ಅಜ್ಜ-ಅಜ್ಜಿ ತೀರಿಕೊಂಡಿದ್ದರು..!

 ಮಕ್ಕಳು ಅಜ್ಜ ಅಜ್ಜಿಯರ ಬಗ್ಗೆ  ಇರಿಸಿಕೊಳ್ಳುವಂತಹಾ ಒಂದು ರೀತಿಯ ಆತ್ಮೀಯ ಸಂಬಂಧ ಬಹಳಷ್ಟು ಬಾರಿ ಯಾರಿಗೂ ಅರ್ಥವಾಗುವುದಿಲ್ಲ, ಕಾಲ ಬದಲಾಗುತ್ತಿದ್ದಂತೆಯೇ ಅವಿಭಕ್ತ ಕುಟುಂಬಗಳೆಲ್ಲಾ ವಿಭಕ್ತ ಕುಟುಂಬಗಳಾಗಿ  ಒಡೆದು ಹೋಗುತ್ತಿದ್ದು, ಮಕ್ಕಳು ಅಜ್ಜ ಅಜ್ಜಿಯರನ್ನು ಕಳೆದುಕೊಳ್ಳುತ್ತಿದ್ದಾರೆ, ಆತ್ಮೀಯ ಸಂಬಂಧಗಳಿಂದ ದೂರದೂರವಾಗುತ್ತಿದ್ದಾರೆ.

  •  ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಅದು ಐದನೇ ತರಗತಿ, ಶಾಲೆಯಲ್ಲಿ ಆ ಶಿಕ್ಷಕಿ ಚಟುವಟಿಕೆಯನ್ನು ನಡೆಸುತ್ತಿದ್ದರು. ನೀವು ಶಾಲೆಗೆ ಸೇರುವ ಮೊದಲಿನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಿ , ಅಜ್ಜ-ಅಜ್ಜಿಯ ಜೊತೆಗಿನ ನಿಮ್ಮ ಒಡನಾಟವನ್ನು ಬರೆಯಿರಿ ಎಂದು  ಶಿಕ್ಷಕಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದರು. ಮಕ್ಕಳು ತಮ್ಮ ಪಾಡಿಗೆ ಬರೆದರು. ಪರೀಕ್ಷೆಯ ಸಮಯದಲ್ಲಿ ನಕಲು ಹೊಡೆಯುವ ಉದ್ದೇಶ ಇಲ್ಲದಿದ್ದರೂ, ಪಕ್ಕದವರು ಏನು ಮಾಡುತ್ತಾರೆ ಎಂಬ ಕುತೂಹಲದಿಂದ ಪಕ್ಕದವರ ಕಡೆಗೆ ಪರೀಕ್ಷಾ ಅವಧಿಯ ಪೂರ್ಣ ಗಮನವನ್ನು ನೀಡಿ ಕಡಿಮೆ ಅಂಕಗಳಿಸುವವರೂ ಇದ್ದಾರೆ. ಆದರೆ ಇಲ್ಲಿ ಹಾಗಾಗಲಿಲ್ಲ. ಎಲ್ಲಾ ಮಕ್ಕಳು ತಮ್ಮ ಅಜ್ಜ-ಅಜ್ಜಿಯನ್ನು ನೆನೆಸಿಕೊಂಡು ತಮ್ಮದೇ ಆದ ತುಂಟಬಾಲ್ಯದ ಲೋಕದತ್ತ ತೆರಳಿದ್ದರು. ಇಷ್ಟೇ ಆಗಿದ್ದರೆ. ಆ ಶಿಕ್ಷಕಿ ನನ್ನ ಬಳಿ ಈ ಘಟನೆ ಹೇಳುತ್ತಿರಲಿಲ್ಲ. ಇದರ ಜೊತೆಗೆ ಹಿರಿಯರ ಕಣ್ತೆರೆಸುವಂತಾ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು.

ಮಕ್ಕಳ ಬರವಣಿಗೆಯ ಅವಧಿ ಮುಗಿಯುತ್ತಿದ್ದಂತೆಯೇ  ಆ ಶಿಕ್ಷಕಿ ಮಕ್ಕಳಿಂದ ಅನುಭವಗಳನ್ನು ಬರೆದ ಕಾಗದಗಳನ್ನು ಪಡೆದುಕೊಂಡರು. ಆ ಕಾಗದದಲ್ಲಿನ ವಿಚಾರಗಳನ್ನು ಎಲ್ಲಾ ಮಕ್ಕಳಲ್ಲಿ ಹಂಚುತ್ತಾ , ತಾವು ಖುಷಿಪಟ್ಟರು, ಮಕ್ಕಳನ್ನೂ ಖುಷಿಪಡಿಸಿದರು. ಕೆಲಮಕ್ಕಳು ತಪ್ಪು ತಪ್ಪು ಬರೆದರು, ಇನ್ನೂ ಕೆಲವರು ಬಾಲ್ಯದ ಘಟನೆಗಳನ್ನು ಸಂಭ್ರಮಿಸಿ ಬರೆದದ್ದು  ಆ ಶಿಕ್ಷಕಿಗೂ ಖುಷಿಯೆನ್ನಿಸಿತ್ತು. ಆದರೆ  ವಿದ್ಯಾರ್ಥಿಯೊಬ್ಬ ಬರೆದಿದ್ದ ಸಾಲುಗಳ ವಿಮರ್ಶೆ ನಡೆಸಿದಾಗ ಶಿಕ್ಷಕಿಯ ಕಣ್ಣುಗಳಲ್ಲಿ ನೀರು ತುಂಬಿತ್ತು..

ನನ್ನ ಅಜ್ಜ ನನ್ನ ಅಪ್ಪನನ್ನು ತುಂಬಾ ಇಷ್ಟಪಡ್ತಾ ಇದ್ದರು, ಯಾವಾಗ್ಲು ಚಾಕಲೇಟು ತಂದುಕೊಡ್ತಾ ಇದ್ರು.. ನನ್ನ ಅಣ್ಣನನ್ನೂ ಅಜ್ಜ-ಅಜ್ಜಿ ತುಂಬಾ ಮುದ್ದಿನಿಂದ ನೋಡಿಕೊಳ್ಳುತ್ತಿದ್ದರು.. ಇದನ್ನು ನೋಡಿದ ಶಿಕ್ಷಕಿ ಆ ವಿದ್ಯಾರ್ಥಿಯಲ್ಲಿ ಕೇಳಿದರು-ಅಜ್ಜನಿಗೆ ನೀನಂದ್ರೆ ಇಷ್ಟ ಇಲ್ವಾ..? ॒ಎಂದು. ಅದಕ್ಕೆ ವಿದ್ಯಾರ್ಥಿ ಹೇಳಿದ  ಹಾಗಲ್ಲ ಟೀಚರ್, ನಾನು ಹುಟ್ಟುವಾಗಲೇ ನನ್ನ ಅಜ್ಜ-ಅಜ್ಜಿ ತೀರಿಕೊಂಡಿದ್ದರು, ನಾ ಇಬ್ಬರನ್ನೂ ನೋಡ್ಲಿಲ್ಲ, ಇದೆಲ್ಲಾ ಅಮ್ಮ ಹೇಳಿದ್ದು… ಎನ್ನುತ್ತಿದ್ದಂತೆಯೇ ಆ ವಿದ್ಯಾರ್ಥಿಯ ಕಣ್ಣುಗಳಲ್ಲಿ ನೀರು ತುಂಬಿತ್ತು. ಶಿಕ್ಷಕಿ ಸಮಾಧಾನ ಪಡಿಸುವಲ್ಲಿಗೆ ಆ ಘಟನೆ ಅಲ್ಲಿಗೇ ಮುಗಿದಿತ್ತು.  ಈ ವಿಚಾರ ವನ್ನು ನನಗೆ ತಿಳಿಸಿದ ಆ ಶಿಕ್ಷಕಿ, ಆ ವಿದ್ಯಾರ್ಥಿ ಅಜ್ಜ-ಅಜ್ಜಿಯ ಪ್ರೀತಿಗೆ ಹಾತೊರೆಯುತ್ತಿದ್ದ ಬಗ್ಗೆ ಮಾತನಾಡಿದರು.

ಮಕ್ಕಳು ಅಜ್ಜ ಅಜ್ಜಿಯರ ಬಗ್ಗೆ  ಇರಿಸಿಕೊಳ್ಳುವಂತಹಾ ಒಂದು ರೀತಿಯ ಆತ್ಮೀಯ ಸಂಬಂಧ ಬಹಳಷ್ಟು ಬಾರಿ ಯಾರಿಗೂ ಅರ್ಥವಾಗುವುದಿಲ್ಲ, ಕಾಲ ಬದಲಾಗುತ್ತಿದ್ದಂತೆಯೇ ಅವಿಭಕ್ತ ಕುಟುಂಬಗಳೆಲ್ಲಾ ವಿಭಕ್ತ ಕುಟುಂಬಗಳಾಗಿ  ಒಡೆದು ಹೋಗುತ್ತಿದ್ದು, ಮಕ್ಕಳು ಅಜ್ಜ ಅಜ್ಜಿಯರನ್ನು ಕಳೆದುಕೊಳ್ಳುತ್ತಿದ್ದಾರೆ, ಆತ್ಮೀಯ ಸಂಬಂಧಗಳಿಂದ ದೂರದೂರವಾಗುತ್ತಿದ್ದಾರೆ. ಮೇಲಿನ ಘಟನೆಯಲ್ಲಿ ಈ ಬಗೆಯ ಸನ್ನಿವೇಶ ನಡೆದುದಲ್ಲ,  ಆದರೂ ಆ ವಿದ್ಯಾರ್ಥಿಯಲ್ಲಿ ಅಜ್ಜ-ಅಜ್ಜಿ ಇಲ್ಲದ ಸಂಕಟ ಆವರಿಸಿತ್ತು ಎಂದಾದರೆ, ವಿಭಜನೆಯಾದ ಕುಟುಂಬಗಳಲ್ಲಿನ ಅಜ್ಜ-ಪುಳ್ಳಿಯರ ಸಂಬಂಧ ಹೇಗಿರಬಹುದು , ಯೋಚಿಸಿ ನೋಡಿ..!

ಮಾನಸಿಕವಾದ ಸಂಬಂಧ ಎಲ್ಲದಕ್ಕಿಂತಲೂ ಹೆಚ್ಚು ಆಕರ್ಷಣೆಯಾಗಿರುತ್ತದೆ. ಚಿಕ್ಕವಯಸ್ಸಿನಿಂದಲೂ ಮೊಮ್ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಜ್ಜ-ಅಜ್ಜಿಗೆ ಮಕ್ಕಳು ದೊಡ್ಡವರಾಗದೆ ಹಾಗೆ ಇದ್ದರೆ ಚೆನ್ನ ಎಂದು ಅನ್ನಿಸುವುದೂ ಇದೆಯಂತೆ. ಮಕ್ಕಳಾಟಿಕೆಯ ಜೊತೆಗೆ ಆ ಅಜ್ಜ-ಅಜ್ಜಿ ಪಡುವ ಸಂಭ್ರಮ ಆ ಇಳಿವಯಸ್ಸಿನಲ್ಲಿ ಅವರಿಗೆ ಎಲ್ಲೂ ಸಿಗದು. ಆದರೆ ಇಂದು ಒತ್ತಡದ ಬದುಕಿನ ನಡುವೆ ಅಪ್ಪ-ಅಮ್ಮ ತಮ್ಮ ಮಕ್ಕಳನ್ನು ಅಜ್ಜ-ಅಜ್ಜಿಯರ ಪ್ರೀತಿಯಿಂದ ವಂಚಿತರಾಗಿಸುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಈ ನಡುವೆ ಮಕ್ಕಳು ಟಿ.ವಿ.ಎನ್ನುವ ಕೃತಕತೆಗೆ ಶರಣಾಗಬೇಕಾಗುತ್ತದೆ. ತಾವು ತಮ್ಮ ಬಾಲ್ಯದಲ್ಲಿ ಅನುಭವಿಸಿದ ಅಜ್ಜ-ಅಜ್ಜಿಯರ ಪ್ರೀತಿ ವಾತ್ಸಲ್ಯದ ಬದುಕು ನಮ್ಮ ಮಕ್ಕಳಿಗೂ ಸಿಗಬೇಕು ಎನ್ನುವ ಆಲೋಚನೆಯೂ ಇಂದಿನ ಪೋಷಕರಲ್ಲಿ ಕಾಣುತ್ತಿಲ್ಲ. ಇದರ ಫಲವಾಗಿ ಮಕ್ಕಳನ್ನು ಶಿಕ್ಷಣದ ಒತ್ತಡಗಳ ನಡುವೆ ಸಿಲುಕಿಸಲಾಗುತ್ತಿದೆ.

ಒಂದು ಉದಾಹರಣೆ ಕೇಳಿ

ಅದೊಂದು ಕುಟುಂಬ, ಆ ದಂಪತಿಗೆ ಒಬ್ಬನೇ ಮಗ, ಬೆಂಗಳೂರಿನಲ್ಲಿ ವಾಸ್ತವ್ಯ. ಗಂಡ ಹೆಂಡತಿ ಬೆಳಿಗ್ಗೆ  ೮ ಕ್ಕೆ ಆಫೀಸಿಗೆ ಹೊರಟರೆ ವಾಪಾಸು ಬರುವುದು ರಾತ್ರಿ ೮ ಕ್ಕೆ. ಬೆಂಗಳೂರಿನಲ್ಲಿ ಕೆಲಸವಿದ್ದುದರಿಂದ ಹುಟ್ಟೂರು ಬಿಟ್ಟು ಬೆಂಗಳೂರಿನ ಫ್ಲ್ಯಾಟ್ ವೊಂದರಲ್ಲಿ ವಾಸ್ತವ್ಯವಿದ್ದಾರೆ. ಇಬ್ಬರ ಮುದ್ದಿನ ಮಗ ಅವಿನಾಶ್ ೬ ನೇ ತರಗತಿ ವಿದ್ಯಾರ್ಥಿ, ಅವನನ್ನು ಸ್ಥಳೀಯ ಕಾನ್ವೆಂಟ್ ಗೆ ಸೇರಿಸಲಾಗಿದೆ. ಬೆಳಿಗ್ಗೆ  ೮ ಕ್ಕೆ  ಮನೆ ಬಿಡುವ ಅವಿನಾಶ್,  ೯ ಕ್ಕೆ ಶಾಲೆ ಸೇರಿ  ಸಂಜೆ ೩.೩೦ ಕ್ಕೆ ಶಾಲೆಯಿಂದ ಹೊರಡುತ್ತಾನೆ.  ೫ ಗಂಟೆಗೆ ಮನೆಗೆ ತಲುಪುತ್ತಾನೆಯಾದರೂ, ಮನೆಯಲ್ಲಿ ಒಂಟಿಯಾಗಿರಬೇಕಲ್ಲಾ ಎಂದು ಅವನ ಹೆತ್ತವರು ಅವಿನಾಶ್ ನನ್ನು  ೪ ರಿಂದ ೫ ಕರಾಟೆ ಕ್ಲಾಸ್, ೫-೬ ಸಂಗೀತ ಕ್ಲಾಸ್, ೬ರಿಂದ ೭.೩೦ ತನಕ ಟ್ಯೂಷನ್ ಗೆ ಹಾಕಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗಿನ ಶಾಲಾ ಒತ್ತಡಗಳ ನಡುವೆ ಈ ಹೆಚ್ಚುವರಿ ತರಗತಿಗಳ ಚಿಂತೆ ಅವಿನಾಶ್ ಗೆ.  ಅಪ್ಪ-ಅಮ್ಮರ ಒತ್ತಡದ ಯಾಂತ್ರಿಕ ಬದುಕಿನ ನಡುವೆ ಈ ಅವಿನಾಶ್ ನ ಬದುಕೂ ಮುದುಡಿ ಹೋಗುತ್ತಿದೆ. ಇನ್ನೊಂದು ಬೇಸರದ ಸಂಗತಿ ಯೆಂದರೆ ಅವಿನಾಶ್ ಅಪ್ಪ -ಅಮ್ಮನ ಕೆಲಸದ ಕಾರಣದ ನೆಪದಿಂದ ಊರಿನಲ್ಲಿರುವ ಅಜ್ಜ-ಅಜ್ಜಿಯರನ್ನು ಕಾಣದೆ ವರ್ಷವಾಯಿತು. ಊರಿನಲ್ಲಿರುವ ಅಜ್ಜ-ಅಜ್ಜಿಯೂ ಪುಳ್ಳಿಯನ್ನು ನೋಡುವ ತವಕದಲ್ಲಿದ್ದಾರೆ. ಆದರೆ ಇದು ಅವಿನಾಶ್ ನ ಹೆತ್ತವರಿಗೆ ಅರ್ಥವಾಗಬೇಕಲ್ಲಾ..?

ಅಜ್ಜ-ಅಜ್ಜಿಯರ ಪ್ರೀತಿ ವಾತ್ಸಲ್ಯಕ್ಕೆ ಮಕ್ಕಳು ಎಷ್ಟು ಮಾರುಹೋಗುತ್ತಾರೆ ಎಂದರೆ, ಅವರನ್ನು ಬಿಟ್ಟಿರಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಮನೆಯೊಳಗಿನ ಅಜ್ಜ-ಅಜ್ಜಿಯರನ್ನು ಪ್ರೀತಿಯಿಂದ ಕಾಣುವ ಮೂಲಕ, ಎಳೆ ಮಕ್ಕಳಿಗೆ ನಾವು ಆದರ್ಶರಾಗಬೇಕು, ಅದನ್ನು ಬಿಟ್ಟು ಅಜ್ಜ-ಅಜ್ಜಿಯರನ್ನು ಮನೆಯಿಂದ ದೂರಮಾಡುವುದಲ್ಲ ಅಥವಾ ನಾವು ಅವರಿಂದ ದೂರವಾಗುವುದೂ ಅಲ್ಲ. ಒಟ್ಟಿನಲ್ಲಿ ದೊಡ್ಡವರ ನಡವಳಿಕೆ ಎಳೆಮಕ್ಕಳಲ್ಲಿ ಜೀವನೋತ್ಸಾಹ ತುಂಬಬೇಕಿದೆ,

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಅಜ್ಜ-ಅಜ್ಜಿ ತೀರಿಕೊಂಡಿದ್ದರು..!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*