www.bantwalnews.com report
ಪೆರುವಾಯಿ ಅಶ್ವಥ ನಗರ ನಿವಾಸಿ ಗಾರೆ ಹಾಗೂ ಮರದ ಕೆಲಸಗಳನ್ನು ನಿರ್ವಹಿಸುತ್ತಿದ್ದ ಸಂತೋಷ್ (21) ಮರ ಏರಿ ಮಾವಿನ ಕಾಯಿ ಕೊಯ್ಯುವ ಸಮಯ ಆಯ ತಪ್ಪಿ ನೆಲಕ್ಕುರುಳಿದ್ದಾರೆ. ಇದರಿಂದ ಸೊಂಟದ ಭಾಗಕ್ಕೆ ಬಲವಾದ ಏಟಾಗಿ ಮಂಗಳೂರು ಸರ್ಕಾರಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಮೇ.14ರಂದು ಸೇರ್ಪಡೆಯಾಗಿದ್ದರು. ಬೆನ್ನುಹುರಿಗೆ ಪೆಟ್ಟಾಗಿರುವುದರಿಂದ ಸರಿಪಡಿಸುವುದು ಕಷ್ಟ ಎಂದು 10 ದಿನದಲ್ಲಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಅಶ್ವಥ ನಗರ ನಿವಾಸಿ ಐತ್ತಪ್ಪ ನಾಯ್ಕ ಅವರು ಕಳೆದ 25 ವರ್ಷಗಳಿಂದ ಪೆರುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದಾರೆ. ಇವರು ಅಡಿಸ್ಥಳ ತಮ್ಮ ಹೆಸರಿಗೆ ಮಾಡಿಕೊಂಡುವಂತೆ ಪಂಚಾಯಿತಿ, ಕಂದಾಯ ಇಲಾಖೆ ಅಲೆದಾಟ ನಡೆಸಿದ್ದರಾದರೂ ಸರಿಯಾದ ಮಾಹಿತಿ ಸಿಗದೆ ಇನ್ನೂ ಅಡಿಸ್ಥಳ ಇವರ ಹೆಸರಿಗಾಗಿಲ್ಲ. ಇದರಿಂದ ಸಾಲ ಮಾಡಿ ಖಾಸಗೀ ಆಸ್ಪತ್ರೆಯ ನುರಿತ ವೈದ್ಯರಲ್ಲಿ ಚಿಕಿತ್ಸೆ ಪಡೆಯಲೂ ಸಾಧ್ಯವಾಗಿಲ್ಲ.
ಮನೆ ಮಂದಿ ಶೌಚಕ್ಕೆ ಪಕ್ಕದ ಗುಡ್ಡ ಅಥವಾ ತೋಡನ್ನೇ ಆಶ್ರಯಿಸುವ ಸ್ಥಿತಿ ಇದೆ. ಸರ್ಕಾರ ಪರಿಶಿಷ್ಠ ಪಂಗಡ ಹಾಗೂ ಪರಿಶಿಷ್ಠ ಜಾತಿಯವರ ಅಭಿವೃದ್ಧಿಗೆ ಕೋಟಿ ಕೋಟಿ ತೆಗೆದಿರುಸುತ್ತಿದೆ ಇವರಿಗೆ ಏನೂ ಸಿಕ್ಕಿಲ್ಲ.
ಮರದಿಂದ ಬಿದ್ದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸೇರಿಕೊಂಡು ಮೂರು ನಾಲ್ಕು ದಿನವಾದರೂ ಸರಿಯಾಗಿ ಚಿಕಿತ್ಸೆ ಲಭಿಸದಿದ್ದಾಗ ಸಾಮಾಜಿಕ ಹೋರಾಟಗಾರ ಮಂಜುನಾಥ ಶೆಟ್ಟಿ ಕಲಾತಿಮಾರು ಅವರ ಮೂಲಕ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರಿಗೆ ಮಾಹಿತಿ ನೀಡಿ ಅಧಿಕಾರಿಗಳು ಸರಿಯಾಗಿ ನೊಡಿಕೊಳ್ಳಲು ಸೂಚನೆ ನೀಡಿದರು. ಅದನ್ನು ಬಿಟ್ಟರೆ ಇವರ ಸಹಾಯಕ್ಕೆ ಯಾರೊಬ್ಬರೂ ಆಗಮಿಸಿಲ್ಲ.
ಮೂವರು ಹೆಣ್ಣು ಮಕ್ಕಳ ಪೈಕಿ ಗೀತಾ ಹಾಗೂ ನಳಿನಾಕ್ಷಿ ಹಣದ ಕೊರತೆಯಿಂದ ವಿದ್ಯಾಬ್ಯಾಸ ಮುಂದುವರಿಸಲಾಗದೆ 10ನೇ ತರಗತಿಗೇ ಶಾಲೆಗೆ ವಿದಾಯ ಹೇಳಿದ್ದಾರೆ. ಇನ್ನೋರ್ವಾಕೆ ಜ್ಯೋತಿ ಮಾಣಿಲ ಪ್ರೌಢ ಶಾಲೆಯಲ್ಲಿ 8ನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿದ್ದಾಳೆ.
ಮನೆಯಲ್ಲಿ ಕಿತ್ತು ನಿನ್ನುವ ಬಡತನ, ಮೂವರು ತಂಗಿಯಂದಿರ ವಿದ್ಯಾಬ್ಯಾಸದ ಜವಾಬ್ದಾರಿ.. ಟೆಂಟ್ ಹಾಕಿದಂತಿರುವ ಒಂದೇ ಬಾಗಿಲಿನ ಮನೆಯಲ್ಲಿ ಏಳು ಮಂದಿ ವಾಸ.. ಹೊಸ ಮನೆ ಕಟ್ಟಲು ಜಾಗದ ದಾಖಲೆ ಇನ್ನೂ ಕೈಸೇರಿಲ್ಲ, ಇದ್ದ ಪಡಿತರ ಚೀಟಿಯೂ ತಿರಸ್ಕೃತವಾಗಿದೆ.. ಅಚಾನಕ್ ಆಗಿ ಮರದಿಂದ ಬಿದ್ದು ಬೆನ್ನುಗುರಿಗೆ ಪೆಟ್ಟಾಗಿ, ಮನೆಯ ಆಧಾರ ಸ್ಥಂಭವಾಗಿದ್ದ ಸಂತೋಷ್ ಹಾಸಿಗೆ ಹಿಡಿಯುವಂತಾಗಿದೆ..
ಬೆನ್ನು ಹುರಿಯ ಚಿಕಿತ್ಸೆಗೆ ಲಕ್ಷಾಂತರ ಖರ್ಚು ತಗುಲುವ ಸಾಧ್ಯತೆ ಇದ್ದು, ಸಂತೋಷ್ ಗೆ ದಾನಿಗಳ ಸಹಾಯ ಹಸ್ತ ಬೇಕಿದೆ. ಮಾಣಿಲ ಕರ್ನಾಟಕ ಬ್ಯಾಂಕ್ ನಲ್ಲಿ ಇವರು ಖಾತೆಯನ್ನು ಹೊಂದಿದ್ದು, ಖಾತೆ ಸಂಖ್ಯೆ 502250010042060 ಆಗಿದೆ.
ಸರ್ಕಾರ ವರ್ಷಕ್ಕೊಂದು ಕಾನೂನು ತಂದು ಗ್ರಾಮೀಣ ಭಾಗದ ಅವಿದ್ಯಾವಂತರಲ್ಲಿ ಗೊಂದಲ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. 2010ರ ಹಿಂದಿನ ಪಡಿತರ ಚೀಟಿಗಳನ್ನು ಆಧಾರ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಿತ್ತು. ಆದರೆ ಅಂತ್ಯೋದಯ ಪಡಿತರ ಚೀಟಿಯೂ ರದ್ದಾಗಿದೆ. ಇದರಿಂದ ಸಿಗುವ ಪಡಿತರವೂ ಸ್ಥಗಿತವಾಗಿ ಒಂದು ಹೊತ್ತು ಊಟಕ್ಕೂ ಪರದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
Be the first to comment on "ಪೆರುವಾಯಿಯ ಸಂತೋಷ್ ಬಾಳು ಸಂತೋಷವಾಗಬೇಕಾದರೆ…."