ಕಾಮಾಜೆ ಪರಿಸರದಲ್ಲಿ ಹನ್ನೆರಡು ದಿನಗಳಿಂದ ನೀರು ಪೂರೈಕೆ ಆಗಿಲ್ಲ ಎಂದು ಆರೋಪಿಸಿ ಮಂಗಳವಾರ ಪುರಸಭೆಗೆ ಇಲ್ಲಿನ ನಿವಾಸಿಗಳು ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇಲ್ಲಿನ ವಾರ್ಡಿನ ಸುಮಾರು ಮುನ್ನೂರರಷ್ಟು ಮನೆಗಳಿಗೆ ನೀರು ಪೂರೈಸುವ ಬೋರ್ ವೆಲ್ ಹಾಳಾಗಿದ್ದು ಈ ಸಮಸ್ಯೆ ತಲೆದೋರಿತ್ತು.
ಸ್ಥಳೀಯ ಸದಸ್ಯ ಭಾಸ್ಕರ ಟೈಲರ್ ಈ ಕುರಿತು ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಗದಿರುವ ಕಾರಣ ಆಕ್ರೋಶಿತರಾದ ನಾಗರಿಕರು ಭಾಸ್ಕರ್ ಟೈಲರ್ ನೇತೃತ್ವದಲ್ಲಿ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಸುಗುಣಾ ಕಿಣಿ ಪ್ರತಿಭಟನಕಾರರಿಗೆ ಸಾಥ್ ನೀಡಿದರು.
ಮುಖ್ಯಾಧಿಕಾರಿ ಸುಧಾಕರ್ ಬೋರ್‌ವೆಲ್ ರಿಪೇರಿಮಾಡಲು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಂಜೆಯೊಳಗೆ ಸರಿಪಡಿಸಿ ನೀರು ಪೂರೈಸುವ ಭರವಸೆ ನೀಡಿದರು.
ಇದಕ್ಕೆ ಒಪ್ಪದ ಪ್ರತಿಭಟನಕಾರರು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು. ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಾಧಿಕಾರಿ ಸ್ಥಳಕ್ಕೆ ಕರೆಸಿದರೂ ಅವರ ಉತ್ತರ ಸಮಾಧಾನ ತರಲಿಲ್ಲ.
ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಕಾರರ ಮನವೋಲಿಸಲು ಯತ್ನಿಸಿದರು. ಸ್ಥಳಕ್ಕಾಗಮಿಸಿದ ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಮುಖ್ಯಾಧಿಕಾರಿ ಹಾಗೂ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು. ಸಂಜೆಯ ವೇಳೆಗೆ ಗುತ್ತಿಗೆದಾರನಿಂದ ಬೋರ್‌ವೆಲ್ ರಿಪೇರಿ ಮಾಡಿ ನೀರು ಪೂರೈಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರಲ್ಲದೆ ನಿಗದಿತ ಸಮಯದಲ್ಲಿ ಬಾರದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನೀಡಿದ ಭರವಸೆಯಂತೆ ಪ್ರತಿಭಟನಕಾರರು ತಮ್ಮ ಪ್ರತಿಭಟನೆ ಹಿಂಪಡೆದರು.
ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಗುತ್ತಿಗೆದಾರ ಕಾಮಾಜೆಗೆ ಆಗಮಿಸಿ ಕೆಟ್ಟು ಹೋದ ಬೋರ್‌ವೆಲ್ ಅನ್ನು ರಿಪೇರಿ ಮಾಡಿದ್ದಾರೆ.
Be the first to comment on "12 ದಿನಗಳಿಂದ ನೀರಿಲ್ಲ: ಕಾಮಾಜೆ ನಾಗರಿಕರ ಪ್ರತಿಭಟನೆ"