ಸಿದ್ಧಕಟ್ಟೆಯಲ್ಲಿ ಶನಿವಾರ ಮಾರ್ಚ್ ೨೫ರಂದು ನಡೆಯುವ ಬಂಟ್ವಾಳ ತಾಲೂಕು ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಗಳನ್ನು ಹಾಗೂ ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ಏಳು ದ್ವಾರಗಳು ಸಜ್ಜಾಗಿವೆ ಎಂದು ಬಿ.ಸಿ.ರೋಡ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು.
ಮೂಡಬಿದಿರೆಯಿಂದ ಬಂಟ್ವಾಳ ತಾಲೂಕು ಪ್ರವೇಶಿಸುವಾಗ ಸಂಗಬೆಟ್ಟಿನಲ್ಲಿ ವೀರಭದ್ರ ಮಹಮ್ಮಾಯಿ ದೇವಸ್ಥಾನ ಸಂಗಬೆಟ್ಟು ವತಿಯಿಂದ ರತ್ನಾಕರವರ್ಣಿ ದ್ವಾರ, ಸೈಂಟ್ ಪ್ಯಾಟ್ರಿಕ್ ಚರ್ಚ್ ಸಿದ್ಧಕಟ್ಟೆ ವತಿಯಿಂದ ಚರ್ಚ್ ಬಳಿ ಚೆನ್ನಪ್ಪ ಶೆಟ್ಟಿ ದ್ವಾ, ಕುದ್ಕೋಳಿಯಲ್ಲಿ ಓಂ ಫ್ರೆಂಡ್ಸ್ ಕುದ್ಕೋಳಿ ವತಿಯಿಂದ ಪಂಜೆ ಮಂಗೇಶರಾಯ ದ್ವಾರ, ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನ ಕೋರ್ಯಾರು ವತಿಯಿಂದ ನಾಡೋಜ ಪಂಪ ದ್ವಾರ, ಬಂಟರ ಸಂಘ ಸಿದ್ಧಕಟ್ಟೆ ವತಿಯಿಂದ ಸಿದ್ಧಕಟ್ಟೆ ಹೃದಯ ಭಾಗದಲ್ಲಿ ಚಂದ್ರರಾಜ ಶೆಟ್ಟಿ ದ್ವಾರ, ಜೈ ಮಾತಾ ಭಜನಾ ಮಂಡಳಿ ಉಪ್ಪಿರ ವತಿಯಿಂದ ವಿಶ್ವನಾಥ ಶೆಟ್ಟಿ ದ್ವಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ವತಿಯಿಂದ ಸಭಾಂಗಣದ ಮುಖ್ಯದ್ವಾರವಾದ ಶಿವರಾಮ ಕಾರಂತ ದ್ವಾರ. ಹೀಗೆ ಏಳು ದ್ವಾರಗಳು ಸಮ್ಮೇಳನಕ್ಕೆ ಸಾಹಿತ್ಯಾಸಕ್ತರನ್ನು ಸ್ವಾಗತಿಸಲಿವೆ.
ಸಮ್ಮೇಳನ ಮುಖ್ಯ ವೇದಿಕೆಗೆ ಸ್ಥಳದಾನಿಗಳಾದ ದಿವಂಗತ ಐ.ಕೃಷ್ಣರಾಜ ಬಲ್ಲಾಳ ಹಾಗೂ ಸಭಾಂಗಣಕ್ಕೆ ಸಿದ್ಧಕಟ್ಟೆಯ ಹೆಸರಾಂತ ಸಾಹಿತಿ ದಿವಂಗತ ಏರ್ಯ ಚಂದ್ರಭಾಗಿ ರೈ ಅವರ ಹೆಸರನ್ನು ಇಡಲಾಗಿದೆ.
ಕನ್ನಡ ಸಾಹಿತ್ಯ ಯಕ್ಷಗಾನ ಹಿನ್ನೆಲೆಯನ್ನು ಹೊಂದಿರುವ ಸಿದ್ಧಕಟ್ಟೆಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾದರಿ ಸಾಹಿತ್ಯ ಸಮ್ಮೇಳನವನ್ನಾಗಿಸಬೇಕು ಎಂಬ ಸದಾಶಯದೊಂದಿಗೆ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹಿರಿಯರಾದ ಅರ್ಕಕೀರ್ತಿ ಇಂದ್ರ ಅವರ ಗೌರವಾಧ್ಯಕ್ಷತೆಯಲ್ಲಿ ಯುವ ಉತ್ಸಾಹಿ ಮುಂದಾಳು ಪ್ರಭಾಕರ ಪ್ರಭು ಅಧ್ಯಕ್ಷತೆಯಲ್ಲಿ ಊರಿನ ಗಣ್ಯರು, ಪದಾಕಾರಿಗಳು, ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಸ್ವಾಗತ ಸಮಿತಿ ಕೆಲಸ ಮಾಡುತ್ತಿದೆ. ಇದರಡಿ ಮೆರವಣಿಗೆ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ವಚ್ಛತಾ ಸಮಿತಿ ಮೊದಲಾದ ಉಪಸಮಿತಿಗಳು ಇವೆ.
ಮೆರವಣಿಗೆ, ಉದ್ಘಾಟನಾಸಮಾರಂಭ ಸಹಿತ ವಿವಿಧ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಲಿವೆ ಎಂದು ಸಂಘಟಕರು ತಿಳಿಸಿದ್ದಾರೆ. ವೇದಿಕೆ ಸಮಿತಿಯ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ. ಯೋಗೀಶ ಕೈರೋಡಿ ವಹಿಸಿದ್ದಾರೆ.
೨೫ರಂದು ಬೆಳಗ್ಗೆ ೮.೩೦ಕ್ಕೆ ಸರಿಯಾಗಿ ಕನ್ನಡ ಭುವನೇಶ್ವರಿಯ ಅದ್ದೂರಿ ಮೆರವಣಿಗೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಸಮ್ಮೇಳನಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಗುವುದು. ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕಲಾತಂಡಗಳು, ಸ್ತ್ರೀಶಕ್ತಿ ಸಂಘಟನೆಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ವಾದ್ಯ ತಂಡ, ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ. ವಿಶೇಷ ರೀತಿಯ ಮೆರವಣಿಗೆ ಉದ್ಘಾಟನೆ ನಡೆಯಲಿದೆ ಎಂದು ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷ ದಿನೇಶ ಸುಂದರ ಶಾಂತಿ ಮಾಹಿತಿ ನೀಡಿದ್ದಾರೆ
ಸುಮಾರು ೨೫೦೦ ಮಂದಿ ಸಾಹಿತ್ಯಾಭಿಮಾನಿಗಳು ಸೇರುವ ನಿರೀಕ್ಷೆ ಸ್ವಾಗತ ಸಮಿತಿಗೆ ಇದೆ. ಸುಮಾರು ೧೫ಕ್ಕಿಂತಲೂ ಹೆಚ್ಚು ಪುಸ್ತಕ ಮಳಿಗೆಗಳು ಇರಲಿವೆ. ಉದ್ಘಾಟನಾ ಸಮಾರಂಭಕ್ಕೆ ಮುನ್ನ ಮೂಡುಬಿದರೆ ರಾಜೇಶ್ ಭಟ್ ನಿರ್ದೇಶನದಲ್ಲಿ ಸ್ವಾಗತ ನೃತ್ಯ ನಡೆಯಲಿದೆ.
ಗೋಷ್ಠಿಗಳ ನಡುವೆ ಸ್ಥಳೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ ಮೂಡುಬಿದರೆ ಆಳ್ವಾಸ್ ವತಿಯಿಂದ ೨೫೦ ಕಲಾವಿದರ ಕಲಾಪ್ರದರ್ಶನ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಭಾಕರ ಪ್ರಭು, ಪ್ರಧಾನ ಕಾರ್ಯದರ್ಶಿ ರಮಾನಂದ, ಕೋಶಾಕಾರಿ ಡಾ. ಸುದೀಪ್ ಕುಮಾರ್ ತಿಳಿಸಿದ್ದಾರೆ.
Be the first to comment on "ಸಿದ್ಧಕಟ್ಟೆ ಸಾಹಿತ್ಯಾಸಕ್ತರ ಸ್ವಾಗತಕ್ಕೆ ಸಪ್ತ ದ್ವಾರಗಳು"