ಪ್ರೊ. ರಾಜಮಣಿ ರಾಮಕುಂಜ
ಆಧುನಿಕತೆಯನ್ನು ಕೊಡವಿ, ಮಾನವ ಲೋಕಕ್ಕೆ ಸವಾಲಾಗಿ ತಲೆಯೆತ್ತಿ ನಿಂತಿರುವ, ಸೌಂದಾರ್ಯನುಭೂತಿಗೆ ಖನಿಯಂತಿರುವ, ಪೌರಾಣಿಕವಾಗಿ ಕೃತ, ತ್ರೇತ , ದ್ವಾಪರ ಕಲಿಯುಗಗಳ ಸ್ಪರ್ಶಕ್ಕೊಳಗಾದ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಕಾರಿಂಜದಲ್ಲಿರುವುದೇ ಮಹತೋಭಾರ ಶ್ರೀ ಕಾರಿಂಜೇಶ್ವಾರ ದೇವಾಲಯ. ಭಕ್ತರಿಗೆ ಪ್ರಕೃತಿ ಪ್ರೇಮಿಗಳಿಗೆ, ಚಾರಣಿಗರಿಗೆ ಏಕಕಾಲದಲ್ಲಿ ಆಹ್ವಾನವನ್ನೀಯುವ ಈ ದೇವಾಲಯವಿರುವ ಪ್ರದೇಶ ನಿಜಕ್ಕೂ ’ಕಣ್ಣಿದ್ದವನಿಗೆ ಕಾರಿಂಜ’ ಎಂಬ ನಾಣ್ನುಡಿಗೆ ಸಮರ್ಥನೆಯಂತಿದೆ. ಹೆಬ್ಬಂಡೆಗಳ ಸಮೂಹಗಳು, ಗುಹಾಂತರ ಸ್ಥಳಗಳು, ಬಂಡೆಯಲ್ಲೇ ನಿರ್ಮಿತವಾದ ಕೊಳಗಳು, ಪ್ರಾಚೀನ ತಪೋವನಗಳನ್ನು ನೆನಪಿಗೆ ತರುವ ನೀರವ ದಟ್ಟವಾದ ಅರಣ್ಯ ಪ್ರದೇಶಗಳು ಇದು ಸುತ್ತಲಿನ ಪರಿಸರ.
ಸು, ೪೫೦ ಮೀಟರ್ ಎತ್ತರದ ಶಿಲಾ ಬಂಡೆಯ ಮೇಲೆ ಕಂಗೊಳಿಸಿತ್ತಿರುವ ಈ ದೇವಾಲಯ ಮಂಗಳೂರು-ಬೆಳ್ತಂಗಡಿ ರಸ್ತೆಯಲ್ಲಿ ವಗ್ಗ ಎಂಬಲ್ಲಿಂದ ಎರಡೂವರೆ ಕಿಲೋಮೀಟರ್ ಹಾಗೂ ತಾಲೂಕು ಕೇಂದ್ರ ಬಂಟ್ವಾಳದಿಂದ ೧೭ ಕಿ.ಮೀ.ದೂರದಲ್ಲಿದೆ. ನವರಂಗ, ಸುಕನಾಸಿ ಮತ್ತು ಗರ್ಭಗೃಹಗಳನ್ನು ಮುಖ್ಯ ಅಂಗಗಳಾಗಿ ಹೊಂದಿರುವ ಈ ದೇವಾಲಯವನ್ನು ಅಧಿಷ್ಠಾನದ ಮೇಲೆ ಗಜ ಪೃಷ್ಠಾಕಾರದಲ್ಲಿ ಕಟ್ಟಲಾಗಿದೆ. ಹೊರಗೆ ಪ್ರಧಾನ ಬಲಿಪೀಠ ಮತ್ತು ಧ್ವಜಸ್ಥಂಭಗಳಿರುವ ಈ ದೇವಾಲಯ ಗರ್ಭ ಗೃದಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಈ ಉದ್ಭವ ಶಿವಲಿಂಗವಿದೆ. ಗರ್ಭಗೃಹದ ಮೇಲೆ ಎತ್ತರವೂ ಸುಂದರವೂ ಆದ ಶಿಖರವಿದೆ. ಈ ದೇವಾಲಯದಲ್ಲಿ ಸುಮಾರು ೧೦ ಇಂಚು ಎತ್ತರವಿರುವ ಕಂಚು ಲೋಹದಿಂದ ತಯಾರಿಸಿದ ಶಿವನ ಮೂರ್ತಿಯಿದೆ. ದೇವಳದ ಹೊರದ್ವಾರದ ಗೋಡೆಯಲ್ಲಿ ಹನುಮ ಗರುಡರ ಉಬ್ಬು ಶಿಲ್ಪವಿದೆ. ಶಿವನ ಮುಂಭಾಗದಲ್ಲಿ ಕಂಚಿನ ಲೋಹದ ಬಸವೇಶ್ವರನ ವಿಗ್ರಹವಿದೆ. ಶಿವಾಲಯದ ಬಲ ಭಾಗದ ಆವರಣ ಗೋಡೆಯ ಹೊರಭಾಗಕ್ಕೆ ಸುಮಾರು ನಾಲ್ಕು ಅಡಿ ಹೊರಕ್ಕೆ ಚಾಚಿರುವ ಶಿಲೆಗಲ್ಲಿನ ಚಪ್ಪಡಿಗಳಿವೆ. ಇದನ್ನು ಪ್ರಮಾಣ ಕಲ್ಲು ಎನ್ನುತ್ತಾರೆ; ಸತ್ಯ ಪ್ರಮಾಣ ಮಾಡುವವರು ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಹಾರಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸಬೇಕು. ಅಪ್ಪಿ ತಪ್ಪಿ ಬಿದ್ದರೆ ಪಾತಾಳವೆ ಗತಿ. ಸೀತಾಮಾತೆ ಪ್ರಮಾಣ ಮಾಡಿದ ಕಲ್ಲು ಎಂಬುದಾಗಿಯೂ ಇದಕ್ಕೆ ಹೆಸರಿದೆ. ಈ ದೇವಳ ಅತ್ಯಂತ ವಿಶೇಷ ದೃಶ್ಯ, ದೇವಾಲಯದ ಎದುರು ಭಾಗದಲ್ಲಿ ವಾನರ ಸಂತತಿಗೆ ಬಡಿಸುವ ಕಲ್ಲಿನ ಬಟ್ಟಲಿನಲ್ಲಿ, ಪ್ರತಿದಿನ ಮಹಾಪೂಜೆಯಾದೊಡನೆ ಶಿವನಿಗೆ ಅರ್ಪಿಸಿದ ಮೂರು ಸೇರು ಅಕ್ಕಿ ನೈವೇದ್ಯವನ್ನು ಹಾಕಿದಾಗ ಅವುಗಳು ಅದನ್ನು ಉಣ್ಣುವ ದೃಶ್ಯವೆ ಬಹಳ ಮನೋರಂಜಕ.
ನಾವು ಕಾರಿಂಜ ಬೆಟ್ಟವನ್ನು ಹತ್ತುವಾಗ ಮಧ್ಯ ಭಾಗದಲ್ಲಿ ಪಾರ್ವತಿಯ ಸನ್ನಿಧಿಯ ದುರ್ಗಾಲಯವಿದೆ. ಸುತ್ತ ಪೌಳಿಯನ್ನು ಹೊಂದಿದ್ದು ಚತುರಸ್ರ ಆಕಾರದ ಗರ್ಭಗೃಹ ಮತ್ತು ತೀರ್ಥ ಮಂಟಪಗಳಿವೆ. ಗರ್ಭ ಗೃಹದ ಮೇಲೆ ಮೆಟ್ಟಿಲು ಆಕಾರದ ಶಿಖರವಿದೆ. ಸುತ್ತಲಿನ ಕಾಡು ಈ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದೆ. ಈ ದೇವಾಲಯದ ದಕ್ಷಿಣ ಪಾರ್ಶ್ವದಲ್ಲಿ ಭಟ್ಟಿ ವಿನಾಯಕ ದೇವರ ಸಾನ್ನಿಧ್ಯವಿದೆ. ಇದು ಶಿಲಾ ಲೇಖಿತ ಮೂರ್ತಿ. ಆಚಾರ್ಯ ಮಧ್ವರು ಈ ಪಾರ್ವತಿ ದೇವಾಲಯವನ್ನು ನಿರ್ಮಿಸಿದರೆಂಬ ಐತಿಹ್ಯವೂ ಇದೆ.
ಇಲ್ಲಿನ ಕೆಲವು ವಿಶೇಷತೆಗಳು: ಪಂಚ ಪಾಡವರಲ್ಲಿ ಓರ್ವನಾದ ಭೀಮಸೇನನಿಂದಲೇ ನಿರ್ಮಾಣವಾಗಿದೆಯೆಂದು ಭಾವುಕರಿಂದ ನಂಬಲಾದ ಶ್ರೀ ಕಾರಿಂಜೇಶ್ವರ ದೇವಾಲಯಕ್ಕೆ(ಬೆಟ್ಟದ ತುದಿಯಲ್ಲಿ)ಅಡ್ಡವಾಗಿ, ವರಾಹ ಕೆರೆಯವರೆಗೆ ನೇರವಾಗಿ ಶಿಲಾಕಲ್ಲಿನ ಮೇಲೆ ಉಬ್ಬಿದ ರೀತಿಯ ಗೆರೆಯಿದೆ. ಇದು ಅರ್ಜುನನು ಹಂದಿಗೆ ಗುರಿಯಿಟ್ಟ ಬಾಣದ ಚಲನೆಯ ಗುರುತು ಎಂಬುದು ನಂಬಿಕೆ. ಬಾಣ ಬಿದ್ದ ಜಾಗ ವರಾಹ ಕೆರೆಯೆಂದು ಪ್ರಸಿದ್ಧವಾಯಿತು.
ಉಂಗುಷ್ಠ ತೀರ್ಥ, ಜಾನು ತೀರ್ಥ ಎಂಬ ಎರಡು ಸಣ್ಣ ಕೊಳಗಳು ಇಷ್ಟೊಂದು ಎತ್ತರದ ಬೆಟ್ಟದ ತುದಿಯಲ್ಲಿ ಸರಿಸುಮಾರು ವರ್ಷ ಪೂರ್ತ ಒಸರಿನಿಂದ ಕೂಡಿರುವುದು ನಿಜವಾಗಿಯೇ ವಿಶಿಷ್ಠ. ಭೀಮನು ತನ್ನ ಮೊಣಕಾಲನ್ನು ಊರಿದ ಜಾಗ ಜಾನು ತೀರ್ಥವೆಂತಲೂ ಉಂಗುಷ್ಠವನ್ನು ಊರಿದ ಜಾಗ ಉಂಗುಷ್ಠ ತೀರ್ಥವೆಂತಲೂ ಈ ಭಂಗಿಯಿಂದ ಗದೆಯನ್ನು ಎಸೆದಾಗ ಅದು ಬಿದ್ದ ಜಾಗ ಗದಾ ತೀಥವೆಂತಲೂ ಪ್ರಸಿದ್ಧವಾಯಿತೆಂದು ಭಕ್ತ ಜನರ ಅಂಬೋಣ. ಶಿವನ ಅಭಿಷೇಕಕ್ಕೆ ಉಪಯೋಗಿಸುವ ಜಾನು ತೀರ್ಥವು ಸಿಮಾರು ೬ ಮೀಟರ್ ವ್ಯಾಸವಿದ್ದು ನಾಲ್ಕೈದು ಮೀ. ಆಳವಾಗಿದೆ. ಉಂಗುಷ್ಠ ತೀರ್ಥದ ವ್ಯಾಸ ಸುಮಾರು ೬೦ ಸೆ.ಮೀ ಹಾಗೂ ಆಳ ೩೫ ಸೆ.ಮೀ.
ಬೆಟ್ಟದ ಬುಡದಲ್ಲಿ ಸುಮಾರು ೬೦೦ ಅಡಿ ಉದ್ದ ೨೦೦ ಅಡಿ ಅಗಲದ ಬೃಹತ್ ಸರೋವರವಿದೆ. ಇದನ್ನೇ ಗದಾ ತೀರ್ಥವೆಂದು ಕರೆಯುವುದು. ಭೀಮನು ತನ್ನ ಗದೆಯನ್ನು ತಿರುಗಿಸಿ ಈ ಸರೋವರವನ್ನು ರಚಿಸಿದನು ಎಂಬ ಪ್ರತೀತಿಯಿಂದಲೋ ಏನೊ ಪ್ರತೀ ಅಮಾವಾಸ್ಯೆಯಂದು ಭಕ್ತರು ಇಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಇದೇ ಕೆರೆಯ ನೀರೊಳಗೆ ಮುಳುಗಿದ್ದ, ಮಳೆ ಕಡಿಮೆಯಾದಾಗ ಕಾಣಿಸಿಕೊಳ್ಳುವ ಶಿವಲಿಂಗಕ್ಕೆ ’ಚರ್ಮದ ಕೆಡು’ ನಿವಾರಣೆಗೆ ಹುರುಳಿ ಪೂಜೆ ಮಾಡುವ ಪದ್ಧತಿಯಿದೆ. ನವ ದಂಪತಿಗಳ ಪುಣ್ಯ ಸ್ನಾನಕ್ಕೆ ಸ್ಪೂರ್ತಿಯಾದ ಗದಾ ತೀರ್ಥ ಸ್ನಾನವು ಆರೋಗ್ಯ ಸಮೃದ್ಧಿಯ ಸಂಕೇತ.
ಶಿವ ಪಾರ್ವತಿ ದಂಪತಿಗಳು ವಿಹಾರ ಕ್ರಿಡೆಯಲ್ಲಿ ಮಗ್ನರಾಗಿರುವಾಗ ಈ ದೈವಿಕ ಲೀಲೆಯನ್ನು ಯಾರಾದರೂ ವೀಕ್ಷಿಸಬಹುದೆಂದು ಶಿವನು ಒಂದು ಮುಷ್ಟಿ ಮಣ್ಣನ್ನು ಎತ್ತಿ ಪಕ್ಕದಲ್ಲಿ ರಾಶಿ ಹಾಕಿದಾಗ ಕೋಟಿ ಶೈಲ (ಕೊಡ್ಯಮಲೆ)ಆಯಿತಂತೆ. ಹಾಗೆಯೇ ಮಣ್ಣು ತೆಗೆದ ಜಾಗವೇ ಗದಾ ತೀರ್ಥವಾಯಿತಂತೆ. ಹೀಗೆ ಒಂದು ಐತಿಹ್ಯ ಈ ಕೆರೆಯ ಕುರಿತಾಗಿದೆ. ಇದೇ ತೀರ್ಥದ ಪೂರ್ವದ ಮೂಲೆಯಲ್ಲಿ ವನ ಭೋಜನದ ಗುಹೆಯಿದೆ. ಇದೇ ಕೆರೆಯ ನೀರಿನಿಂದ ಕಾರಿಂಜ ಬೈಲಿನ ಕೃಷಿಕಾರ್ಯಗಳು ನಡೆಯುತ್ತದೆ ಅನ್ನುವುದು ಸತ್ಯ.
ಪಾರ್ವತಿ ದೇವಾಲಯವನ್ನು ಪೂರ್ವ ದಿಕ್ಕಿನ ಒಳದಾರಿಯಲ್ಲಿ ನೀವು ಸಾಗಿದ್ದೇ ಆದರೆ ಅಲ್ಲಿ ಉಗ್ರಾಣಿ ಗುಹೆಗಳೆಂಬ ಶಿಲಾರಚನೆಗಳಿವೆ. ಸುಮಾರು ೧೫ ಮೀ.೪ವರೆ ಗುಣಿಸು ೩ಮೀ. ಗುಹೆಯ ತಳ ಭಾಗವು ಸಮತಟ್ಟಾಗಿದೆ.
ಶಿವರಾತ್ರಿ ಜಾತ್ರಾಮಹೋತ್ಸವದ ವೇಳೆ ಮಧ್ಯರಾತ್ರಿಗೆ ಪಾರ್ವತಿ ಪರಮೇಶ್ವರರ ಪರಸ್ಪರ ಭೇಟಿಯ ಸಂದರ್ಭ ಸೌಂದಾರ್ಯಾಸ್ವಾದ ಬುದ್ಧಿ ಇರುವವನಿಗಂತೂ ಮೈನವಿರೇಳಿಸುವಂತಹದು. ಶಿವ ಪಾರ್ವತಿಯರು ಒಂದು ರಾತ್ರಿ ಪವಿತ್ರವಾದ ಶಯನೋತ್ಸವ ಅನುಭವಿಸಿ ಮರುದಿನ ಜತೆಯಾಗಿ ರಥಬೀದಿಗೆ ಇಳಿದು ರಥೋತ್ಸವ ನೆರವೇರಿಸಿ ತಿರುಗಿ ತಮ್ಮ ನೆಲೆಯನ್ನು ಸೇರುವ ಹೊತ್ತು ಅತ್ಯಂತ ಅರ್ಥಪೂರ್ಣವಾದ ಸಂದರ್ಭ. ಇದೇ ಸಂಬಂಧದಿಂದಲೋ ಏನೊ ಇಲ್ಲಿದೊಡ್ಡ ಸೇವೆಯೆಂದರೆ ’ಶಯನಸೇವೆ’. ಈ ಹರಕೆಯನ್ನು ನೆರವೇರಿಸಿದಲ್ಲಿ ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತವಾಗುತ್ತದೆಂಬ ನಂಬಿಕೆ; ಮಾತ್ರವಲ್ಲದೆ ಸಂತತಿ ಭಾಗ್ಯ, ಸತಿ-ಪತಿಯರ ವಿರಸ ಶಮನಕ್ಕಾಗಿಯೂ ಈ ಸೇವೆಯನ್ನು ಒಪ್ಪಿಸುವ ಕ್ರಮವಿದೆ.
ಕರಿಂಜೆ-ಕಾರಿಂಜ: ಕಾರಿಂಜ ಎಂಬ ಹೆಸರು ಕರಿಂಜೆ ಎಂಬ ಅರಸು ಕುವರಿಯಿಂದ ಬಂದಿದೆ ಎಂಬ ಪುರಾಣ ಐತಿಹ್ಯವಿದೆ ಎಂಬುದು ಪ್ರಚಲಿತವಿರುವ ಮಾತಾಗಿದೆ. ಬಹಳ ವರ್ಷಗಳ ಹಿಂದೆ ಈ ಪ್ರದೇಶ ಬೇಡರ ರಾಜ್ಯವಾಗಿತ್ತಂತೆ. ಬೇಡರ ದೊರೆಯೊಬ್ಬನ ಮಗಳು ಕರಿಂಜ ಎಂಬ ಬೇಡತಿ ಆಕೆಗೆ ಶಿವಲಿಂಗವೊಂದು ಸಿಕ್ಕಿ, ಆಕೆ ಕತ್ತಿಯಿಂದ ಕಲ್ಲಿಗೆ ಕಡಿದಾಗ ರಕ್ತ ಚಿಮ್ಮಿ ಲಿಂಗ ಗೋಚರಿಸಿತೆಂದು ಅರ್ಥ. ಈಗಲೂ ಲಿಂಗದ ಮೇಲೆ ಬೆಣ್ಣೆ ಇಡುವ ಸೇವೆ ನಡೆಯುತ್ತಿದೆ. ಪಾರ್ವತಿಯ ಪ್ರತಿಷ್ಠೆಯ ಹಿನ್ನೆಲೆಯಲ್ಲಿರುವ ಕಥೆಯಂತೆ, ಆಚಾರ್ಯ ಮಧ್ವರು ತಮ್ಮ ಯಾತ್ರೆಯ ಸಂದರ್ಭದಲ್ಲಿ ಕಾರಿಂಜಕ್ಕೂ ಬಂದಿದ್ದರು. ಶಿವಾಲಯದಲ್ಲಿ ಭಿಕ್ಷೆಯನ್ನು ಸ್ವೀಕರಿಸಲಾಗದ ಕಾರಣ ಮಧ್ವರು ಅಲಂಪುರಿಯಲ್ಲಿ ಅನಾಥವಾಗಿ ಬಿದ್ದಿದ್ದ ಶಿಲಾ ಪ್ರತಿಮೆಯನ್ನು ತಂದು ಪಾರ್ವತಿಯ ಹೆಸರಿನಲ್ಲಿ ಸ್ಥಾಪಿಸಿ ಭಿಕ್ಷೆಯನ್ನು ಸ್ವೀಕರಿಸಿದರೆಂದು ಸ್ಥಳೀಯ ಐತಿಹ್ಯವೊಂದು ಚಾಲ್ತಿಯಲ್ಲಿದೆ.
ಜಾತ್ರೋತ್ಸವ
ದಿನಾಂಕ ೨೨ರಂದು ಇಲ್ಲಿಧ್ವಜಾರೋಹಣ, ಸಪ್ತೋತ್ಸವದೊಂದಿಗೆ ಜಾತ್ರೆ ಆರಂಭವಾಗುತ್ತೆ. ೨೩ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ ನಿತ್ಯ ಉತ್ಸವಗಳು; ೨೪ರಂದು ಮಹಾಶಿವರಾತ್ರಿ ಜಾಗರಣೆ, ಬೆಳಿಗ್ಗೆ ದರ್ಶನ ಬಲಿ, ಕಂಚು ಬೆಳಕು ಸೇವೆಗಳು, ಸಂಜೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಉತ್ಸವ, ಶ್ರೀ ಕಾರಿಂಜೇಶ್ವರ ಸನ್ನಿಧಿಯಲ್ಲಿ ಏಕಾದಶ ರೂದ್ರಾಭಿಶೇಕ, ರಾತ್ರಿ ತುಲಾಭಾರ, ರಂಗ ಪೂಜೆ ಶತರುದ್ರಾಭಿಶೇಕ; ೨೫ರಂದು ಚಂದ್ರ ಮಂಡಲ, ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಪಾರ್ವತೀ ಪರಮೇಶ್ವರರ ಭೇಟಿ ಬೆಳಿಗ್ಗೆ ಶಯನೋತ್ಸವ ಕವಾಟ ಬಂಧ, ೨೬ಕ್ಕೆ ಬೆಳಗ್ಗೆ ಮಹಾ ರಥೋತ್ಸವ,ದೈವದ ನೇಮ, ೨೭ರಂದು ಬೆಳಗ್ಗೆ ಪಾರ್ವತಿ ಸನ್ನಿಧಿಯಲ್ಲಿ ದರ್ಶನಬಲಿ, ರಾತ್ರಿ ಪಾರ್ವತೀ ಪರಮೇಶ್ವರರ ಭೇಟಿ, ಭೂತ ಬಲಿ, ದೇವರ ಶಯನ, ಕವಾಟ ಬಂಧನ; ೨೮ಕ್ಕೆ ಕವಾಟೊದ್ಘಾಟನೆ, ಸಂಜೆ ಅವಭೃತ ಸ್ನಾನಕ್ಕೆ ಹೊರಡುವುದು, ವ್ಯಾಘ್ರ ಚಾಮುಂಡಿ ದೈವದ ನೇಮ, ದೈವದ ನೇಮೋತ್ಸವ, ಅವಭೃತ ಸ್ನಾನ, ಧ್ವಜಾವರೋಹಣ; ೩ರಂದು ನಾಗ ಸನ್ನಿಧಿಯಲ್ಲಿ ಪವಮಾನಾಭಿಷೇಕದೊಂದಿಗೆ ಜಾತ್ರೆ ಸಂಪನ್ನಗೊಳ್ಳುತ್ತದೆ
Be the first to comment on "ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ"