ಸುನಿಲ್ ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ…

  • ಮೌನೇಶ ವಿಶ್ವಕರ್ಮ

ತರಗತಿಯೊಳಗೆ ಶಿಕ್ಷಕರಿಗೆ ಗೊತ್ತಿಲ್ಲದ ಅದೆಷ್ಟೋ ಸತ್ಯ ಸಂಗತಿಗಳು ಮಕ್ಕಳಿಗೆ ಗೊತ್ತಿರುತ್ತದೆ. ಶಿಕ್ಷಕರು ಮಕ್ಕಳ ನಡುವೆ ಮಕ್ಕಳಾದಾಗ ಮಾತ್ರ ಮಕ್ಕಳು ಮನಬಿಚ್ಚಿ ಮಾತನಾಡುತ್ತಾರೆ. ಶಿಕ್ಷಕರು-ಮಕ್ಕಳು ಜೊತೆಯಾಗಿ ಸತ್ಯದ ಹುಡುಕಾಟ ನಡೆಸುವ ಪ್ರಕ್ರಿಯೆಯಲ್ಲಿ ಮಕ್ಕಳು ಬದುಕು ಕಟ್ಟಿಕೊಳ್ಳುವ ಪಾಠ ಅರಿತುಕೊಳ್ಳುತ್ತಾರೆ. ಇಲ್ಲವಾದಲ್ಲಿ ಸುನಿಲ್‌ನಂತಹಾ ಅದ್ಭುತ ಪ್ರತಿಭಾನ್ವಿತರು  ಕೂತಲ್ಲೇ ಕಮರಿ ಹೋಗುತ್ತಾರೆ.

ಅಂಕಣ: ಮಕ್ಕಳ ಮಾತು

ಆ ತರಗತಿಯಲ್ಲಿ ನಡೆಯುತ್ತಿದ್ದುದು ಮಕ್ಕಳ ಪ್ರತಿಭಾನ್ವೇಷಣೆ. ಮಕ್ಕಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಆ ಶಿಕ್ಷಕಿ ಪಾಠದ ತರಗತಿಯಲ್ಲಿ ನಡೆಸುತ್ತಿದ್ದ ಈ ಚಟುವಟಿಕೆಯಲ್ಲಿ ಮಕ್ಕಳು ತಲ್ಲೀನರಾಗಿದ್ದರು. ಡ್ಯಾನ್ಸ್, ಭಾಷಣ, ಹಾಡು, ಬೋರ್ಡ್‌ನಲ್ಲಿ ಚಿತ್ರ ಬರೆಯಲು ಗೊತ್ತಿದ್ದವರು ಎದುರಿಗೆ ಬಂದು ತಮ್ಮ ಪ್ರದರ್ಶನ ನೀಡಬೇಕಾದ್ದು ಅಂದಿನ ಚಟುವಟಿಕೆಯಾಗಿತ್ತು.. ಮಕ್ಕಳು ಖುಷಿಯಿಂದಲೇ ಬರುತ್ತಿದ್ದರು. ತಮ್ಮ ಪ್ರತಿಭಾಪ್ರದರ್ಶನ ನೀಡುತ್ತಿದ್ದರು. ಆ ತರಗತಿಯಲ್ಲಿ ಪಾಠಕ್ಕೆ ಬಂದಿದ್ದ ಶಿಕ್ಷಕಿ ತಾನೂ ಮಕ್ಕಳಂತಾದ್ದರಿಂದ ಎಲ್ಲಾ ಮಕ್ಕಳು ಉತ್ಸಾಹದಿಂದ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಈಗ ವಿಷಯಕ್ಕೆ ಬರೋಣ, ಆ ತರಗತಿಯಲ್ಲಿ ಇದ್ದ ಒಬ್ಬ ವಿದ್ಯಾರ್ಥಿಯ ಹೆಸರು ಸುನಿಲ್. ಚಿಕ್ಕಂದಿನಲ್ಲೇ ಅಪಘಾತವೊಂದರಲ್ಲಿ ತನ್ನ ಬಲಕೈ ಕಳೆದುಕೊಂಡಿದ್ದ ಸುನಿಲ್, ವಿದ್ಯಾರ್ಥಿಗಳ ನಡುವೆ ಕುಳಿತು ಈ ಚಟುವಟಿಕೆಯನ್ನು ಅನುಭವಿಸುತ್ತಿದ್ದ.  ಈ ಮಧ್ಯೆ ಒಬ್ಬ ವಿದ್ಯಾರ್ಥಿ ಶಿಕ್ಷಕಿಯವರಲ್ಲಿ ಹೇಳಿದ ಟೀಚರ್, ಸುನಿಲ್ ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆಅಂತ.  ಶಿಕ್ಷಕಿಗೆ ಈ ಮಾತು ತಮಾಷೆಯಾಗಿ ಕಂಡಿತು. ಅವರಂದರು ಏನು..? ಸುನಿಲ್ ಡ್ಯಾನ್ಸ್ ಮಾಡ್ತಾನಾ.. ಸುಮ್ನೆ ಇರು ನೀನು ಎಂದು. ಸುನಿಲ್ ಪರವಾಗಿ ವಾದ ಮಂಡಿಸಿದ್ದ  ಆ ವಿದ್ಯಾರ್ಥಿಗೆ ಬೇಸರವಾಯಿತು. ಆದರೆ ಅಲ್ಲಿ ಬೇರೆ ವಿದ್ಯಾರ್ಥಿಗಳು ವಾದ ಮುಂದುವರಿಸಿದರು. ಹೌದು ಟೀಚರ್ , ಸುನಿಲ್ ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ. ಒಮ್ಮೆ ಮಾಡ್ಲಿ ಟೀಚರ್ ಅಂದಾಗ ಬೇಡವೆನ್ನಲು ಟೀಚರ್ ಮನಒಪ್ಪಲಿಲ್ಲ.

ಸುನಿಲ್ ಬೋರ್ಡ್‌ನ ಬಳಿ ಬಂದು ನಿಂತ, ಮ್ಯೂಸಿಕ್ ಇಲ್ಲದೆ ಸುನಿಲ್ ಯಾವ ಡ್ಯಾನ್ಸ್ ಮಾಡ್ತಾನೆ ಅಂತ ಟೀಚರ್ ಗೆ ಕುತೂಹಲವಿತ್ತು. ಆದರೆ ಈ ಸನ್ನಿವೇಶದಲ್ಲಿ ಹೆದರದ ಸುನಿಲ್, ಎಲ್ಲಾ ವಿದ್ಯಾರ್ಥಿಗಳು ಖುಷಿಪಡುವ ರೀತಿಯಲ್ಲಿ  ಡ್ಯಾನ್ಸ್ ಮಾಡಿದ, ಬ್ರೇಕ್ ಡ್ಯಾನ್ಸ್ ಮಾದರಿಯಲ್ಲಿದ್ದ ಅವನ ನೃತ್ಯ ನೋಡಿ  ಟೀಚರ್‌ಗೆ ಅಚ್ಚರಿಯಾಯಿತು. ಆರೋಗ್ಯವಂತರಾಗಿದ್ದ ಉಳಿದ ಮಕ್ಕಳಲ್ಲಿ ಇಲ್ಲದ ಉತ್ಸಾಹ ಇವನಲ್ಲಿ ಎದ್ದುಕಾಣುತಿತ್ತು. ಇಂತಹಾ ಪ್ರತಿಭಾವಂತನ ಬಗ್ಗೆ ತಾನು ಗೊತ್ತಿಲ್ಲದೆ ಮಾತನಾಡಿದೆನೇ ಎಂಬ  ನೋವು ಅವರಲ್ಲಿ ಆವರಿಸಿ, ಕಣ್ಣುಗಳಲ್ಲಿ ನೀರಹನಿ ಜಿನುಗಿತ್ತು. ಡ್ಯಾನ್ಸ್ ಮುಗಿದ ಬಳಿಕ ಟೀಚರ್ ಅವನ ನೃತ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ತರಗತಿಯ ಮಕ್ಕಳೆಲ್ಲಾ ಚಪ್ಪಾಳೆ ಹಾಕಿದರು. ಒಟ್ಟಿನಲ್ಲಿ  ಆ ದಿನ ತರಗತಿಯಲ್ಲಿ ಪಾಠಮಾಡದ ಶಿಕ್ಷಕಿಗೆ ಈ ಘಟನೆಯಿಂದ ೪ ಪಾಠ ಮುಗಿಸಿದಷ್ಟು ಖುಷಿಯಾಗಿತ್ತು.

ಈ ಹಿಂದೆ ನಾನು ಇದೇ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದೆ, ಶಾಲೆಯಲ್ಲಿ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡುವ ಕುರಿತಾಗಿ.ಇದಕ್ಕೆ ಇನ್ನೊಂದು ಮುಖ್ಯಕಾರಣ ಈ ಘಟನೆಯಲ್ಲಿ ಕಾಣುವಂತಾದ್ದು, ಮಕ್ಕಳನ್ನು ಅರಿತುಕೊಳ್ಳದೇ ಅವರ ಬಗ್ಗೆ ಶಿಕ್ಷಕ/ಶಿಕ್ಷಕಿ ತೆಗೆದುಕೊಳ್ಳುವ ರೆಡಿಮೇಡ್ ನಿರ್ಧಾರಗಳು.

ಸುನಿಲ್ ತನ್ನ ಒಂದು ಕೈ ಇಲ್ಲದ ಸ್ಥಿತಿಯಲ್ಲೂ ಚೆನ್ನಾಗಿ ಡ್ಯಾನ್ಸ್ ಮಾಡಬಲ್ಲ ಎನ್ನುವುದು ಟೀಚರ್ ಗೆ ಗೊತ್ತಿರಲಿಲ್ಲ. ಆದರೆ ಅವನ ಹೆಸರು ಪ್ರಸ್ತಾಪವಾಗುತ್ತಲೇ ಅವನ ಬಗ್ಗೆ ನೆಗೆಟಿವ್  ಹೇಳಿಕೆಯನ್ನು ಆ ಶಿಕ್ಷಕಿ ಬಹಿರಂಗವಾಗಿ ನೀಡಿದ್ದರು. ಈ ಘಟನೆಯಲ್ಲಿ ಶಿಕ್ಷಕಿ ನೀಡಿದ ಏನು..? ಸುನಿಲ್ ಡ್ಯಾನ್ಸ್ ಮಾಡ್ತಾನಾ.. ಸುಮ್ನೆ ಇರು ನೀನು ಎಂಬ ಹೇಳಿಕೆಗೆ ಎಲ್ಲ  ವಿದ್ಯಾರ್ಥಿಗಳು ಒಕ್ಕೊರಲ ವಾದ ಮಂಡಿಸಿದ್ದರಿಂದ ಸುನಿಲ್ ಎಲ್ಲರ ಮುಂದೆ ಡ್ಯಾನ್ಸ್ ಮಾಡಲು ಅವಕಾಶ ದೊರೆಯಿತು. ಎಲ್ಲಿಯಾದರೂ ಶಿಕ್ಷಕಿಯ ಮಾತಿಗೆ ಗೌರವ ಕೊಟ್ಟು ವಿದ್ಯಾರ್ಥಿಗಳು ಸುಮ್ಮನೇ ಕುಳಿತ್ತಿದ್ದರೆ, ಸುನಿಲ್ ಅದ್ಬುತ ನೃತ್ಯಪಟು ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ತರಗತಿಯೊಳಗೆ ಶಿಕ್ಷಕರಿಗೆ ಗೊತ್ತಿಲ್ಲದ ಅದೆಷ್ಟೋ ಸತ್ಯ ಸಂಗತಿಗಳು ಮಕ್ಕಳಿಗೆ ಗೊತ್ತಿರುತ್ತದೆ. ಶಿಕ್ಷಕರು- ಮಕ್ಕಳ ನಡುವೆ ಮಕ್ಕಳಾದಾಗ ಮಾತ್ರ ಮಕ್ಕಳು ಮನಬಿಚ್ಚಿಮಾತನಾಡುತ್ತಾರೆ. ಶಿಕ್ಷಕರು-ಮಕ್ಕಳು ಜೊತೆಯಾಗಿ ಸತ್ಯದ ಹುಡುಕಾಟ ನಡೆಸುವ ಪ್ರಕ್ರಿಯೆಯಲ್ಲಿ ಮಕ್ಕಳು ಬದುಕು ಕಟ್ಟಿಕೊಳ್ಳುವ ಪಾಠ ಅರಿತುಕೊಳ್ಳುತ್ತಾರೆ. ಇಲ್ಲವಾದಲ್ಲಿ ಸುನಿಲ್ ನಂತಹಾ ಅದ್ಭುತ ಪ್ರತಿಭಾನ್ವಿತರು  ಕೂತಲ್ಲೇ ಕಮರಿ ಹೋಗುತ್ತಾರೆ.

ಇನ್ನೊಂದು ಪ್ರಾಮುಖ್ಯ ವಿಚಾರವೆಂದರೆ ಇಂತಹಾ ಘಟನೆಗಳಾದಾಗ ಕೆಲವೊಮ್ಮೆ ಶಿಕ್ಷಕರಿಗೆ ಮಕ್ಕಳ ಮುಂದೆ ಪ್ರತಿಷ್ಠೆ ಕಾಡುತ್ತದೆ. ಮಕ್ಕಳ ಎದುರು ತಾನು ಚಿಕ್ಕದಾಗಬಾರದು, ತಾನು ಹೇಳಿದ್ದೇ ಸರಿ ಎನ್ನುವುದರ ಮೂಲಕ ಮಕ್ಕಳ ಅಭಿಪ್ರಾಯಕ್ಕೆ ವಿರುದ್ದವಾಗಿ ಮಾತನಾಡುತ್ತಾರೆ. ಮೇಲಿನ ಘಟನೆಯನ್ನು ಗಮನಿಸಿ, ಅಲ್ಲಿ ಶಿಕ್ಷಕಿ ವಿದ್ಯಾರ್ಥಿಗಳು ವಾದ ಮುಂದುವರಿಸಿದಾಗಲೂ, ಸುನಿಲ್ ಗೆ ಅವಕಾಶ ಒದಗಿಸದೇ ಇದ್ದರೆ ಅಥವಾ ಸುನಿಲ್ ನೃತ್ಯಮಾಡಿ ಮುಗಿಸಿದ ಮೇಲೆ ಅವನನ್ನು ಪ್ರೋತ್ಸಾಹಿಸದೇ ಹೀಯಾಳಿಸಿದರೇ .ಇಲ್ಲಆ ತರಗತಿಯ ಒಳ್ಳೆಶಿಕ್ಷಕಿ ಇಲ್ಲಿ ಅಂತಹುದಕ್ಕೆ ಅವಕಾಶಕೊಡಲಿಲ್ಲ. ಹಾಗಾಗಿ ಸುನಿಲ್ ತರಗತಿಯಲ್ಲಿ ಹೀರೋ ಆದ. ಪ್ರತಿದಿನವೂ, ಪ್ರತಿಕ್ಷಣವೂ ಸುನಿಲ್ ನಂತಾ ಹೀರೋಗಳು ತರಗತಿಗಳಲ್ಲಿ ಹುಟ್ಟಿದಾಗ ಮಾತ್ರ ಮಕ್ಕಳ ಹಕ್ಕುಗಳಿಗೆ ಅರ್ಥಬರುತ್ತದೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಸುನಿಲ್ ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ…"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*