ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನಲ್ಲಿ ಪ್ರತಿಭಾನ್ವಿತರಿಗೆ ಸನ್ಮಾನ

ಮಂಗಳೂರು ವಿಶ್ವವಿದ್ಯಾನಿಲಯದ 2015-16 ನೇ ಸಾಲಿನ ಬಿ.ಕಾಂ, ಬಿ.ಎಸ್ಸಿ, ಎಂಕಾಂ ಪರೀಕ್ಷೆಯಲ್ಲಿ ಏಳು ರ್‍ಯಾಂಕ್ ಹಾಗೂ ಆರು ಚಿನ್ನದ ಪದಕ/ನಗದು ಪುರಸ್ಕಾರ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿಯರನ್ನು ಕಾಲೇಜಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನಲ್ಲಿ ನಡೆದ ಶಿಕ್ಷಕ – ರಕ್ಷಕ ಸಂಘದ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್‍ಭ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್, ವಿದ್ಯಾರ್ಥಿಯಾದವನು ತನ್ನ ಕಲಿಕೆಯ ಸಮಯದಲ್ಲಿ ವಿಶೇಷ ಆಸಕ್ತಿಯೊಂದಿಗೆ ಅಹರ್ನಿಶಿ ಪ್ರಯತ್ನವನ್ನು ಮಾಡಬೇಕು. ಆಧುನಿಕ ಆಕರ್ಷಣೆಯಿಂದ ತನ್ನ ಕರ್ತವ್ಯದ ಕಡೆಗೆ ಗಮನ ನೀಡಬೇಕು. ಓರ್ವ ವಿದ್ಯಾರ್ಥಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಆತನ ದುಡಿಮೆಯೊಂದಿಗೆ ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿಯು ಅಷ್ಟೇ ಮುಖ್ಯವಾದುದು ಎಂದು ಹೇಳಿದರು.

ಸಂಸ್ಥೆಯೊಂದರಲ್ಲಿರುವ ನಿಯಮಾವಳಿಗಳು ಇರುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅದನ್ನು ಪಾಲಿಸಿ ಕಲಿತವರಿಗೆ ಯಶಸ್ಸು ನಿಶ್ಚಿತ. ಆದರೆ ಮೊಬೈಲ್‌ನಂತಹ ಆಧುನಿಕ ಸಾಧನಗಳು ಇಂದು ಮಕ್ಕಳ ಮನೋಸ್ಥಿತಿ ಹಾಳು ಮಾಡುತ್ತಿರುವುದು ವಿಷಾದನೀಯ. ಹೊಸ ಜೀವನಶೈಲಿಯ ಕಡೆಗೆ ತಿರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿ ಉತ್ತಮ ಫಲಿತಾಂಶ ಪಡೆದಾಗ ಆತನ ಸಂತೋಷದೊಂದಿಗೆ ಹೆತ್ತವರಿಗೆ ಮತ್ತು ಕಾಲೇಜಿಗೆ ಕೀರ್ತಿ ಬರುತ್ತದೆ. ಕಾಲೇಜು ನಿರಂತರ ರ್‍ಯಾಂಕ್ ಪಡೆಯುವಲ್ಲಿ ಹೆತ್ತವರ ಕೊಡುಗೆಯು ಗಮನಾರ್ಹವಾದುದು ಎಂದರು.

ಕಾಲೇಜಿನಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರ್ರೊ. ಭಾರತಿ.ಎಸ್ ಭಟ್ ಮತ್ತು ಕಾಲೇಜಿನ ಸಹಾಯಕರಾದ ಜಿ.ಎನ್ ನೋಣಯ್ಯ ಮತ್ತು ಸ್ಟೂಡೆಂಟ್ ಫೇಕಲ್ಟಿ ತರಗತಿ ನಡೆಸಿದ ವಿದ್ಯಾರ್ಥಿಗಳನ್ನು ಈ ಸಂಧರ್ಭದಲ್ಲಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬಿ.ಎಸ್ಸಿ. ವಿಭಾಗದಲ್ಲಿ ಪ್ರಥಮ ರ್‍ಯಾಂಕ್  ವಿಜೇತ ವಿದ್ಯಾರ್ಥಿನಿ ಕು. ಕಾವ್ಯ ಕೆ. ನಾಯಕ್ ಇವರು ಮಾತನಾಡಿ ರ್‍ಯಾಂಕ್ ಪಡೆಯುವಲ್ಲಿ ತನ್ನ ಪರಿಶ್ರಮದೊಂದಿಗೆ ಸಂಸ್ಥೆ ಮತ್ತು ಹೆತ್ತವರ ಸಹಕಾರವನ್ನು ಸ್ಮರಿಸಿದರು. ರ್‍ಯಾಂಕ್ ಪಡೆಯುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಅಹರ್ನಿಸಿ ಪ್ರಯತ್ನವನ್ನು ಮಾಡಬೇಕೆಂದು ಕಿವಿ ಮಾತು ಹೇಳಿದರು