ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿನಲ್ಲಿ ಸೌಹಾರ್ದತಾ ಸಮಾವೇಶದಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಸಂಘ ಪರಿವಾರ ಸಂಘಟನೆಗಳು ಹಾಗೂ ಬಿಜೆಪಿ ನೇತೃತ್ವದಲ್ಲಿ ಶನಿವಾರ ಹರತಾಳ ಆಚರಿಸುತ್ತಿದ್ದು, ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದುವರೆಗೆ ಅಂದರೆ (ಬೆಳಗ್ಗೆ 9.30ಕ್ಕೆ) ದೊರೆತ ಮಾಹಿತಿಯಂತೆ ಅಲ್ಲಲ್ಲಿ ಬಸ್ ಗೆ ಕಲ್ಲೆಸೆತ, ಟಯರ್ ಗೆ ಬೆಂಕಿ, ಲಾರಿಗೆ ಬೆಂಕಿ ಇಕ್ಕುವ ಘಟನೆ ಹೊರತುಪಡಿಸಿದರೆ, ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಯಾವುದೇ ಕಿಡಿಗೇಡಿತನ ಕಂಡಲ್ಲಿ 100ಕ್ಕೆ ಕರೆ ಮಾಡಬಹುದಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಲೆಸೆತ, ಲಾರಿಗೆ ಬೆಂಕಿ
ಶನಿವಾರ ಬೆಳಗ್ಗೆಯೇ ಬಂಟ್ವಾಳ ತಾಲೂಕಿನ ತುಂಬೆ ಸಮೀಪ ಕಡೆಗೋಳಿ ಎಂಬಲ್ಲಿ ಚಲಿಸುತ್ತಿದ್ದ ಸರಕಾರಿ ಬಸ್ ಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ವಿಟ್ಲದ ಕುದ್ದುಪದವು ಎಂಬಲ್ಲಿಯೂ ಕಲ್ಲೆಸೆತ ನಡೆದ ಬಗ್ಗೆ ವರದಿಯಾಗಿದೆ. ಬಂಟ್ವಾಳ ತಾಲೂಕಿನ ಕೆಲವೆಡೆ ರಸ್ತೆಯಲ್ಲಿ ಟಯರ್ ಸುಟ್ಟು ವಾಹನ ಸಂಚಾರಕ್ಕೆ ತಡೆಯೊಡ್ಡುವ ಪ್ರಯತ್ನ ನಡೆದಿದೆ.
ಒಕ್ಕೆತ್ತೂರು ಎಂಬಲ್ಲಿ (ವಿಟ್ಲ-ಮಂಗಳೂರು ರಸ್ತೆ) ನಿಲ್ಲಿಸಿದ ಲಾರಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಕಾರಣ, ಲಾರಿ ಸಂಪೂರ್ಣ ಭಸ್ಮವಾಗಿದೆ. ಇದು ಅಬೂಬಕ್ಕರ್ ಹಾಜಿ ಹೈವೆ ಎಂಬವರಿಗೆ ಸೇರಿದ ಲಾರಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದರು.
ಹರತಾಳ ಕರೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಟ್ಲ, ಕಲ್ಲಡ್ಕ ಪೇಟೆ ಬಹುತೇಕ ಬಂದ್ ಆಗಿದ್ದರೆ, ಬಿ.ಸಿ.ರೋಡ್, ಮೇಲ್ಕಾರ್ ಗಳಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.
ಖಾಸಗಿ ವಾಹನ ಸಂಚಾರ ಅಬಾಧಿತವಾಗಿದ್ದರೆ, ಖಾಸಗಿ ಬಸ್ಸುಗಳು ವಿರಳವಾಗಿ ಸಂಚರಿಸುತ್ತಿದ್ದವು. ಪ್ರಥಮ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಬಸ್ಸುಗಳಿಲ್ಲದೆ ತೊಂದರೆಗೊಳಗಾದರು. ಸರಕಾರಿ ಬಸ್ಸುಗಳ ಸಂಚಾರವಿದ್ದು, ಅಂಗಡಿ, ಮುಂಗಟ್ಟುಗಳ ಮಾಲೀಕರು ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚು.
Be the first to comment on "ನಿಂತಿದ್ದ ಲಾರಿಗೆ ಬೆಂಕಿ, ಬಸ್ಸಿಗೆ ಕಲ್ಲೆಸೆತ"