ. ಸಮೃದ್ಧಿ, ಸಾಮರಸ್ಯದ ಬಾಳ್ವೆ ಜೊತೆಗೆ ದ್ವೇಷಾಸೂಯೆ ತೊಲಗಿಸಿ, ನೆಮ್ಮದಿಯ ಬದುಕು ಸಾಗಿಸಲು ಪುರಪ್ರವೇಶ ಮುನ್ನುಡಿಯಾಗಲಿ ಎಂದು ಆಶಿಸಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಸದಸ್ಯ ಪ್ರವೀಣ್, ಜೈನ ಸಮುದಾಯದ ಪ್ರಮುಖರಾದ ಚಾತುರ್ಮಾಸ ಸಮಿತಿ ಅಧ್ಯಕ್ಷ ರತ್ನಾಕರ ಜೈನ್, ಸಮಿತಿಯ ಗೌರವ ಸಂರಕ್ಷಕರಾದ ಜಿನರಾಜ ಆರಿಗ ಪಚ್ಚಾಜೆ, ಸಂಪತ್ ಕುಮಾರ್ ಶೆಟ್ಟಿ, ಪುಷ್ಪರಾಜ ಜೈನ್, ಮಂಗಳೂರು, ಕಾರ್ಯಾಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಇಂದ್ರ ಪಾಣೆಮಂಗಳೂರು, ಉಪಾಧ್ಯಕ್ಷರಾದ ಅರ್ಕಕೀರ್ತಿ ಇಂದ್ರ ಸಿದ್ದಕಟ್ಟೆ, ನೇಮಿರಾಜ ಆರಿಗ, ಭರತ್ ಕುಮಾರ್ ಜೈನ್, ವಜ್ರಕುಮಾರ್ ಜೈನ್ ಉಪ್ಪಿನಂಗಡಿ, ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಯಶೋಧರ ಪೂವಣಿ, ಮಂಗಳೂರು, ಸತೀಶ್ ಪಡಿವಾಳ್ ಪುತತೂರು, ಪ್ರಕಾಶ್ ಜೈನ್ ಸಿದ್ದಕಟ್ಟೆ, ಕಾರ್ಯದರ್ಶಿಗಳಾದ ಹರ್ಷರಾಜ್ ಬಲ್ಲಾಳ್, ಪ್ರವೀಣ್ ಕುಮಾರ್ ಕರ್ಬೆಟ್ಟು, ವೃಷಭರಾಜ ಇಂದ್ರ, ಮನ್ಮಥರಾಜ್ ಕಾಜವ, ಭುವನೇಂದ್ರ ಇಂದ್ರ, ವೇಣೂರು ಚಾತುರ್ಮಾಸ ಸಮಿತಿಯ ನವೀನ್‌ಚಂದ್ ಬಲ್ಲಾಳ್, ಉದಯಕುಮಾರ್, ಜೈನ ಸಮಾಜದ ಪ್ರಮುಖರಾದ ರಾಜವರ್ಮ ಬಲ್ಲಾಳ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದು, ಆಶೀರ್ವಾದ ಪಡೆದು ಸ್ವಾಗತಿಸಿದರು.
ಪೂರ್ವಾಹ್ನ ಬಂಟ್ವಾಳ ಬಸದಿಯಿಂದ ಹೊರಟ ಮುನಿಶ್ರೀಗಳು, ಪುರಪ್ರವೇಶ ಕಾರ್ಯಕ್ರಮದ ಬಳಿಕ ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯಕ್ಕೆ ವಿಹಾರ ಮಾಡಿದರು. ಅದಾದ ಬಳಿಕ ಜೈನ ಸಮುದಾಯದ ಶ್ರಾವಕ ಬಂಧುಗಳಿಗೆ ಆಶೀರ್ವಚನ ಹಾಗೂ ಪ್ರವಚನ ನೀಡಿದರು.
Be the first to comment on "ಬಂಟ್ವಾಳದಲ್ಲಿ ಮುನಿಶ್ರೀ 108 ವೀರಸಾಗರ ಮಹಾರಾಜರ ಮಂಗಲ ಪುರಪ್ರವೇಶ"