ಹೌದು..ಇದು ದುಃಖದ ವಿಚಾರ

ವಿಜ್ಞಾನದ ಬಗೆಗೆ ಮಾಹಿತಿ ಕೊಡುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ ಒಮ್ಮಿಂದೊಮ್ಮೆಲೇ ಆಘಾತ. ಅಪ್ಪ-ಅಮ್ಮನ ಪ್ರೀತಿ ಸಿಗುತ್ತಿದ್ದ ಮಕ್ಕಳು, ಈ ಋಣಾತ್ಮಕ ಪ್ರಶ್ನೆಯಿಂದ ಕಂಗಾಲಾದರೆ, ಅಪ್ಪ-ಅಮ್ಮನ ಆಸರೆಯೇ ಇಲ್ಲದ ಕೆಲಮಕ್ಕಳ ಕಣ್ಣಿಗೆ ಕೈಹಾಕಿದಂತಿತ್ತು ಆ ಪ್ರಶ್ನೆ.

  • ಮೌನೇಶ ವಿಶ್ವಕರ್ಮ
  • ಮಕ್ಕಳ ಮಾತು

www.bantwalnews.com

ಜಾಹೀರಾತು

ರ್ವ ವಿದ್ಯಾರ್ಥಿ ದಿನದಲ್ಲಿ ಹೆಚ್ಚು ಲವಲವಿಕೆಯ ಕ್ಷಣಗಳನ್ನು ಕಳೆಯುವುದು ಶಾಲೆಯಲ್ಲಿ. ಅದೂ ಶಿಕ್ಷಕರ ನಡುವೆ. ಅಲ್ಲಿ ಅವನ ವಿಕಸನಕ್ಕೆ ಹೆಚ್ಚು ಒತ್ತು ಕೊಡಬೇಕಾದವರು ಶಿಕ್ಷಕರು. ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡ ಬಗೆಯಲ್ಲಿ ಪ್ರೌಢಶಾಲಾ ಶಿಕ್ಷಕರು ಅರ್ಥಮಾಡಿಕೊಳ್ಳಲಾರರು. ಇನ್ನು ಕಾಲೇಜು ಉಪನ್ಯಾಸಕರು ಮಕ್ಕಳನ್ನು ಅರ್ಥಮಾಡಿಕೊಳ್ಳುವ ಬಗೆಯೇ ವಿಭಿನ್ನವಾದದು. ಅವರವರು ಮಾಡುವ ಪಾಠ-ಮಕ್ಕಳ ಜೊತೆ ಕಳೆಯುವ ಸಮಯವೇ ಇದನ್ನೆಲ್ಲಾ ನಿರ್ಧರಿಸುತ್ತದೆ. ಮಗು ಮನಸ್ಸಿನ ಉಪನ್ಯಾಸಕರೂ ನಮ್ಮ ನಡುವೆ ಇದ್ದಾರೆ. ಆದರೆ ಪ್ರಮಾಣ ತೀರಾ ಕಡಿಮೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಲೇಜು ಉಪನ್ಯಾಸಕರೊಬ್ಬರು, ಪ್ರೌಢಶಾಲಾ ಮಕ್ಕಳಿಗೆ “ವೈಜ್ಞಾನಿಕ ಮನೋಭಾವ”ದ ಬಗ್ಗೆ ತಿಳಿಸುತ್ತಾ ಮಕ್ಕಳ ಮನಸ್ಸನ್ನೇ ಕಾಡಿದ ಕ್ಷಣಗಳು ನೂರಾರು ಮಕ್ಕಳು ಮಾನಸಿಕ ವೇದನೆ ಪಟ್ಟುಕೊಳ್ಳಲು ಕಾರಣವಾಯಿತು.

ವಿವಿಧ ವಿಚಾರಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಕೊಡುವ ಕಾರ್ಯಕ್ರಮವದು. ಸುಮಾರು ೩೦೦ ಪ್ರೌಢಶಾಲಾ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವೈಜ್ಞಾನಿಕ ಮನೋಭಾವದ ಕುರಿತಾಗಿ ಮಾತನಾಡಲು ಬಂದಿದ್ದವರು ಪ್ರಸಿದ್ದ ಕಾಲೇಜಿನ ವಿಜ್ಞಾನ ಉಪನ್ಯಾಸಕರು. ಬಂದವರೇ ತನ್ನ ಪರಿಚಯ ಹೇಳುತ್ತಾ ಭಾಷಣ ಆರಂಭಿಸಿದರು. ಅವರು ವಿದ್ಯಾರ್ಥಿಗಳಲ್ಲಿ ಕೇಳಿದ ಮೊದಲ ಪ್ರಶ್ನೆ ಇದು- ಮಕ್ಕಳೇ ನಿಮಲ್ಲಿ ಯಾರಿಗೆ ಅಪ್ಪ ಅಥವಾ ಅಮ್ಮ ಇಲ್ಲ..? ಏನೋ ವಿಜ್ಞಾನದ ಬಗೆಗೆ ಮಾಹಿತಿ ಕೊಡುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ ಒಮ್ಮಿಂದೊಮ್ಮೆಲೇ ಆಘಾತ. ಅಪ್ಪ-ಅಮ್ಮನ ಪ್ರೀತಿ ಸಿಗುತ್ತಿದ್ದ ಮಕ್ಕಳು, ಈ ಋಣಾತ್ಮಕ ಪ್ರಶ್ನೆಯಿಂದ ಕಂಗಾಲಾದರೆ, ಅಪ್ಪ-ಅಮ್ಮನ ಆಸರೆಯೇ ಇಲ್ಲದ ಕೆಲಮಕ್ಕಳ ಕಣ್ಣಿಗೆ ಕೈಹಾಕಿದಂತಿತ್ತು ಈ ಪ್ರಶ್ನೆ.

ಜಾಹೀರಾತು

ಇಡೀ ಸಭೆಯಲ್ಲಿ ಮೌನ ಆವರಿಸಿತ್ತು. ಈ ಅವಿವೇಕ ಭರಿತ ಪ್ರಶ್ನೆಯಿಂದ ಮಕ್ಕಳಮೊಗದಲ್ಲಿ ಮೂಡಿದ್ದ ಅಸಹನೆಯನ್ನು ನಾನೂ ಗಮನಿಸಿದ್ದೆ. ಸಭೆಯಿಂದ ಯಾವುದೇ ಉತ್ತರಗಳು ಬರಲಿಲ್ಲ. ಮತ್ತೆ ತಾನೇ ಮಾತು ಮುಂದುವರಿಸಿದರು ಉಪನ್ಯಾಸಕರು. ನಾಚಿಕೆ ಮಾಡ್ಬೇಡಿ, ಇದು ದುಃಖದ ವಿಚಾರ ಹೌದು ಆದರೂ ಯಾರಿಗೆ ಅಪ್ಪ ಇಲ್ಲ- ಯಾರಿಗೆ ಅಮ್ಮ ಇಲ್ಲ..? ಹೇಳಿ.. ಕೈ ಎತ್ತಿ ಎಂದಾಗ ನೋವಿನಿಂದ-ಕಷ್ಟದಲ್ಲಿ ಕೈ ಎತ್ತಿದರು ಕೆಲ ವಿದ್ಯಾರ್ಥಿಗಳು.

 ಆ ಉಪನ್ಯಾಸಕರ ಪ್ರಶ್ನೆ ಅಷ್ಟೊಂದು ಕಠೋರವಾಗಿತ್ತು.ಯಾವುದೇ ವಿಚಾರಗಳಾಗಲಿ ಮಕ್ಕಳು ಲವಲವಿಕೆಯಿಂದ ಭಾಗವಹಿಸಿ ಕಲಿತುಕೊಂಡಷ್ಟು ಬೇಗವಾಗಿ ಗಂಭೀರ ಸ್ಥಿತಿಯಲ್ಲಿ ಕಲಿಯುವುದಿಲ್ಲ. ಇಲ್ಲಿ ನಡೆದಿರುವುದು ಕೂಡ ಗಂಭೀರ ಪ್ರಶ್ನೋತ್ತರ. ಈ ಪ್ರಶ್ನೆಯ ಬಳಿಕ ಆ ಉಪನ್ಯಾಸಕರು ಈ ಪ್ರಶ್ನೆಯನ್ನೂ-ವೈಜ್ಞಾನಿಕ ಮನೋಭಾವವನ್ನು “ಲಿಂಕ್” ಮಾಡಿದ ಬಗೆ ನಂಗೇನೋ ಅವೈಜ್ಞಾನಿಕ ಎಂದೆನ್ನಿಸಿತು.

ನಿಮಗೆ ಅಪ್ಪ-ಅಮ್ಮ ಇಲ್ಲ ಎಂದಿಟ್ಟುಕೊಳ್ಳಿ. ನಂಗೊತ್ತು ಈಗ ನಿಮಗೆ ಎಲ್ಲರೂ ಇದ್ದಾರೆ, ಆದರೆ ಇಲ್ಲವಾದರೆ..? ಯೋಚಿಸಿ.. ಅವರನ್ನು ಬಿಟ್ಟು ನೀವು ಹೇಗೆ ಬದುಕಬಲ್ಲಿರಿ.. ಇದು ವೈಜ್ಞಾನಿಕ ಮನೋಭಾವ ಎಂದು ಪೀಠಿಕೆ ಕೊಟ್ಟ ಉಪನ್ಯಾಸಕರು.॒ ನಮ್ಮ ಆಲೋಚನೆಗಳು ಹೀಗೆ ಮುಂದುವರಿಯಬೇಕು ಎಂದರು.

ಜಾಹೀರಾತು

ಪ್ರೀತಿಯ ಅಪ್ಪ-ಅಮ್ಮನನ್ನು ಕನಸಲ್ಲಿಯೂ ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಈ ಪೈಕಿ ಮಕ್ಕಳ ಮನಸ್ಸಂತೂ ಆ ಬಗೆಯ ಯೋಚನೆ ಮಾಡುವುದೇ ಇಲ್ಲ. ಯಾವ ಮಕ್ಕಳು ಈ ಬಗೆಯಲ್ಲಿ ಯೋಚಿಸುತ್ತಾರೋ ಅಂತಹಾ ಮಕ್ಕಳಿಂದ ತಪ್ಪುಗಳು ನಡೆಯುವುದು ಹೆಚ್ಚು ಎಂಬುದನ್ನು ನಾವು ದಿನನಿತ್ಯ ಕಂಡುಕೊಳ್ಳುತ್ತಿರುವ ಸತ್ಯ.

ಇಲ್ಲಿ ನೆರೆದಿದ್ದ ಮಕ್ಕಳಿಗೆ ಅವರ ಮೊದಲ ಪ್ರಶ್ನೆಯೇ ತುಂಬಾ ಬೇಸರ ತಂದಿತ್ತು ಎನ್ನುವುದು ಆ ಬಳಿಕದ ೪೫ ನಿಮಿಷದ ಅವದಿಯ “ಮಕ್ಕಳ ರಿಯಾಕ್ಷನ್” ಸಾರಿ ಹೇಳಿತ್ತು.

 ಮಕ್ಕಳು ಬೇಕೆನ್ನಿಸಿದ್ದನ್ನು ಕೊಡುವ-ಕೊಡುವ ಸಾಧ್ಯತೆಗಳನ್ನು ಹೇಳುವ ಶಿಕ್ಷಕರು, ಮಕ್ಕಳ ಅರಿವಿಗೇ ಬಾರದಂತೆ ಅವರನ್ನು ತನ್ನವರಾಗಿ ಮಾಡಿಕೊಂಡು ಬುದ್ದಿ ಹೇಳಿದರೆ ಶಿಕ್ಷಕರು ಮಕ್ಕಳಿಗೆ ತುಂಬಾ ಹತ್ತಿರವಾಗುತ್ತಾರೆ. ಮಕ್ಕಳು-ಶಿಕ್ಷಕರ ಮನಸ್ಥಿತಿ ಅಷ್ಟೊಂದು ನಿಕಟವಾಗಿರಬೇಕು ಆಗ ಮಾತ್ರ ಅಲ್ಲೊಂದು ಆತ್ಮೀಯತೆಯ ಸ್ನೇಹಿತರ ಒಡನಾಟವಿರುತ್ತದೆ.

ಜಾಹೀರಾತು

ಉಪನ್ಯಾಸಕರ ಆ ಪ್ರಶ್ನೆ ಕೆಲವರಿಗೆ ಸರಿ ಎಂದು ಕಂಡಿರಬಹುದು. ಮಕ್ಕಳ ಪರವಾಗಿರುವ ನನ್ನ ಪೂರ್ವಾಗ್ರಹ ಪೀಡಿತ ಮನಸ್ಸು, ಆ ಪ್ರಶ್ನೆ ಎಷ್ಟು ಸರಿ..? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿರಬಹುದೋ ಏನೋ..? ಗೊತ್ತಿಲ್ಲ. ಆದರೆ ಕಾಲೇಜು ಉಪನ್ಯಾಸಕರಾಗಿದ್ದುಕೊಂಡು ಮಗುಮನಸ್ಸು ಹೊಂದಿರುವ ಅದೆಷ್ಟೋ ಮಕ್ಕಳ ಸಾಹಿತಿಗಳು, ವಿಜ್ಞಾನಿಗಳು ನಮ್ಮ ನಡುವೆ ಇದ್ದಾರೆ. ಅಂತವರ ಸಾಲಿಗೆ ಮೇಲೆ ಹೇಳಿದ ವಿಜ್ಞಾನ ಉಪನ್ಯಾಸಕ  ಒಂದಿನಿತೂ ಹೊಂದುವುದಿಲ್ಲ ಎಂಬುದು ನನ್ನ ಅಭಿಪ್ರಾಯ.

 ಬುದ್ದಿ ಹೇಳುವುದಷ್ಟೇ ಉಪನ್ಯಾಸವಲ್ಲ. ಅದರಲ್ಲೂ ಮಕ್ಕಳಿಗೆ ಹೇಳುವಾಗ ಆ ಕಲಿಕೆಯಲ್ಲೂ ಸಂಭ್ರಮವಿರಬೇಕು. ಆಗ ಮಕ್ಕಳು ಕ್ರಿಯಾಶೀಲರಾಗಿರುತ್ತಾರೆ. ನಾವು ನೀವು ನೋಡುವ ಸರ್ಕಾರಿ ಶಾಲೆಯ “ನಲಿಕಲಿ” ತರಗತಿಗಳೇ ಇದಕ್ಕೆ ಬಹುದೊಡ್ಡ ನಿದರ್ಶನ. ಆ ಮಕ್ಕಳ ಕಲಿಕಾ ಸಂಭ್ರಮವೇ ಒಂದು ವಿಭಿನ್ನ ಲೋಕ. ಸಂಭ್ರಮದ ಕಲಿಕೆ ಖುಷಿಯ ಜೊತೆಗೆ ಜ್ಞಾನದ ಅರಿವನ್ನು ವಿಸ್ತರಿಸುತ್ತದೆ.  ಮಕ್ಕಳಿಗೆ ನಾವು ಹೇಳುವ ಪಾಠವನ್ನೂ ಆಟದ ಮೂಲಕ ಹೇಳುವುದಕ್ಕೂ-ಪಾಠದ ಮೂಲಕ ಹೇಳುವುದಕ್ಕೂ ಇರುವ ವ್ಯತ್ಯಾಸಗಳೇ ಇದಕ್ಕೆ ಸ್ಪಷ್ಟ ಉದಾಹರಣೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಹೌದು..ಇದು ದುಃಖದ ವಿಚಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*