ಐವರ್ನಾಡಿನಲ್ಲಿ ನಡೆದ ಕಾರು ದರೋಡೆ ಆರೋಫಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಗುತ್ತಿಗಾರಿನಲ್ಲಿ ಅಡಿಕೆ ವ್ಯಾಪಾರಿಯಾಗಿರುವ ಬೆಳ್ಳಾರೆಯ ಅಬ್ದುಲ್ ಖಾದರ್ ಬಯಂಬಾಡಿ ಎಂಬವರು ಬೆಳ್ಳಾರೆಯಿಂದ ಗುತ್ತಿಗಾರಿಗೆ ತೆರಳುತ್ತಿದ್ದಾಗ ಐವರ್ನಾಡಿನಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಪಿಸ್ತೂಲ್, ತಲವಾರು ತೋರಿಸಿ ಕಾರಲ್ಲಿದ್ದ 5 ಲಕ್ಷ ರೂ ನಗದು ಹಾಗೂ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದರು.
ಬಂಧಿತ ಬೆಳಂದೂರು ಗ್ರಾಮದ ಮಹಮ್ಮದ್ ಹನೀಫ್, ಅಬ್ದುಲ್ ಕರೀಂ, ಬೆಂಗಳೂರಿನ ತಾಹಿರ್ ಹುಸೇನ್, ಮುಂಬೈಯ ಅವಿನಾಶ್ ಮಾರ್ಕೆ, ಅಹ್ಮದ್ ಸೈಯದ್ ರೆಹಮಾನ್ ಅವರನ್ನು ಅಲ್ಲಿನ ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಇಲ್ಲಿನ ನ್ಯಾಯಾಲಯದಿಂದ ಸರ್ಚ್ ವಾರಾಂಟ್ ಪಡೆದು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ತಮ್ಮ ವಶಕ್ಕೆ ಪಡೆದ ಬಳಿಕ ದರೋಡೆ ಕೃತ್ಯದ ಪೂರ್ಣ ವಿವರ ಬಯಲಿಗೆ ಬರಲಿದೆ.
ಅಡಿಕೆ ವ್ಯಾಪಾರಿ ಅಬ್ದುಲ್ ಖಾದರ್‌ರವರು ತನ್ನ ಮಿತ್ರ ಶಫೀಕ್ ಮತ್ತು ನೌಕರರರಾದ ಅಬ್ದುಲ್ ಜಾಸಿರ್ ಹಾಗೂ ಬಸವರಾಜ್ ಎಂಬವರೊಂದಿಗೆ ಬೆಳ್ಳಾರೆಯಿಂದ ಗುತ್ತಿಗಾರಿಗೆ ತನ್ನ ಕಾರಲ್ಲಿ ಹೊರಟಿದ್ದರು. ಕಾರು ಐವರ್ನಾಡು ತಲುಪುವ ವೇಳೆ ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಕಾರೊಂದು ಇವರ ಕಾರಿನ ಮುಂದೆ ಹೋಗಿ ಅಡ್ಡ ನಿಂತಿತು. ಅದರಲ್ಲಿದ್ದ ನಾಲ್ವರು ಪಿಸ್ತೂಲ್ ಮತ್ತು ತಲವಾರು ತೋರಿಸಿ ಕಾರಲ್ಲಿದ್ದ ನಗದು, ಚೆಕ್ ಬುಕ್, ನಾಲ್ವರ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ದಿನೇಶ್ ಶೆಟ್ಟಿ ಪರಾರಿಗೆ ಸಹಕರಿಸುವ ಉದ್ದೇಶದಿಂದ ಬೆಳಗಾವಿಗೆ ತೆರಲಿದ್ದ 6 ಮಂದಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದು, ಅವರು ಐವರ್ನಾಡಿನಲ್ಲಿ ದರೋಡೆ ನಡೆಸಿದ್ದನ್ನು ಬಾಯ್ಬಿಟ್ಟಿದ್ದಾರೆ. ಅವರ ಬಳಿಯಿದ್ದ ಪಿಸ್ತೂಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Be the first to comment on "ಐವರ್ನಾಡು ಕಾರು ದರೋಡೆ ಆರೋಪಿಗಳು ಬೆಳಗಾವಿಯಲ್ಲಿ ಪೊಲೀಸ್ ಬಲೆಗೆ"