ಬೆಳ್ಳೂರಿನ ಕಾವೇಶ್ವರ ದೇವಸ್ಥಾನದಲ್ಲಿ ಜಾತ್ರಾ ವೈಭವ

ಲೇಖನ: ಪ್ರೊ. ರಾಜಮಣಿ ರಾಮಕುಂಜ

ಸುಮಾರು 800 ವರ್ಷಗಳ ಹಿನ್ನೆಲೆ ಇರಬಹುದಾದ ದೇವಾಲಯವೇ ಬಂಟ್ವಾಳ ತಾಲೂಕು ಬೆಳ್ಳೂರು ಗ್ರಾಮದ ಶ್ರೀ ಕಾವೇಶ್ವರ ದೇವಸ್ಥಾನ. ಭೂತಕಾಲವನ್ನು ಸ್ವಲ್ಪ ಇಣುಕಿ ನೋಡಿದರೆ ದೇವಾಲಯದ ವೈಭವದ ದಿನಗಳು ತೆರೆದುಕೊಳ್ಳುತ್ತವೆ. ಇದೊಂದು ಗ್ರಾಮಾಂತರ ಪ್ರದೇಶದಲ್ಲಿರುವ ದೇವಾಲಯ. ಇಲ್ಲಿ ವೈಭವೋಪೇತ ಜಾತ್ರೆ, ಧರ್ಮನೇಮ ಇತ್ಯಾದಿಗಳು ನಡೆಯುತ್ತಿದ್ದ ಕಾಲವಿತ್ತು. ಹದಿನಾರು ವರ್ಗಗಳು, ಬೆಳ್ಳೂರು ಗುತ್ತು ಸೇರಿದಂತೆ ಏಳು ಗುತ್ತುಗಳು ಹಾಗೂ ಭಕ್ತಾದಿಗಳ ಸಹಕಾರದಿಂದ ಮತ್ತು ದೇವರ ಭೂಮಿಯ ಆದಾಯದಿಂದ ಇಲ್ಲಿ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ಜರಗಿತ್ತಿದ್ದವು. ಸದ್ಯಕ್ಕೆ ಖರ್ಚುವೆಚ್ಚಗಳಿಗೆ ಭಕ್ತರ ಸಹೃದಯತೆಯನ್ನೇ ಅವಲಂಬಿಸಬೇಕಾಗಿದೆ.

ಇಲ್ಲಿ ಕಾವೇಶ್ವರ ದೇವಸ್ಥಾನವಲ್ಲದೆ, ಕಾವಗುಡ್ಡೆ, ನಾಗಬ್ರಹ್ಮಸ್ಥಾನ, ಮಹಮ್ಮಾಯಿ ದೇವಸ್ಥಾನ, ಬೆಮ್ಮರ ಗುಡಿ, ಮಾಡ್ಲಾಯ ದೈವದ ಮಾಡ, ಮಾಡ್ಲಾಯ ಕಲ್ಲು, ಪರಕೂರು ಭಟ್ಟರ ಬೀಡು ಇತ್ಯಾದಿಗಳೂ ಈ ದೇವಾಲಯದ ಆಸುಪಾಸಿನಲ್ಲೇ ಇದೆ.

ತೆಂಕಬೆಳ್ಳೂರು ಗ್ರಾಮದಲ್ಲಿರುವ ಈ ದೇವಾಲಯ, ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ಸುಮಾರು ೨೯ ಕಿ.ಮೀ.ಗಳಷ್ಟು, ತಾಲೂಕು ಕೇಂದ್ರವಾದ ಜೋಡುಮಾರ್ಗದಿಂದ ಸುಮಾರು 9 ಕಿ.ಮೀ.ಗಳಷ್ಟು ದೂರದಲ್ಲಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯದ ಮೂಲ ಸ್ಥಳ ಇದರ ಎದುರು ಭಾಗದಲ್ಲೇ ಇರುವ ಎತ್ತರವಾದ ಕಾವಗುಡ್ಡೆ. ಕಾವ ಋಷಿಗಳು ಈ ಗುಡ್ಡದ ನೆತ್ತಿಯಲ್ಲಿ ಲಿಂಗರೂಪದಲ್ಲಿ ಪ್ರತಿಷ್ಠಾಪಿಸಿದ ಶಿವನಿಗೆ ’ಕಾವೇಶ್ವರ’ ಎಂಬ ಹೆಸರು ಬಂತೆಂಬುದು ಭಾವುಕ ಜನರ ನಂಬುಗೆ. ಕಾವ ಋಷಿಗಳು ಶಿವನನ್ನು ಪ್ರತಿಷ್ಠಾಪಿಸಿದ ಈ ಗುಡ್ಡಕ್ಕೆ ’ಕಾವಗುಡ್ಡೆ’ ಎಂಬ ಹೆಸರು ಶಾಶ್ವತವಾಗಿ ನಿಂತಿದೆ. ಈ ಗುಡ್ಡದ ತುದಿಯಲ್ಲಿ ದೇವಸ್ಥಾನ ಇತ್ತೆನ್ನುವುದಕ್ಕೆ ಸಾಕ್ಷಿಯಾಗಿ ಅಲ್ಲಿ ನಷ್ಟವಾಗಿ ಹೋಗಿದ್ದ ಪಳೆಯುಳಿಕೆಗಳು ಇಂದಿಗೂ ಗೋಚರಿಸುತ್ತದೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ, ದೇವಸ್ಥಾನದಿಂದ ಬೆಳಕನ್ನು ಮೇಲೆ ಕೊಂಡುಹೋಗಿ ಅಲ್ಲಿ ದೀಪ ಹಚ್ಚಿ ಅಲ್ಲಿಂದ ದೇವರನ್ನು ಬೆಳಕಿನೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿ, ದೇವಸ್ಥಾನಕ್ಕೆ ಮರಳಿಬಂದು ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸ ಆರಂಭವಾಗುತ್ತದೆ.

ಈ ದೇವಾಲಯದ ಇತಿಹಾಸವನ್ನು ದರ್ಶಿಸಿಕೊಳ್ಳಲು ಯಾವುದೇ ಲಿಖಿತ ದಾಖಲೆಗಳಿಲ್ಲ. ಆದರೂ ಐತಿಹಾಸಿಕ ಪ್ರಸಿದ್ಧ ದೇವಪೂಂಜರು ಕೊಡುಗೆಯಾಗಿ ನೀಡಿರುವ, ಗರ್ಭಗುಡಿಯ ಎದುರು ಕಂಚಿನ ಎರಡು ಘಂಟೆಗಳು ಪ್ರಸಿದ್ಧವಾದವುಗಳು. ಆದರೆ, ಈ ಘಂಟೆಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇಲ್ಲಿ ಇಬ್ಬರು ದೇವಪೂಂಜರು; ವೇಣೂರಿನಲ್ಲಿ ಗೋಮಟೇಶ್ವರ ಮೂರ್ತಿಯನ್ನು ಪ್ರತಿಷ್ಟಾಪಿಸಿದವನು ನಾಲ್ಕನೇ ವೀರತಿಮ್ಮಣ್ಣಾಜಿಲ; ಶಾಲಿವಾಹನ ಶಕ ೧೫೨೫ ಶೋಭಕೃತು ಸಂವತ್ಸರ ಅಂದರೆ ಕ್ರಿ.ಶ.೧೬೦೪ ಮಾರ್ಚ್ ಒಂದನೇ ದಿನಾಂಕದ ಗುರುವಾರ ಇವನ ಆಡಳಿತ ಕಾಲದಲ್ಲಿ ಸೇನಾಧಿಪತಿಯಾಗಿದ್ದವನು ದೇವಪೂಂಜ. ಅನಂತರ ರಾಜರ ಅಸಡ್ಡೆಯಿಂದ ಬೇಸರಗೊಂಡ ಈತ ಬೆಳ್ಳೂರು ಗುತ್ತಿಗೆ ಹೋಗಿ ನೆಲೆನಿಂತ. ಇನ್ನೊಬ್ಬ ದೇವುಪೂಂಜ ಬೆಳ್ಳೂರುಗುತ್ತು ಲಕ್ಷ್ಮಣ ಪೂಂಜರ ಅಣ್ಣ ದೇವುಪೂಂಜ. ಈತ ಸುಮಾರು ೨೯ ವರ್ಷದಲ್ಲೇ ಮೃತಪಟ್ಟಿರಬಹುದು. ಆದರೆ ಘಂಟೆಯಲ್ಲಿ ಬರೆದಿರುವ ಹೆಸರು  ಯಾವ ದೇವಪೂಂಜನದ್ದು ಎಂಬುದು ಸ್ಪಷ್ಟವಾಗುವುದಿಲ್ಲ; ಆದರೂ ಹೀಗೆ ಯೋಚಿಸಬಹುದೋ ಏನೋ. ’ತಿಮ್ಮಣ್ಣಾಜಿಲನಿಂದ ಅಸಡ್ಡೆಗೊಳಗಾದ ಮೊದಲ ದೇವಪೂಂಜನ ಪ್ರತಾಪವನ್ನು ತಿಳಿದ ಬಂಗರಾಜನು ಆತನನ್ನು ತನ್ನ ಸೈನ್ಯಕ್ಕೆ  ಸೇನಾಧಿಪತಿಯಾಗಿ ನೇಮಿಸಿದನು. ಈ ದೇವಪೂಂಜನಿಗೆ ತನ್ನ ಜೀವಿತಾವಧಿಯಲ್ಲಿ ಹೆಚ್ಚಿನ ರಾಜಕೀಯ ಸ್ಥಾನಮಾನ ಇದ್ದದ್ದರಿಂದಾಗಿ ಈತನೇ ದೇವಾಲಯದಲ್ಲಿರುವ ಕಂಚಿನ ಗಂಟೆಗಳನ್ನು ಕೊಟ್ಟಿರುವ ಸಾಧ್ಯತೆಗಳೇ ಜಾಸ್ತಿ’ ಎನ್ನಬಹುದು.