ವದಂತಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕರೆ ನೀಡಿದರು.
www.bantwalnews.com report
ಜೋಡುಮಾರ್ಗ ಆಶ್ರಮ ಶಾಲೆಯಲ್ಲಿ ಮಂಗಳವಾರ ದಡಾರ-ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾರಣಾಂತಿಕ ರೋಗವಾದ ದಡಾರ ಮತ್ತು ರುಬೆಲ್ಲಾ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಪ್ರಯೋಜನ ಪಡೆದು ತಮ್ಮ ಮಕ್ಕಳನ್ನು ದಡಾರ-ರುಬೆಲ್ಲಾ ರೋಗ ಮುಕ್ತರನ್ನಾಗಿಸಬೇಕು ಎಂದು ಹೇಳಿದರು.
ಉಪಸ್ಥಿತರಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮೀರಾಂದ ಮಾತನಾಡಿ, ಇಂದಿನ ಮಕ್ಕಳು ದೇಶದ ಭವಿಷ್ಯದ ಸಂಪತ್ತಾಗಿದ್ದು, ಅವರ ಆರೋಗ್ಯ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಆದ್ದರಿಂದ ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ಮಕ್ಕಳನ್ನು ಮುಕ್ತಗೊಳಿಸಲು ಸರಕಾರ ಹಮ್ಮಿಕೊಂಡಿರುವ ಈ ಲಸಿಕಾ ಅಭಿಯಾನದ ಯಶಸ್ವಿಗೆ ಸಮಾಜ ಪ್ರತೀಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ದಡಾರ ಮತ್ತು ರುಬೆಲ್ಲಾ ಕಾಯಿಲೆ ಹಾಗೂ ಲಸಿಕೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಶ್ರಮ ಶಾಲೆಯ ಮುಖ್ಯಸ್ಥ ಪ್ರಸಾದ್ ಉಪಸ್ಥಿತರಿದ್ದರು.
Be the first to comment on "ದಡಾರ-ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ"