- ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಒ ಖಡಕ್ ಸೂಚನೆ
ಪ್ರಮುಖ ಸಭೆಗಳಿಗೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿ ಕೆಳ ದರ್ಜೆಯ ಅಧಿಕಾರಿಗಳನ್ನು ಕಳುಹಿಸುವುದಕ್ಕೆ ಬಂಟ್ವಾಳ ತಾಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ತರಾಟೆಗೆ ತೆಗೆದುಕೊಂಡರು.
ಬಿ.ಸಿ.ರೋಡ್ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಮಂಗಳವಾರ ನಡೆದ ಇಲಾಖಾವಾರು ಮಾಸಿಕ ಕೆಡಿಪಿ ಸಭೆಗೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇಲಾಖೆಗಳ ಪ್ರಗತಿ ಪರಿಶೀಲನೆಯ ವೇಳೆ ಸ್ಪಷ್ಟ ಉತ್ತರ ಸಿಗದಿರುವುದರಿಂದ ಅಸಮಾಧಾನಗೊಂಡ ಸಿಪ್ರಿಯಾ ಮಿರಾಂದ, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಎಸ್ಸಿ-ಎಸ್ಟಿ ಸಭೆಗೂ ಹೆಚ್ಚಿನ ಇಲಾಖೆಗಳ ತಾಲೂಕು ಮಟ್ಟದ ಅಕಾರಿಗಳು ಹಾಜರಾಗಲಿಲ್ಲ. ಈ ಸಭೆಯಲ್ಲೂ ಅದೇ ಪುನರಾವರ್ತನೆಗೊಂಡಿದೆ ಎಂದರು.
ಮುಂದಿನ ಸಭೆಗೆ ಇದೇ ರೀತಿ ಪುನರಾವರ್ತನೆಯಾಗದರೆ ಅಂಥವರ ಮೇಲೆ ಸೂಕ್ತ ಕ್ರಮ ಜರಗಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಣಾಕಾರಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಈ ವಿಷಯವನ್ನು ನಿಮ್ಮ ಮೇಲಧಿಕಾರಿಗಳಿಗೆ ತಲುಪಿಸಿ ಎಂದು ಸೂಚಿಸಿದರು.
ಕೇಪು ಮತ್ತು ಪುಣಚ ಗ್ರಾಮದಲ್ಲಿ ತಲಾ ಒಂದೊಂದು ಇಲಿ ಜ್ವರ, ಪುಣಚ್ಚದಲ್ಲಿ ಹನ್ನೆರಡು ಡೆಂಗೆ ದೃಡೀಕರಣ, 24 ಶಂಕಿತ ಪ್ರಕರಣ ಪತ್ತೆಯಾಗಿದೆ. ಪುದು ಗ್ರಾಮದಲ್ಲಿ ಎರಡು, ಬೆಂಜನಪದವಿನಲ್ಲಿ ಒಂದು ಮಲೇರಿಯಾ ರೋಗ ಪತ್ತೆಯಾಗಿದೆ. ಸಾಂಕ್ರಮಿಕ ರೋಗದ ನಿಯಂತ್ರಣದ ಬಗ್ಗೆ ಆರೋಗ್ಯ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ಭಯ ಪಡುವ ಆವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಆರೋಗ್ಯಾಕಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದರು.
ಇದೇ ವೇಳೆ ಅರಣ್ಯ ಇಲಾಖೆಯ ಪ್ರಗತಿ ಪರೀಶೀಲನೆಯ ವೇಳೆ ಪ್ರತಿಕ್ರಿಯಿಸಿದ ಇಒ ಅರಣ್ಯ ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳನ್ನು ಎಲ್ಲ ವರ್ಗದ ಜನರಿಗೂ ತಲುಪುವಂತೆ ಮಾಡಿ ಎಂದು ಸಲಹೆ ನೀಡಿದರು. ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Be the first to comment on "ಅಧಿಕಾರಿಗಳು ಗೈರಾದರೆ ಶಿಸ್ತುಕ್ರಮಕ್ಕೆ ಶಿಫಾರಸು"