- ಹರೀಶ ಮಾಂಬಾಡಿ
- ಅಂಕಣ – ವಾಸ್ತವ
- www.bantwalnews.com
ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಆದರೆ ರಸ್ತೆ ಸುರಕ್ಷತೆ ಪ್ರತಿ ದಿನವೂ ಆಗಬೇಕು. ಅದೇ ರೀತಿ ನಮ್ಮ ಜೀವನವೂ ಸರಿಯಾದ ದಾರಿಯಲ್ಲಿ ನಿಧಾನವಾಗಿಯೇ ಸಾಗಬೇಕು ಅಲ್ಲವೇ
ಮೊನ್ನೆ ಮಂಗಳೂರಿಗೆ ಹೋಗಿದ್ದೆ. ಅಲ್ಲಿಂದ ಕೆ.ಪಿ.ಟಿ ಮೂಲಕ ಪದುವಾ ಹೈಸ್ಕೂಲ್ ಬಳಿ ಸಾಗಿ ನಂತೂರು ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಬೇಕು. ಹೀಗಾಗಿ ನಾನು ಎಡ ಭಾಗದಲ್ಲೇ ಸಾಗುತ್ತಿದ್ದೆ. ನನ್ನ ಎದುರಿಗಿರುವ ವಾಹನ ಮುಂದೆ ಹೋದಂತೆ ನಾನೂ ಮುಂದೆ ಹೋಗುತ್ತಿದ್ದೆ. ವಿಪರೀತ ವಾಹನದಟ್ಟಣೆ ಬೇರೆ.
ಎಲ್ಲಿಂದಲೋ ಕರ್ಕಶ ಹಾರ್ನ್ ಕೇಳಿದಂತಾಯಿತು. ನೋಡುವಾಗ ಹಿಂದಿನಿಂದ ಬಸ್ ಒಂದರ ಧ್ವನಿ. ಬಸ್ಸಿನವರಿಗೂ ಭಾರೀ ಅರ್ಜಂಟ್. ಆದರೇನು ಮಾಡೋಣ, ನನ್ನಲ್ಲಿ ಸೈಡ್ ಕೊಡಲು ಜಾಗವೇ ಇಲ್ಲ. ಎಡಕ್ಕೆ ತಿರುಗಿದರೆ ಅದು ರಸ್ತೆಯಲ್ಲ, ಮಣ್ಣಿನ ದಾರಿ. ಹಾಗೆ ಹೋಗುವುದೂ ತಪ್ಪು. ಹೀಗಾಗಿ ನಾನು ಸುಮ್ಮನೆ ನಿಂತೆ. ಮತ್ತೆ ಹಾರ್ನ್.
ಎಡಕ್ಕೆ ನೋಡಿದೆ. ಅಲ್ಲೊಂದು ಇನ್ನೋವಾ ನನ್ನ ಎಡ ಭಾಗದಿಂದ ಧೂಳೆಬ್ಬಿಸುತಾ ಹೋಯಿತು. (ಹೋದದ್ದು ಎಂದರೆ ಮುಂದೆ ನಿಂತದ್ದು ಅಷ್ಟೇ..ಮತ್ತೆ ರಸ್ತೆಗೆ ಆ ವಾಹನ ಬರಲೇಬೇಕು.) ಬಸ್ಸಿನವನೂ ಮತ್ತೆ ಹಾರ್ನ್ ಮಾಡಿ ಕೈ ಭಾಷೆ ಮಾಡಿದ. ಬದಿಗೆ ಸರೀರಿ, ನೀವು ಎಡಕ್ಕೆ ಹೋಗಿ ನಾನು ಮುಂದೆ ಹೋಗ್ತೇನೆ ಎಂದು.
ಸಾಮಾನ್ಯವಾಗಿ ನಾನು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸ್ಪರ್ಧೆಗೆ ಇಳಿಯುವುದಿಲ್ಲ. ಇಲ್ಲೂ ಸ್ಪರ್ಧೆ ಏನಿರಲಿಲ್ಲ. ಬಸ್ಸಿನವನಿಗೆ ನಾನು ಜಾಗ ಮಾಡಿಕೊಟ್ಟರೆ, ಮತ್ತೆ ವಾಪಸ್ ರಸ್ತೆಗೆ ಬರಲು ಅರ್ಧ ಗಂಟೆಯೇ ಬೇಕಾದೀತು. ಆಂಬುಲೆನ್ಸ್ ಆದರೆ ಸರಿಯಪ್ಪ, ಬಸ್ಸಿಗ್ಯಾಕೆ ಅರ್ಜಂಟು, ಒಂದೈದು ನಿಮಿಷಗಳಲ್ಲಿ ಎಲ್ಲಾ ಕ್ಲಿಯರ್ ಆಗುತ್ತದೆ ಎಂದು ಸುಮ್ಮನೆ ಕುಳಿತೆ. ಎಡಭಾಗದಿಂದ ಓವರ್ ಟೇಕ್ (ಅಂದರೆ ರಸ್ತೆಯಿಂದ ಕೆಳಗೆ ಇಳಿದು ವಾಹನ ಜ್ಯಾಮ್ ಗೆ ತನ್ನ ಅಮೋಘ ಕೊಡುಗೆ ನೀಡಿದ) ಮಾಡಿದ ಇನ್ನೋವಾದವನೂ ಮತ್ತೆ ಮುಂದೆ ಹೋಗಲು ಹರಸಾಹಸ ಪಡುತ್ತಿದ್ದ. ಕೊನೆಗೆ ಪೊಲೀಸ್ ವಿಸಿಲ್ ಊದಿದರು. ನಾನು ನನ್ನ ಮುಂದಿನ ವಾಹನವನ್ನು ಅನುಸರಿಸತೊಡಗಿದೆ.
ಆಗ ದಿಢೀರನೆ ಇನ್ನೋವ ವಾಹನದಾತ ನನ್ನ ಕಾರಿಗೆ ಗುದ್ದಿಯೇ ಬಿಡುತ್ತಾನೋ ಎಂಬಂತೆ ರಸ್ತೆ ಪ್ರವೇಶಿಸತೊಡಗಿದ. ಆ ಕಾರಿನಲ್ಲಿದ್ದ ಘನ ವ್ಯಕ್ತಿಗಳೆಲ್ಲ (?) ನಾನೇ ದೊಡ್ಡ ತಪ್ಪು ಮಾಡಿ, ಅವರ ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತೇನೋ ಎಂಬಂತೆ ಕೆಕ್ಕರಿಸಿಕೊಂಡು ನೋಡಿದರು. ಆದರೆ ಇನ್ನೋವಾದ ಮೂತಿ ಹೊಕ್ಕರೆ ಸಾಕೇ ನನ್ನ ಪುಟ್ಟ ಇಯಾನ್ ಕಾರು ಅವನನ್ನು ದಾಟಿ ಮುಂದೆ ಹೋಯಿತು. ಹಾಗೂ ಹೀಗೂ ಎಡಕ್ಕೆ ತಿರುಗಿ ಬಿ.ಸಿ.ರೋಡ್ ಕಡೆ ಡ್ರೈವ್ ಮಾಡಿದೆ.
ಇದು ಮಂಗಳೂರಿನ ನಂತೂರು ಜಂಕ್ಷನ್ ನ ನಿತ್ಯ ಕಥೆ. ಅಲ್ಲಿರುವ ಶ್ರೀಭಾರತೀ ಕಾಲೇಜಿನಿಂದ ನಂತೂರು ಬಿ.ಸಿ.ರೋಡಿಗೆ ತಿರುಗುವ ಬದಿವರೆಗೆ ರಸ್ತೆ ಬಿಟ್ಟು ಕೆಳಗಿಳಿದೇ ಅಕ್ರಮವಾಗಿ ವಾಹನಗಳು ಸಂಚರಿಸುತ್ತವೆ. ಹೀಗೆ ಹೋಗುತ್ತಲೇ ಮತ್ತೈದು ನಿಮಿಷ ವಾಹನ ಬ್ಲಾಕ್ ಆಗುತ್ತದೆ. ಪ್ರತಿಯೊಂದೂ ಸಾಲಿನಲ್ಲೇ ಬಂದರೆ ಇಂಥ ಟ್ರಾಫಿಕ್ ಜಾಮ್ ಆಗಲು ಸಾಧ್ಯವೇ ಇಲ್ಲ. ಆದರೆ ನಮ್ಮ ವಾಹನ ಚಾಲನೆ ಮಾಡುವವರು ಹೀಗೆ ಹೇಳಿದರೆ ನಮ್ಮನ್ನೇ ದಬಾಯಿಸಬಹುದು. ಹಾಗೆ ಎಡಕ್ಕೆ ತಿರುಗಿ, ಮತ್ತೆ ಬಲಕ್ಕೆ ಬರುವುದೇ (ಅರ್ಥಾತ್ ನುಗ್ಗಿಸುವುದು) ಉತ್ತಮ ಡ್ರೈವರ್ ಎಂಬ ಭಾವನೆ ಕೆಲವರಿಗಿದೆ. ಜಾಗ ಸಿಕ್ಕಲ್ಲಿ ನುಗ್ಗಿಸು ಎಂಬ ಥಿಯರಿಯಲ್ಲಿ ಇಂದು ವಾಹನ ಸಂಚಾರ.
ಇಷ್ಟೊಂದು ಕಷ್ಟಪಟ್ಟು ನಮ್ಮನ್ನು ದಾಟಿ ಮುಂದೆ ಹೋಗುತ್ತಾರೆ ಅಂದುಕೊಳ್ಳಿ. ಏನು ಸಾಧನೆ ಆದ ಹಾಗಾಯಿತು, ಏನೂ ಇಲ್ಲ. ನಮ್ಮನ್ನು ಓವರ್ ಟೇಕ್ ಮಾಡಿ ಹೋದ ವಾಹನಗಳು ಮತ್ತೆಲ್ಲೋ ನಮ್ಮ ಬುಡದಲ್ಲೇ ಸಿಗುತ್ತವೆ. ರಸ್ತೆ ನಿಯಮ ಉಲ್ಲಂಘಿಸಿ ಹೋಗೋದು ಯಾಕೆ ಎಂಬುದು ನನ್ನ ಪ್ರಶ್ನೆ.
ಇದು ಮಂಗಳೂರಿನಲ್ಲಷ್ಟೇ ಅಲ್ಲ ಬೆಂಗಳೂರಲ್ಲೂ ಇಂಥದ್ದೇ ವ್ಯವಸ್ಥೆ ಇದೆ. ಯಾವ ಊರಿಗೆ ಹೋದರೂ ಟ್ರಾಫಿಕ್ ಜಾಮ್ ಗೆ ವಾಹನ ಸವಾರರೇ ಕಾರಣಕರ್ತರಾಗುತ್ತಾರೆ. ಸುಗಮ ವಾಹನ ಸಂಚಾರಕ್ಕೆ ನಾವೇ ಸಹಕರಿಸದೇ ಇದ್ದರೆ ಯಾರನ್ನು ತಾನೇ ದೂರಬೇಕು ಹೇಳಿ? ಇಂದು ರಸ್ತೆ ಅಪಘಾತಕ್ಕೆ ಬಹಳಷ್ಟು ಸಾರಿ ಟ್ರಾಫಿಕ್ ವ್ಯವಸ್ಥೆ ಉಲ್ಲಂಘಿಸಿ ಸಾಗುವುದೇ ಕಾರಣ. ಯಾವುದೋ ಓವರ್ ಟೇಕ್ , ಎಲ್ಲೋ ನೋಡಿಕೊಂಡು ವಾಹನ ಚಲಾಯಿಸುವುದು, ಮೊಬೈಲ್ ಸಂಭಾಷಣೆಯೊಂದಿಗೆ ವಾಹನ ಚಲಾಯಿಸುವುದು ಹೀಗೆ ಒಂದೊಂದು ನಮ್ಮ ಲೋಪಗಳೇ.
ಅದರಲ್ಲೂ ಮೊಬೈಲ್ ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸುವವರನ್ನೇ ನೋಡಿ. ಮೊಬೈಲ್ ಮಾತಿನ ಸಂದರ್ಭ ದಿಢೀರನೆ ನಮ್ಮ ವೇಗ ಕಡಿಮೆಯಾಗುತ್ತದೆ. ನಮ್ಮ ಗಮನವೆಲ್ಲ ಮೊಬೈಲ್ ಸಂಭಾಷಣೆಯತ್ತ ಇರುತ್ತದೆ. ಆಗ ಹಿಂದಿನಿಂದ ಬರುವಾತನಿಗೆ ಅದರಿಂದ ಕಿರಿಕಿರಿಯಾಗುತ್ತದೆ.
ಇಷ್ಟೆಲ್ಲ ಬರೆದದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರಸ್ತಾಪಿಸಿದೆನಷ್ಟೇ. ವಾಹನ ಸಂಚಾರ ಸಂದರ್ಭ ರಸ್ತೆ ಸುರಕ್ಷತಾ ನಿಯಮ ಕಾಪಾಡಿಕೊಳ್ಳಿ ಎಂದೆಲ್ಲ ಹೇಳಿದರೆ ಅದೇ ದೊಡ್ಡ ತಪ್ಪು, ಯಾವುದಾದರೂ ಶಾಲಾ ಮಕ್ಕಳಿಗೆ ಪಾಠ ಮಾಡ್ರಪ್ಪ ಎಂಬಂತೆ ನೋಡುವವರೇ ಜಾಸ್ತಿ. ಹೀಗಾಗಿ ಪೊಲೀಸರಿಗೂ ಸಂಚಾರ ನಿಯಂತ್ರಣ ಕಷ್ಟ. ರಸ್ತೆಯಲ್ಲಿ ವಾಹನದಲ್ಲಿ ಸಾಗುವಾಗ ಜಾಗ್ರತೆ ವಹಿಸಬೇಕಾದದ್ದು ಇದ್ದದ್ದೇ. ಆದರೆ ನಿಯಮ ಪಾಲನೆ ಎಲ್ಲರಿಗೂ ಅನ್ವಯಿಸುವುದಿಲ್ಲವೇನು?
ಕೆಲವೊಂದು ಜಾಗಗಳಲ್ಲಿ ಅದರಲ್ಲೂ ಸಣ್ಣ ಪುಟ್ಟ ಪೇಟೆಗಳಲ್ಲೆಲ್ಲ ವಾಹನ ಸಂಚಾರ ನಿಯಂತ್ರಿಸಲು ಹೋಂ ಗಾರ್ಡ್ ಗಳು ಸಹಕಾರ ನೀಡುತ್ತಾರೆ. ಆದರೆ ಅವರನ್ನು ಪಬ್ಲಿಕ್ ಎಷ್ಟು ಮಾನ್ಯ ಮಾಡುತ್ತಾರೆ. ಇದೇ ಹೋಂ ಗಾರ್ಡುಗಳು ವಿಸಿಲ್ ಊದಿದರೂ ವಾಹನ ನಿಲ್ಲಿಸದೆ ಮುಂದೆ ಹೋಗುವುದು, ಅವರನ್ನು ಬೈಯುವುದು, ಅವರನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಉಢಾಫೆಯಿಂದ ವರ್ತಿಸುವವರು ಇನ್ನೂ ಇದ್ದಾರೆ.
ಹೋಮ್ ಗಾರ್ಡ್ ಗಳ ನಿಸ್ವಾರ್ಥ ಸೇವೆಯನ್ನೂ ಅರಿತುಕೊಳ್ಳುವುದಿಲ್ಲ. ಇಂದು ಟ್ರಾಫಿಕ್ ಸುಗಮವಾಗಬೇಕಾದರೆ, ಪೊಲೀಸ್ ಜೊತೆ ಸ್ವಯಂಸೇವಕರು ಬೇಕೇ ಬೇಕು. ಟ್ರಾಫಿಕ್ ಪೊಲೀಸರೂ ಧೂಳು, ಹೊಗೆ, ಬಿಸಿಲು, ಚಳಿ ಎನ್ನದೆ ವಾಹನ ನಿಯಂತ್ರಿಸಲು ಹರಸಾಹಸ ಪಡುತ್ತಾರೆ. ಆದರೆ ಒಂದೇ ಏಟಿಗೆ ವಾಹನ ಸವಾರರು ನಿಯಮಗಳನ್ನು ಗಾಳಿಗೆ ತೂರುತ್ತಾರೆ. ತಡೆಯಲು ಹೋಮ್ ಗಾರ್ಡ್ ಗಳೇನಾದರೂ ಬಂದರೆ ಕ್ಯಾರೆನ್ನುವುದಿಲ್ಲ.. ಪೊಲೀಸರ ಬಳಿಯೂ ನಾನು ಮೇಲಧಿಕಾರಿಗಳ ಬಳಿ ಮಾತಾಡ್ತೇನೆ ಎಂದು ಬಾಯಿ ಮುಚ್ಚಿಸುತ್ತಾರೆ.
ಅಷ್ಟಕ್ಕೂ ಈ ಧಾವಂತದಲ್ಲಿ ಸಾಧಿಸುವುದು ಏನನ್ನು?
ವಾಹನ ಚಾಲನೆಯಷ್ಟೇ ನಮ್ಮ ಜೀವನಕ್ರಮವೂ ನಾಗಾಲೋಟದಿಂದ ಸಾಗಲು ಬಯಸುವಂತೆ ಮಾಡುತ್ತದೆ. ಕಂಡಕಂಡದ್ದೆಲ್ಲ ಬೇಕು ಎಂಬಂಥ ಆತುರ ನಮ್ಮಲ್ಲಿರುತ್ತದೆ. ನಮ್ಮದೇ ಸರಿ ಎಂಬ ಅಂಥವಿಶ್ವಾಸ, ಇನ್ನೊಬ್ಬರ ಪ್ರಗತಿಯಾಗುವುದನ್ನು ಸಹಿಸಲು ಆಗದೇ ಇರುವುದು, ಅವರಿಗಿಂತ ಮೊದಲೇ ನಾವು ತಲುಪಬೇಕು ಎಂದಿರುವುದು ಕಾಣಿಸುತ್ತದೆ. ಈ ಧಾವಂತದಲ್ಲಿ ನಾವು ಏನನ್ನ ಸಾಧಿಸುತ್ತೇವೆ ಎಂಬ ಭ್ರಮೆಯೊಳಗೆ ಜೀವಿಸುತ್ತೇವೆ.
ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಆದರೆ ರಸ್ತೆ ಸುರಕ್ಷತೆ ಪ್ರತಿ ದಿನವೂ ಆಗಬೇಕು. ಅದೇ ರೀತಿ ನಮ್ಮ ಜೀವನವೂ ಸರಿಯಾದ ದಾರಿಯಲ್ಲಿ ನಿಧಾನವಾಗಿಯೇ ಸಾಗಬೇಕು
ಏನಂತೀರಿ?
Be the first to comment on "ಈ ಧಾವಂತದಲ್ಲಿ ಸಾಧಿಸುವುದು ಏನನ್ನು?"