ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ

ಲೇಖನ: ಪ್ರೊ. ರಾಜಮಣಿ ರಾಮಕುಂಜ

ಪೂರ್ವದಲ್ಲಿ ಸುಳ್ಳಮಲೆ ಬಳ್ಳಮಲೆಗಳು ಆವರಿಸಿಕೊಂಡು; ಗದ್ದೆ, ತೋಟ, ತೊರೆಗಳನ್ನು ತನ್ನ ಸುತ್ತಲೂ ಹಾಸಿಕೊಂಡು ಅತ್ಯಂತ ಸುಂದರ ಹಾಗೂ ಭವ್ಯ ತಾಣವಾಗಿ, ಯಾವತ್ತೂ ಮಂಗಳಕ್ಕೇ ಇಂಬುಕೊಡುತ್ತಿರುವ ಪ್ರಸಿದ್ಧ ಕ್ಷೇತ್ರವೇ ಮೊಗರನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವಾಲಯ. ’ಮದ್ಯಾನೊ ಮುಟ್ಟ ನೆಟ್ಲ ಮದ್ಯಾನೊಡ್ದ್ ಬುಕ್ಕ ನಟ್ಲ’ ಎಂಬ ತುಳುವಿನ ಆಡು ನುಡಿಯಂತೆ, ಅನ್ಯಾಯದ ಚಿಂತನೆಗಳನ್ನು ಯಾವನೇ ಮಾಡಿದರೂ ಕೂಡಾ ನಿಟಿಲಾಪುರಕೆ ಸಂಬಂಧಪಟ್ಟಂತೆ ಸೂರ್ಯೋದಯದಿಂದ ಅಸ್ತಂಗತನಾಗುವುದರ ಒಳಗೆ ಆತ ಅದರ ಪ್ರತಿಫಲ ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸಲೇ ಬೇಕಾಗುತ್ತದೆ ಎಂದು ಊರಿನ ಜನ ಇಂದಿಗೂ ಹೇಳುತ್ತಿದ್ದಾರೆ.

ಮಂಗಳೂರಿನಿಂದ 23 ಕಿ.ಮೀ. ದೂರದಲ್ಲಿರುವ ಈ ದೇವಾಲಯವನ್ನು ಮಂಗಳೂರು-ಬೆಂಗಳೂರು ರಾ ಷ್ಟ್ರೀಯ ಹೆದ್ದಾರಿಯಲ್ಲಿಯ ಕಲ್ಲಡ್ಕ ಎಂಬಲ್ಲಿಂದ ವಿಟ್ಲ ರಸ್ತೆಯಲ್ಲಿ ಎರಡು ಕಿ.ಮೀ. ಕ್ರಮಿಸಿದರೆ, ಬಲಬದಿಯಲ್ಲಿರುವ ರಸ್ತೆಯಲ್ಲಿ ಮುಂಬರಿದು ರೈಲ್ವೇ ಗೇಟಿನ ನಂತರ ಬಲಕ್ಕೆ ಕವಲೊಡೆಯುವ ಮಂಚಿ ರಸ್ತೆಯ ಮೂಲಕ ತಲುಪಬಹುದು. ಜನರ ಆಡು ನುಡಿ ತುಳುವಿನಲ್ಲಿ ’ನೆಟ್ಲ’ ಎಂದು ಪ್ರಸಿದ್ಧವಾದ ಈ ಪುಣ್ಯ ಕ್ಷೇತ್ರಕ್ಕೆ ಸರಕಾರದ ವತಿಯಿಂದ ನಿಗದಿತವಾದ ತಸ್ತೀಕು 147.80 ಪೈಸೆ ಮಾತ್ರ. ದ.ಕ. ಜಿಲ್ಲೆಯ ಅಪೂರ್ವವಾದ ಉದ್ಭವ ಲಿಂಗಗಳಲ್ಲಿ ಇಲ್ಲಿನ ಶಿವಲಿಂಗವೂ ಒಂದು. ಸರಿಯಾದ ಐತಿಹಾಸಿಕ ಲಭ್ಯ ಮಾಹಿಗಳಿಲ್ಲವಾದ ಕಾರಣ ದೇವಾಲಯದ ಕಾಲ ನಿರ್ಣಯ ಅಸಾಧ್ಯವಾಗಿದೆ. ಆದರೂ, ಸುಮಾರು ಒಂದು ಸಾವಿರ ವರ್ಷಕ್ಕೂ ಹಿಂದಕ್ಕೆ ಇದರ ಪ್ರತಿಷ್ಠಾಪನಾ ಕಾರ್ಯ ನೆರವೇರಿರಬಹುದೆಂದು ಆರೂಢ ಪ್ರಶ್ನೆಯಲ್ಲಿ ಹೇಳಲಾಗಿದೆಯೆಂದು ಭಕ್ತ ಜನರ ಮಾತು. ದೇವಾಲಯದ ಈ ಹಿಂದಿನ ಜೀರ್ಣೋದ್ಧಾರದ ಸಂದರ್ಭದಲ್ಲಿ ಗರ್ಭಗುಡಿಯ ಪಂಚಾಂಗವನ್ನು ಅಗೆಯುವಾಗ ಬೆಳ್ಳಿಯ ತಗಡುಗಳು ದೊರಕಿದ್ದು, ಅದರಲ್ಲಿ ಉಕ್ತವಾಗಿರುವಂತೆ ಸುಮಾರು ೫೦೦ ವರ್ಷಗಳ ಹಿಂದೆ ಅಕ್ಕಮ್ಮದೇವಿ ಎಂಬ ಜೈನ ಮಹಿಳೆ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಳು ಎಂಬುದು ತಿಳಿದು ಬರುತ್ತದೆ. ಈ ಹಿಂದೆ ಈಗಿನ ಕಲ್ಲಡ್ಕದ ಬಳಿಯ ಕಾಂಪ್ರಬೈಲು ಎಂಬಲ್ಲಿ ನೆಲೆನಿಂತು ಪೂಜೆಗೊಳ್ಳುತ್ತಿರುವ ಅಜ್ಜೇರ ದೈವಗಳು ಘಟ್ಟದಿಂದ ಕೆಳಗಿಳಿದು ಬರುವಾಗ ಸುಬ್ರಹ್ಮಣ್ಯ ದೇವಾಲಯದ ಧ್ವಜಸ್ತಂಭವನ್ನು ಮೂರು ತುಂಡುಗಳನ್ನಾಗಿ ಮಾಡಿ ತಂದು ಬುಡದ ತುಂಡನ್ನು ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿಯೂ, ಮಧ್ಯದ ತುಂಡನ್ನು ಕಾಂಪ್ರಬೈಲು ಉಳ್ಳಾಳ್ತಿ ದೈವಸ್ಥಾನದಲ್ಲಿಯೂ ತುದಿಯ ತುಂಡನ್ನು ನಿಟಿಲಾಕ್ಷ ಸದಾಶಿವ ದೇವಾಲಯದಲ್ಲಿಯೂ ಪ್ರತಿಷ್ಠೆ ಮಾಡಿದುದಾಗಿ ಸ್ಥಳ ಪುರಾಣವಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸುಬ್ರಹ್ಮಣ್ಯದಲ್ಲಿ ಇಂದಿಗೂ ಧ್ವಜಸ್ಥಂಭವಿಲ್ಲ, ಬರೆಯ ದಂಡೆಮರ ಮಾತ್ರವಿದೆ. ಇದಲ್ಲದೆ ನಿಟಿಲಾಪುರದಲ್ಲಿ ಮೊದಲು ಧ್ವಜಾರೋಹಣವಾಗಿ ಅಲ್ಲಿನ ಧ್ವಜ ಇಳಿಸಿದ ನಂತರ ಕಾಂಪ್ರಬೈಲಿನಲ್ಲಿ ಧ್ವಜಾರೋಹಣ ಮಾಡಿ, ಅವರೋಹಣದ ನಂತರ ಕಡೇಶ್ವಾಲ್ಯ ದೇವಸ್ಥಾನದಲ್ಲಿ ಧ್ವಜ ಏರುವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. (ಇನ್ನೊಂದು ಮೂಲದ ಪ್ರಕಾರ, ಕಾಂಪ್ರಬೈಲು ಉಳ್ಳಾಳ್ತಿಯ ಕಿರುವಾಳು ನೆಟ್ಲಕ್ಕೆ ಬಂದು ಧ್ವಜಾರೋಹಣದ ನಂತರ ಕಾಂಪ್ರಬೈಲಿನಿಂದ ಕಡೇಶ್ವಾಲ್ಯಕ್ಕೆ ಹೋಗಿ ಅಲ್ಲಿ ಕೊಡಿಯೇರುವುದು ರೂಢಿಯಲ್ಲಿತ್ತು. ನೆಟ್ಲಕ್ಕೆ ಸಂಬಂಧಿಸಿದಂತೆ ಈ ಕ್ರಮವು ನಿಂತು ಹೋಗಿ ಸುಮಾರು 106 ವರ್ಷಗಳು ಸಂದುವು ಎಂಬುದಾಗಿ ಅಧಿಕೃತ ಮೂಲಗಳಿಂದ ತಿಳಿದುಬರುತ್ತದೆ.

ಪೌರಾಣಿಕ ಹಿನ್ನೆಲೆ: ದಕ್ಷಯಜ್ಞದಲ್ಲಿ ದಾಕ್ಷಾಯಣಿಯ ವಿಯೋಗದ ಬಳಿಕ ಶಿವನು ತಪೋನಿರತನಾಗುತ್ತಾನೆ. ಚಾಕ್ಷಾಯಣಿಯಾದರೋ ಹಿಮವಂತನ ಮಗಳು ಪಾರ್ವತಿಯಾಗಿ ಹುಟ್ಟಿ ಬಂದು ಶಿವನನ್ನೇ ವರಿಸಲು ವ್ರತಧಾರಿಯಾಗಿದ್ದಾಳೆ. ಇನ್ನೊಂದು ಕಾಡೆ ತಾರಕಾಸುರನ ಉಪಟಳದಿಂದ ಕಂಗೆಟ್ಟ ಇಂದ್ರಾದಿ ದೇವತೆಗಳು ಅಸುರನನ್ನು ಕೊಲ್ಲುವ ಶಿವಕುಮಾರನ ಜನನವನ್ನು ನಿರೀಕ್ಷಿಸುತ್ತಾರೆ. ಶಿವನ ತಪೋಭಂಗಕ್ಕಾಗಿ ಇಂದ್ರನು ಮನ್ಮಥನನ್ನು ಕಳುಹಿಸುತ್ತಾನೆ. ತನ್ನ ಬಾಣ ಪ್ರಯೋಗದಿಂದ ಶಿವನನ್ನು ತಪಸ್ಸಿನಿಂದ ಎಚ್ಚರಗೊಳಿಸುವಲ್ಲಿ ಮನ್ಮಥನು ಯಶಸ್ವಿಯಾಗುತ್ತಾನೆ. ಆದರೆ, ತನ್ನ ತಪೋಭಂಗಗೊಳಿಸಿದ ಮನ್ಮಥನನ್ನು ತನ್ನ ಹಣೆಗಣ್ಣಿನಿಂದ ಭಸ್ಮಗೊಳಿಸುತ್ತಾನೆ ಶಿವ. ಇನ್ನೊಂದು ಕಡೆಯಲ್ಲಿ ತನ್ನ ಸೇವೆಯಿಂದಲೇ ಮನಸ್ಸನ್ನು ಪ್ರಸನ್ನಗೊಳಿಸಿದ ಪಾರ್ವತಿಯನ್ನು ವರಿಸಿ, ಕುಮಾರನನ್ನು ಪಡೆಯುತ್ತಾನೆ. ಮುಂದಕ್ಕೆ ಆತನಿಂದ ತಾರಕಾಸುರನ ವಧೆಯಾಗುತ್ತದೆ. ನಿಟಿಲ ಎಂದರೆ ಹಣೆ ಎಂದರ್ಥ. ಹೀಗೆ ನಿಟಿಲಾಕ್ಷನು ಲಿಂಗರೂಪಿಯಾಗಿ ಉದ್ಭವಿಸಿದ ಕ್ಷೇತ್ರ ನಿಟಿಲಾಪುರವೆಂದೂ ಸದಾ ಮಂಗಳ ಸ್ವರೂಪಿಯಾದ ಕಾರಣ ಸದಾಶಿವನೆಂಬ ಹೆಸರಿನೊಂದಿಗೆ ಆರಾಧಿಸಲ್ಪಡುತ್ತಿದ್ದಾನೆ.