ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಯಶಸ್ಸಿಗೆ ಮಕ್ಕಳ ಹೆತ್ತವರು ಹಾಗೂ ಸಮುದಾಯ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದೊಡ್ಡಕೆಂಪಯ್ಯ ಹೇಳಿದರು.
ಕಲ್ಲಡ್ಕದ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಜಂತುಹುಳ ನಿವಾರಣಾ ಅಭಿಯಾನವನ್ನು ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ನೀಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಮಕ್ಕಳ ಆರೋಗ್ಯ ಸರ್ಕಾರದ ಜವಬ್ದಾರಿಯಾಗಿದ್ದು, ಕಾಲಕಾಲಕ್ಕೆ ವಿವಿಧ ಕಾರ್ಯಕ್ರಮಗಳ ಮೂಲಕ ಜನಜಾಗೃತಿಮೂಡಿಸಲಾಗುತ್ತಿದೆ ಎಂದ ಅವರು, ಪ್ರತೀ ವಿಚಾರಗಳ ಕುರಿತಾಗಿ ಹೆತ್ತವರು ನೈಜತೆಯನ್ನು ಅರಿತು ಮಕ್ಕಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವಂತೆ ಅವರು ಮನವಿಮಾಡಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಮಾತನಾಡಿ, ವಿಕಾಸ ಹೊಂದುವ ಹಕ್ಕು ಕೂಡ ಮಕ್ಕಳ ಹಕ್ಕುಗಳ ಪೈಕಿ ಹೆಚ್ಚು ಪ್ರಾಮುಖ್ಯತೆ ಹೊಂದಿದ್ದು, ಮಕ್ಕಳ ಮಾನಸಿಕ ಹಾಗೂ ದೈಹಿಕ ಸಧೃಡತೆಯೂ ಸರ್ಕಾರದ ಜವಬ್ದಾರಿಯಾಗಿದೆ. ಇದರನ್ವಯ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯ ಮೂಲಕ ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಆರೋಗ್ಯ ಸಹಾಯಕಿ ರೋಹಿಣಿ ಜಂತುಹುಳ ನಿವಾರಣಾ ಅಭಿಯಾನ ಹಾಗೂ ದಡಾರ ರೆಬುಲಾ ಲಸಿಕೆ ಕುರಿತಾಗಿ ವಿವಿರವಾದ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಸಭಾಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಸದಸ್ಯರಾದ ಲಖಿತಾ ಆರ್ ಶೆಟ್ಟಿ, ಆಯಿಷಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಉಷಾ, ಸದಸ್ಯರಾದ ಅಬ್ದುಲ್ ರಹಿಮಾನ್, ವಾಸು, ಅಬ್ದುಲ್ ಕರೀಂ, ಅಶ್ರಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಸ್ವಾಗತಿಸಿದರು. ಶಿಕ್ಷಕಿ ವಾರಿಜಾಕ್ಷಿ ವಂದಿಸಿದರು. ಶಿಕ್ಷಕಿ ಸಂಗೀತ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ತಾಲೂಕು ಮಟ್ಟದ ರಾಷ್ಟ್ರೀಯ ಜಂತುಹುಳ ನಿವಾರಣಾ ಅಭಿಯಾನ ಉದ್ಘಾಟನೆ"