ಪೊಲೀಸ್ ಇಲಾಖೆ ಬಳಸಿ ಭೀತಿ ವಾತಾವರಣ ಸೃಷ್ಟಿ: ಕೊಟ್ಟಾರಿ ಆರೋಪ

ವಾರದ ಹಿಂದೆ ಭಿನ್ನ ಕೋಮುಗಳ ನಡುವೆ ನಡೆದ ವೈಯಕ್ತಿಕ ಜಗಳಕ್ಕೆ ಕೋಮು ಗಲಭೆಯ ಬಣ್ಣ ಹಚ್ಚಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯನ್ನು ಬಳಸಲಾಗಿದ್ದು, ಉಸ್ತುವಾರಿ ಸಚಿವರೇ ನೇರ ಹೊಣೆ ಎಂದು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಆರೋಪಿಸಿದ್ದಾರೆ.

ಶುಕ್ರವಾರ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಲ್ಲಡ್ಕದಲ್ಲಿ ಪೊಲೀಸರ ಮೂಲಕ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭಯದ ವಾತಾವರಣ ನಿರ್ಮಿಸುತ್ತಿರುವುದು ಖಂಡನೀಯ, ಒಂದು ವರ್ಗದ ಓಲೈಕೆಗೆ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಿ ಬಹುಸಂಖ್ಯಾತ ಹಿಂದೂಗಳ ಮೇಲೆ ಮಾತ್ರ ಕೇಸು ದಾಖಲಿಸುತ್ತಿದ್ದಾರೆ ಎಂದು ದೂರಿದರು.

ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ ದಾಂಧಲೆ ಸೃಷ್ಟಿಸಿರುವ ಮತ್ತು ಸುಳ್ಳು ದೂರು ಕೊಟ್ಟ ಕಿಡಿಗೇಡಿಗಳ ವಿರುದ್ದವೂ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು, ಪ್ರಕರಣದಲ್ಲಿ ಸಿಲುಕಿಸಲಾದ ಮಿಥುನ್ ಸೇರಿದಂತೆ ಅಮಾಯಕರ ಮೇಲಿನ ಪ್ರಕರಣವನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ವಿನಾ ಕಾರಣ ಕಲ್ಲಡ್ಕ ಪರಿಸರದ ಸುಮಾರು 60 ಮಂದಿಗೆ ಶಾಂತಿಭಂಗ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿರುವುದನ್ನೂ ಅವರು ಖಂಡಿಸಿದರು.

ಹಿಂದೆಲ್ಲ ಕಲ್ಲಡ್ಕದಲ್ಲಿ ಗಲಭೆ ನಡೆದ ವೇಳೆ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದರು. ಆದರೆ ಮೊನ್ನೆ ಘಟನೆ ಬಗ್ಗೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ಸಚಿವರು ಇದಕ್ಕೆ ಕಾರಣಕರ್ತರಾಗಿದ್ದಾರೆ. ಪ್ರಕರಣವನ್ನು ಜಿಲ್ಲೆಯಿಂದ ಹೊರತಾದ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.