ಜನ, ಮನ, ಹಣ ಪರಿಶುದ್ಧವಾದರೆ ಮಾತ್ರ ಪರಿಶುದ್ಧವಾದ ಸಮಾಜ ನಿರ್ಮಾಣ ಸಾಧ್ಯ, ವಿಶ್ವಕ್ಕೇ ದೊಡ್ಡ ಧರ್ಮಚಾವಡಿ ಭಾರತ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಸೋಮವಾರ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆ 2017 ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಎಲ್ಲಿ ಸಹಕಾರ ಇಲ್ಲವೋ ಅಲ್ಲಿ ಶಸ್ತ್ರಕ್ರಿಯೆ ಆಗಬೇಕು. ನ್ಯಾಯ ಧರ್ಮಸೂಕ್ಷ್ಮತೆಯಿಂದ ಕೂಡಿರಬೇಕು. ಧರ್ಮಸೂಕ್ಷ್ಮತೆ ಅರಿತು ನ್ಯಾಯಾಧೀಶರೂ ತೀರ್ಪು ನೀಡಬೇಕು. ಕಠಿಣವಾದ ಕಾನೂನುಗಳು ಬರಬೇಕು ಎಂದ ಅವರು ಒಡಿಯೂರಿನ ಸಂಘಟನೆಗಳು ಸಾಗರೋತ್ತರ ತಲುಪಲು ಸಹಕಾರ ಬೇಕು ಎಂದು ಹೇಳಿದರು.
ಮನುಷ್ಯನ ಬದುಕು ಕ್ರಿಯಾಶೀಲವಾದರೆ ಸಂಸ್ಕಾರಯುವ ಬದುಕು ರೂಪಿಸಬೇಕು. ಕ್ರಿಯಾಶೀಲತೆ ಇಲ್ಲದಿದ್ದರೆ ಬದುಕು ಇಲ್ಲ. ಬದುಕು ನಿರಂತರವಾಗಿ ಹರಿಯುವ ನದಿಯ ನೀರಿನಂತೆ ಆಗಬೇಕು. ಅದಕ್ಕಾಗಿ ಸಂಸ್ಕಾರ ಬೇಕು. ದೇವರ ರಥವನ್ನು ನಾವೆಲ್ಲರೂ ಸೇರಿ ಎಳೆಯಬಹುದು. ಆದರೆ ನಮ್ಮ ದೇಹದಲ್ಲಿರುವ ರಥವನ್ನು ನಾವೇ ಎಳೆಯಬೇಕು, ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಚಕ್ರಗಳು ಬದುಕಿನ ತೇರನ್ನು ಎಳೆಯಲು ಸಾಧ್ಯ ಎಂದರು.
ರಾಷ್ಟ್ರ ಎಂದರೆ ನಮ್ಮ ಸಂಸ್ಕೃತಿ. ಅದರ ಬಗ್ಗೆ ಒಲವು ಇದೆ ಎಂದಾದರೆ ನಮ್ಮ ಬದುಕೂ ಚೆನ್ನಾಗಿರುತ್ತದೆ. ಧರ್ಮದ ಸಂರಕ್ಷಣೆ ನಮ್ಮ ಕರ್ತವ್ಯ ಎಂದಾದರೆ ಸಮಾಜ ಅಭಿವೃದ್ಧಿಯಾಗುತ್ತದೆ. ಒಡಿಯೂರು ರಥೋತ್ಸವ ಎಂದರೆ ಧರ್ಮ, ಸಂಸ್ಕೃತಿಯ ಜಾಗೃತಿ. ನಮ್ಮಲ್ಲಿ ಸೇವಾ ಮನೋಭಾವನೆಯನ್ನು ಮರೆಯಬಾರದು, ಯುವ ಶಕ್ತಿ ಜಾಗೃತವಾದಾಗ ಇದು ಸಾಧ್ಯ ಎಂದರು.
ಗ್ರಾಮ ವಿಕಾಸ ಕ್ಷೇತ್ರ ವಿಸ್ತಾರ: ಒಡಿಯೂರು ಗ್ರಾಮವಿಕಾಸ ಯೋಜನೆ ಇನ್ನೂ ವಿಸ್ತಾರವಾಗಿ ಬೆಳೆಸಬೇಕು ಎಂದು ವೇದಿಕೆಯಲ್ಲಿದ್ದ ಅತಿಥಿಗಳು ಕೋರಿಕೊಂಡ ಮಾತಿಗೆ ಮನ್ನಣೆ ನೀಡಿದ ಶ್ರೀಗಳು, ತುಳುನಾಡು ವ್ಯಾಪ್ತಿಯಿಡೀ ಗ್ರಾಮ ವಿಕಾಸ ಬೆಳೆಯಬೇಕು, ಸಾಗರೋತ್ತರ ಗುರುಸೇವಾ ಘಟಕಗಳೂ ಸ್ಥಾಪನೆಯಾಗಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದರು.
ಆಧ್ಯಾತ್ಮ ಅರಸಿ ಬರುವವರಿಗೆ ಆಧ್ಯಾತ್ಮ ಭವನ ನಿರ್ಮಿಸುವುದು ಹಾಗೂ ಹನುಮಗಿರಿಯಲ್ಲಿ ಆರೋಗ್ಯಧಾಮ ನಿರ್ಮಾಣದ ಯೋಜನೆಗಳನ್ನು ಸ್ವಾಮೀಜಿ ಪ್ರಸ್ತಾಪಿಸಿದರು.
ಪ್ರಧಾನ ಉಪನ್ಯಾಸ ನೀಡಿದ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಮಾತನಾಡಿ, ಸಂಸ್ಕೃತಿ ಮತ್ತು ಧರ್ಮ ಒಂದೇ ಆಗಿದ್ದು, ಭಾರತೀಯ ಜೀವನದಲ್ಲೇ ಹಾಸುಹೊಕ್ಕಾಗಿವೆ. ಸಮಾಜ ಮತ್ತು ಸಮಜ ಶಬ್ದಗಳೂ ನಿಕಟವಿದೆ. ಮನುಷ್ಯ ಉತ್ತಮ ಸಂಸ್ಕೃತಿನ್ನು ಹೊಂದಿರಬೇಕು ಎಂದು ಹೇಳಿದರು.
ಸಾಧ್ವಿ ಶ್ರೀ ಮಾತಾನಂದಮಯೀ , ನ್ಯಾಯಾಧೀಶ ಗೋಪಾಲಕೃಷ್ಣ ರೈ, ವೈದ್ಯ ಡಾ.ಸಿ.ಕೆ.ಬಲ್ಲಾಳ್, ಯುಎಇ ಬಂಟರ ಸಂಘ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಪುಣೆ ಬಂಟರ ಸಂಘ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ, ಉಡುಪಿ ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಅಧ್ಯಕ್ಷ ಕೆ.ಪ್ರಭಾಕರ ಶೆಟ್ಟಿ, ಮುಂಬೈ ಸೇವಾ ಬಳಗ ಉಪಾಧ್ಯಕ್ಷ ದಾಮೋದರ ಎಸ್. ಶೆಟ್ಟಿ, ನ್ಯಾಯಾಧೀಶ ಶಶಿಧರ ತುರುವೇಕೆರೆ, ಉದ್ಯಮಿ ಕುಸುಮಾಧರ ಶೆಟ್ಟಿ ಚೆಲ್ಯಡ್ಕ, ಕೃಷ್ಣ ಶೆಟ್ಟಿ, ವಾಮಯ್ಯ ಶೆಟ್ಟಿ, ಅಜಿತ್ ಕುಮಾರ್ ಪಂದಳ, ವಿಟ್ಲ ಸೇವಾ ಬಳಗ ಅಧ್ಯಕ್ಷ ಗಣೇಶ್ ರೈ, ಸಿದ್ದರಾಮಪ್ಪ, ಅಶೋಕ್ ಕುಮಾರ್ ಬಿಜೈ, ಜಯಂತ್ ಕೋಟ್ಯಾನ್, ನೀಲಕಂಠಪ್ಪ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಅಧ್ಯಕ್ಷೆ ಸರ್ವಾಣಿ ಬಿ.ಶೆಟ್ಟಿ, ರೇವತಿ ಬಿ.ಶೆಟ್ಟಿ, ಸುಮಾ ರಾಜಶೇಖರ್, ರಾಧಾಕೃಷ್ಣ ಪಕಳ, ಸುಲೋಚನಾ ಜಿ.ಕೆ. ಭಟ್ ಉಪಸ್ಥಿತರಿದ್ದರು.
ನಿವೃತ್ತ ಯೋಧರಿಗೆ ಸನ್ಮಾನ
ಇದೇ ಸಂದರ್ಭ ನಿವೃತ್ತ ಯೋಧರನ್ನು ಶ್ರೀಗಳು ಸನ್ಮಾನಿಸಿದರು. ಪೂವಪ್ಪ ಕಡಂಬಾರು, ಬೇತ ಗೋಪಾಲಕೃಷ್ಣ ಭಟ್, ಡಿ.ಶಿವರಾಮ ರಾವ್, ಸಂಜೀವ ಗೌಡ, ಸತೀಶ ಉಕ್ಕುಡ, ಹರೀಶ ಶೆಟ್ಟಿ, ಕೃಷ್ಣನ್ ಚೆರ್ವತ್ತೂರು, ತನಿಯಪ್ಪ ನಾಯ್ಕ್ ಗೌರವ ಸ್ವೀಕರಿಸಿದರು.
ಶ್ರೀ ಶಂಕರ ಟಿ.ವಿ.ಯಲ್ಲಿ ಒಡಿಯೂರು ಕ್ಷೇತ್ರಕ್ಕೆ ಸಂಬಂಧಿಸಿ ಪ್ರಸಾರವಾದ ಧಾರಾವಾಹಿಯ ಡಿವಿಡಿಯನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. ಈ ಸಂದರ್ಭ ಸಾಹಿತಿ – ಪತ್ರಕರ್ತ ಲಕ್ಷ್ಮೀ ಮಚ್ಚಿನ, ಚಿತ್ರೀಕರಣ ಮಾಡಿದ ಕೃಷ್ಣಕಾಂತ ಕಿಣಿ ಅವರನ್ನು ಸನ್ಮಾನಿಸಲಾಯಿತು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಮಾತೇಶ್ ಭಂಡಾರಿ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
Be the first to comment on "ವಿಶ್ವಕ್ಕೆ ದೊಡ್ಡ ಧರ್ಮಚಾವಡಿ ಭಾರತ: ಒಡಿಯೂರು ಸ್ವಾಮೀಜಿ"