ಕಲ್ಲಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ಯುವಕನೋರ್ವನಿಗೆ ತಂಡವೊಂದು ಚೂರಿಯಿಂದ ಇರಿದ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ಸ್ಥಿತಿ ತಲೆದೋರಿತು. ಬಳಿಕ ಸ್ಥಳಕ್ಕೆ ಬಂಟ್ವಾಳ ಪೊಲೀಸರ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
www.bantwalnews.com
ಕಲ್ಲಡ್ಕ ನಿವಾಸಿ ಮಹಮ್ಮದ್ ಹಾಶೀರ್ (31) ಗಾಯಗೊಳಗಾದ ಯುವಕ. ಇವರಲ್ಲದೆ, ಮಹಮ್ಮದ್ ಮಾಶೂಕ್ ಎಂಬಾತನಿಗೆ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ. ಇಬ್ಬರೂ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಆರೋಪಿಗಳ ಪತ್ತೆಗೆ ವ್ಯಾಪಕ ಕಾರ್ಯಾಚರಣೆ ನಡೆದಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ ಹಾಶೀರ್ ಮತ್ತು ಮಾಶೂಕ್ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಹಾಶೀರ್‌ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಈ ಸಂದರ್ಭ ಆರೋಪಿಗಳು ತೂರಿದ ಕಲ್ಲು ಮಾಶೂಕ್ ಗೆ ತಾಗಿದೆ ಎಂದು ದೂರಲಾಗಿದೆ. ಘಟನೆ ಬಳಿಕ ಕಲ್ಲಡ್ಕದ ಮೇಲಿನಪೇಟೆಯಲ್ಲಿ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಮುಚ್ಚಿದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಡಿವೈಎಸ್ಪಿ ರವೀಶ್ ಸಿ.ಆರ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ ನಾಲ್ಕು ಕೆಎಸ್ಸಾರ್ಪಿ ತುಕುಡಿಗಳೂ ಸ್ಥಳದಲ್ಲಿ ಬೀಡುಬಿಟ್ಟಿವೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ತಾಲೂಕಿನಾದ್ಯಂತ ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ. ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
videos
Be the first to comment on "ಕಲ್ಲಡ್ಕದಲ್ಲಿ ಇರಿತ ಪ್ರಕರಣ, ಪೊಲೀಸ್ ಬಿಗು ಬಂದೋಬಸ್ತ್"