ಬಾಗಲಕೋಟೆಯೆಂಬ ಮುಳುಗದ ನಗರ

ಭೈರಪ್ಪನವರ ಕಾದಂಬರಿಗಳಲ್ಲಿ ವಸ್ತು ಮತ್ತು ತಂತ್ರದ ಹೊಂದಾಣಿಕೆ ಎಂಬ ವಿಷಯದ ಬಗ್ಗೆ ನಮ್ಮ ಅಂಕಣಕಾರ ಡಾ.ಅಜಕ್ಕಳ ಗಿರೀಶ ಭಟ್ ಕಳೆದ ವಾರ ಬಾಗಲಕೋಟೆಯಲ್ಲಿ ಉಪನ್ಯಾಸ ನೀಡಿದ್ದರು. ಈ ಸಂದರ್‍ಭ ಅವರು ಬಾಗಲಕೋಟೆಯನ್ನು ಕಂಡ ಪರಿ ಇದು.

  • ಡಾ.ಅಜಕ್ಕಳ ಗಿರೀಶ ಭಟ್

www.bantwalnews.com

ಅಂಕಣ: ಗಿರಿಲಹರಿ

 

ಕಳೆದ ವಾರ ಬಾಗಲಕೋಟೆಗೆ ಭೇಟಿ ನೀಡಿದ ನಂತರ ಆ ಊರಿನ ಬಗ್ಗೆ ಮತ್ತು ಅಲ್ಲಿಗೆ ನಾನು ಹೋಗಲು ಕಾರಣವಾದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜುಗಳ ಬಗ್ಗೆ ಬರೆಯದೆ ಇರಲು ಸಾಧ್ಯವೇ ಇಲ್ಲ ಅನಿಸಿಬಿಟ್ಟಿದೆ.

ಬಾಗಲಕೋಟೆಯ ಬಿ ವಿ ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯವು ಡಾ. ಎಸ್. ಎಲ್. ಭೈರಪ್ಪನವರ ಸಾಹಿತ್ಯದ ಕುರಿತಾದ ವಿಚಾರ ಸಂಕಿರಣ, ಸಂವಾದ ಮತ್ತು ಗೌರವಾಭಿನಂದನ ಸಮಾರಂಭವನ್ನು ಆಯೋಜಿಸಿತ್ತು. ಭೈರಪ್ಪನವರ ಕಾದಂಬರಿಗಳಲ್ಲಿ ವಸ್ತು ಮತ್ತು ತಂತ್ರದ ಹೊಂದಾಣಿಕೆ ಎಂಬ ವಿಷಯದ ಬಗ್ಗೆ ನಾನು ಒಂದು ಗೋಷ್ಠಿಯಲ್ಲಿ ಮಾತನಾಡಬೇಕಾಗಿತ್ತು. ಆ ನೆಪದಲ್ಲಿ ನನ್ನ ಬಾಗಲಕೋಟೆ ಯಾತ್ರೆಯಾಯಿತು. ಆ ಜಿಲ್ಲೆಗೆ ನಾನು ಹೋದುದು ಇದು ಮೊದಲ ಬಾರಿ. ಅದು ನೆನೆಪಿನಲ್ಲುಳಿಯುವ ಅನುಭವವೇ ಹೌದು.

ನಿಮಗೆಲ್ಲ ಗೊತ್ತಿರುವ ಹಾಗೆ ಬಾಗಲಕೋಟೆಯಲ್ಲಿ ಈಗ ನವನಗರ ನಿರ್ಮಾಣವಾಗಿದೆ. ಆಲಮಟ್ಟಿ ಜಲಾಶಯದ ನೀರು ನಿಲ್ಲಲು ಬಾಗಲಕೋಟೆ ನಗರದ ಬಹುಭಾಗದ ಜನರು ತಮ್ಮ ಮನೆ, ಹೊಲ ಇತ್ಯಾದಿಗಳನ್ನು ತೊರೆಯಬೇಕಾಯಿತು. ಆದರೆ ಹೊಸತಾಗಿ ಕಟ್ಟಲಾದ ನವನಗರ ಒಂದು ಯೋಜಿತ ನಗರ. ಮುಳುಗಡೆ ಜಾಗದಿಂದ ಬಂದು ಈಗ ಈ ನವನಗರದಲ್ಲಿ ವಾಸವಿರುವವರೂ ಸಂತೋಷವಾಗಿದ್ದಾರೆ. ಪುನರ್ವಸತಿಯ ಪ್ಯಾಕೇಜು ಅತ್ಯುತ್ತಮವಾಗಿರುವುದೇ ಇದಕ್ಕೆ ಕಾರಣ. ಮುಳುಗಡೆ ಜಾಗದಲ್ಲಿ ಹೊಲಗದ್ದೆಗಳನ್ನು ಹೊಂದಿದ್ದವರು, ಜನವರಿ ತಿಂಗಳಿಗಾಗುವಾಗ ಅಣೆಕಟ್ಟಿನಲ್ಲಿ ನೀರು ಕಡಿಮೆಯಾಗಿ, ತಮ್ಮ ಹಳೆ ಹೊಲ ಮೇಲೆದ್ದಾಗ ಆ ಫಲವತ್ತಾದ ಮಣ್ಣಿನಲ್ಲಿ ಮೊದಲಿಗಿಂತ ಉತಮ ಬೆಳೆ ಬೆಳೆಯುತ್ತಾರೆ. ಹೀಗಾಗಿ ಮುಳುಗಿದ್ದೂ ನಷ್ಟವಲ್ಲ ಎಂಬ ಭಾವ ಅವರಲ್ಲಿರುವಂತಿದೆ.

ಅಂತೂ ಎರಡು ಹಗಲು ಒಂದು ರಾತ್ರಿ ಮಟ್ಟಿಗೆ ನನಗೆ ಆಶ್ರಯ ನೀಡಿದ ಈ ಊರು ನನಗೆ ಬಹಳ ಖುಷಿ ಕೊಡಲು ಮುಖ್ಯ ಕಾರಣ ಮೇಲೆ ಹೇಳಿದ ವಿಚಾರಸಂಕಿರಣ ಇತ್ಯಾದಿ ಕಾರ್ಯಕ್ರಮಗಳನ್ನು  ಅಲ್ಲಿಯ ಕಾಲೇಜಿನವರು ಆಯೋಜಿಸಿದ ಮತ್ತು ನಡೆಸಿದ ರೀತಿ.

ಎರಡು ದಿನಗಳ ಕಾರ್ಯಕ್ರಮವಿತ್ತು. ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ವಿವಿಧ ಬಗೆಗಳಲ್ಲಿ, ಕಾಲೇಜು ಮಟ್ಟ, ವಿವಿ ಮಟ್ಟ, ರಾಜ್ಯ ಮಟ್ಟ ರಾಷ್ಟ್ರ ಮಟ್ಟ, ಅಂತಾರಾಷ್ಟ್ರೀಯ ಮಟ್ಟ ಹೀಗೆ ಸ್ತರಗಳಲ್ಲಿ ವಿಚಾರ ಸಂಕಿರಣ, ಗೋಷ್ಠಿ, ಸಮ್ಮೇಳನ ಇತ್ಯಾದಿಗಳು ನಾಡಿನ ಬೇರೆ ಬೇರೆ ಕಡೆಗಳಲ್ಲಿ ಆಗುತ್ತಿರುವುದನ್ನು ನೋಡುತ್ತ ಬಂದಿದ್ದೇನೆ. ಹಲವೆಡೆ ಸಂಪನ್ಮೂಲ ವ್ಯಕ್ತಿಯಾಗಿ ಮತ್ತೆ ಹಲವೆಡೆ ಸಂಪನ್ಮೂಲವಿಲ್ಲದ ವ್ಯಕ್ತಿಯಾಗಿ(ಅಂದರೆ ಯಾವುದೇ ಟೀಯೇ ಡೀಯೇಯಂಥ ಸಂಪನ್ಮೂಲ ಪಡೆಯದೆ, ಕೇವಲ ಭಾಗಿಯಾಗಿ) ಬಾಗವಹಿಸಿದ್ದೇನೆ. ಆದರೆ,ಸಾಹಿತಿಯೊಬ್ಬರ ಸಾಹಿತ್ಯದ ಕುರಿತಾದ ಯಾವುದೇ ವಿಚಾರಸಂಕಿರಣವು ಇಷ್ಟೊಂದು ವ್ಯವಸ್ಥಿತವಾಗಿ ಇಷ್ಟೊಂದು ಸಂಭ್ರಮದೊಂದಿಗೆ ಆದುದನ್ನು ನಾನು ಈವರೆಗೆ ನೋಡಿದ್ದಿಲ್ಲ.

ಮೊದಲ ದಿನ ಡಾ. ಭೈರಪ್ಪನವರನ್ನು ಕಾಲೇಜಿನ ಮುಖ್ಯದ್ವಾರದ ಬಳಿ ಸ್ವಾಗತಿಸಿದ ಬಗೆ ಅದ್ಬುತವಾಗಿತ್ತು. ಈ ಶ್ರೇಷ್ಠ್ಟ ಸಾಹಿತಿಯನ್ನು ಸ್ವಾಗತಿಸಲು ದ್ವಾರದ ಬಳಿ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಹೀಗೆ ಎಲ್ಲಾ ಕಾಲೇಜುಗಳ ಬೋಧಕರು, ಬೋಧಕೇತರರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿಯ ಸಮಸ್ತ ಪದಾಧಿಕಾರಿಗಳ ಜೊತೆ ಒಂದು ಬ್ಯಾಟರಿ ಚಾಲಿತ ವಾಹನ ಸಿದ್ಧವಾಗಿತ್ತು. ಕಾಲೇಜುಗಳ ಆವರಣದೊಳಗೆ ಇದ್ದ ಎರಡು ದೊಡ್ಡ ದೊಡ್ಡ ಮೈದಾನಗಳನ್ನು ಸುತ್ತುವರಿದು,ಸುಮಾರು ಒಂದು ಕಿಲೋಮೀಟರಿನಷ್ಟು ದೂರವಿದ್ದ ಸಭಾಭವನದವರೆಗೆ ಭೈರಪ್ಪನವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲು ಅಲಂಕೃತವಾಗಿ ಸಿದ್ಧವಾಗಿ ಇದ್ದುದು ಆ ವಾಹನ. ಎರಡು ದೊಡ್ಡ ದೊಡ್ಡ ಆಟದ ಮೈದಾನಗಳನ್ನು ಬಳಸಿದ್ದ ಆ ಒಂದು ಕಿಲೋಮೀಟರಿನಷ್ಟು ಉದ್ದದ ರಸ್ತೆಯ ಉದ್ದಕ್ಕೂ ಹೂಚೆಲ್ಲಲು ತಯಾರಾಗಿ ನಿಂತಿದ್ದ ಸಾವಿರಗಟ್ಟಲೆ ವಿದ್ಯಾರ್ಥಿಗಳನ್ನು ನಿರಾಸೆಗೊಳಿಸಲು ಭೈರಪ್ಪನವರಿಗೆ ಅವಕಾಶವೇ ಇರಲಿಲ್ಲ. ಮೆರವಣಿಗೆ ವಾಹನವನ್ನು ಏರಲೇಬೇಕಿತ್ತು ಅವರು.ರಸ್ತೆಯುದ್ದಕ್ಕೂ ರಂಗೋಲಿಗಳ ಸಾಲು. ನೂರಿನ್ನೂರು ಮಿಟರುಗಳಷ್ಟು ಉದ್ದಕ್ಕೆ ಕೆಂಪು ನೆಲಹಾಸು! ಅಕ್ಷರಶಃ ರೆಡ್ ಕಾರ್ಪೆಟ್ ವೆಲ್ಕಮ್! ಇನ್ನು ವಿಚಾರಸಂಕಿರಣ ನಡೆದ, ಸಂಪೂರ್ಣ ಹವಾನಿಯಂತ್ರಿತ ಸಭಾಂಗಣವಂತೂ ತುಂಬಿ ತುಳುಕುತ್ತಿತ್ತು ಅಷ್ಟೇ ಅಲ್ಲ; ಹೊರಗಡೆ ಕೂಡ ಪರದೆಯಲ್ಲಿ ನೋಡಲು ವ್ಯವಸ್ಥೆ ಇತ್ತು. ಇದು ಕೇವಲ ತೋರಿಕೆಗಾಗಿ ಸೇರಿದ ಸಮೂಹವಾಗಿರಲಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಭೈರಪ್ಪನವರ ಇತ್ತೀಚಿನ ಕಾದಂಬರಿ ಉತ್ತರಕಾಂಡದ 300 ಪ್ರತಿಗಳು ಮೊದಲ ದಿನವೇ ಖಾಲಿಯಾಗಿದ್ದವು. ಅವರ ಇತರ ಕೃತಿಗಳೂ ಅಷ್ಟೇ ಭರದಿಂದ ಮಾರಾಟವಾಗುತ್ತಿದ್ದವು.

ಇದನ್ನು ನೋಡುವಾಗ ಭೈರಪ್ಪರ ಅಭಿಮಾನಿಯಾದ, ಎಲ್ಲೋ ಒಂದೆರಡು ಪುಸ್ತಕಗಳನ್ನು ಬರೆದು ಲೇಖಕ ಅನ್ನಿಸಿಕೊಂಡ, ನನ್ನಂಥವರಿಗೇ ಮತ್ಸರವಾಗುತ್ತದೆ ಅಂದಾಗ ಜೀವನದುದ್ದಕ್ಕೂ ಭೈರಪ್ಪರನ್ನು ಬೈದೇ ಬೇಳೆ ಬೇಯಿಸಿಕೊಂಡ, ಹಲವಾರು ಪುಸ್ತಕಗಳನ್ನು ಬರೆದು ಖ್ಯಾತರಾಗಿ ಹಾಗೂ ಮಾರಾಟವಾಗದ(ಮದುವೆಯಾಗದ) ಕೃಷಿ ಕುಟುಂಬದ ಮಗನನ್ನು ನೋಡುತ್ತ ದುಃಖಿಸುವ ಹೆತ್ತವರಂತೆ ತಮ್ಮ ಪುಸ್ತಕಗಳ ಅಟ್ಟಿಯನ್ನು ನೋಡುತ್ತ ದುಃಖಿಸುವ ಸಾಹಿತಿಗಳೆನಿಸಿಕೊಂಡವರಿಗೆ ಎಷ್ಟು ಹೊಟ್ಟೆ ಉರಿದೀತು?!

ಈ ವಿಚಾರಸಂಕಿರಣವನ್ನು ಆಯೋಜಿಸಿದುದು ಕಲಾ ಮಹಾವಿದ್ಯಾಲಯವಾಗಿದ್ದರೂ ಬಿವಿವಿ ಸಂಘದ ಇತರ ಕಾಲೇಜುಗಳ ಸಿಬ್ಬಂದಿ ವರ್ಗದವರೂ ಇದರಲ್ಲಿ ಅಷ್ಟೇ ಉತ್ಸಾಹ ಮತ್ತು ಆಸಕ್ತಿಯಿಂದ ತೊಡಗಿಸಿಕೊಂಡಿದ್ದರು. ದೊಡ್ಡ ಸಾಧನೆ ಮಾಡಿದ ವಿಜ್ಞಾನಿಗಳನ್ನು, ಸಂಗೀತಗಾರರನ್ನು ಹೀಗೆ ಸಾಧಕರನ್ನು ಕಾಲೇಜುಗಳಿಗೆ ಕರೆಸಿ ವಿದ್ಯಾರ್ಥಿಗಳ ಎದುರು ಅವರ ಸಾಧನೆ, ಪ್ರತಿಭೆಗಳನ್ನು ಪರಿಚಯಿಸುವ ಕೆಲಸವನ್ನು ಬಿವಿವಿ ಸಂಘ ಮಾಡುತ್ತಲೇ ಬಂದಿದೆ ಎಂದು ತಿಳಿಯಿತು. ಇಂಥ ಕೆಲಸಗಳು ವಿದ್ಯಾರ್ಥಿಗಳಿಗೆ ನೀಡಬಹುದಾದ ಸ್ಫೂರ್ತಿ ಗಮನಾರ್ಹ.

ಬಸವೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಟಗಿಹಳ್ಳಿಮಠ ಅವರನ್ನು ಗೊತ್ತಿದ್ದವರಿಗೆ ಬಹುಶಃ ಈ ವಿದ್ಯಾ ಸಂಸ್ಥೆ ಈ ರೀತಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವುದು ಆಶ್ಚರ್ಯದ ಸಂಗತಿ ಎನಿಸಲಾರದು. ಅವರು ಹಾಗೂ ಅವರ ಸಿಬ್ಬಂದಿ ಎಷ್ಟು ಪೂರ್ವತಯಾರಿಯಿಂದ ಎಲ್ಲವನ್ನೂ ಆಯೋಜಿಸಿದ್ದರು ಎಂಬುದನ್ನು ವಿವರಿಸುವುದು ಕಷ್ಟ, ನೋಡಿಯೇ ತಿಳಿಯಬೇಕು. ಅದೇ ರೀತಿ ಬಿವಿವಿ ಸಂಘದ ಕಾಲೇಜುಗಳ ಆಡಳಿತಮಂಡಳಿಯ ಕಾರ್ಯಾಧ್ಯಕ್ಷರಾದ ಅಶೋಕ ಎಂ ಸಜ್ಜನ( ಬೇವೂರ), ಬಿವಿವಿ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಎನ್ ಅಥಣಿ ಮೊದಲಾಗಿ ಆಡಳಿತ ಸಮಿತಿಯವರು ಮೊದಲ ದಿನ ಬೆಳಗ್ಗೆ 7 ಗಂಟೆಗೆ ಅತಿಥಿಗಳನ್ನು ಸ್ವ್ವಾಗತಿಸುವುದರಿಂದ ಆರಂಭಿಸಿ ಎರಡನೇ ದಿನ ಅಪರಾಹ್ನ ಕಾರ್ಯಕ್ರಮಗಳೆಲ್ಲ ಮುಗಿಯುವವರೆಗೂ ಉಪಸ್ಥಿತರಿದ್ದರು ಎಂದು ಹೇಳಿದರೆ ಅವರು ಕಾಲೇಜಿನ ಜೊತೆ ತೊಡಗಿಸಿಕೊಂಡ ಪರಿ ಅರ್ಥವಾದೀತು.

ಇದೆಲ್ಲದರ ಹಿಂದೆ ಮತ್ತೊಬ್ಬ ಮಹನೀಯರು ಇರುವುದನ್ನು ಉಲ್ಲೇಖಿಸದೆ ಇರಲಾಗದು. ಅವರೇ ವೀರಣ್ಣ ಚರಂತಿಮಠ ಅವರು. ಇವರು ಹಿಂದೆ ಬಾಗಲಕೋಟೆಯ ಶಾಸಕರಾಗಿದ್ದವರು. ಕಳೆದ ಇಪ್ಪತ್ತೇಳು ವರ್ಷಗಳಿಂದ ಬಿವಿವಿ ಸಂಘದ ಕಾರ್ಯಾಧ್ಯಕ್ಷರು. ಬಾಗಲಕೋಟೆ ಕ್ಷೇತ್ರಕ್ಕೆ ಈಗಿನ ರೂಪ ಕೊಟ್ಟ ಮಹನೀಯರು ಇವರು ಎಂದು ನಾನು ಮಾತನಾಡಿಸಿದ ಎಲ್ಲರೂ ಹೇಳಿದರು. ಇವರ ಆಡಳಿತಾವಧಿಯಲ್ಲಿ ಬಿವಿವಿ ಸಂಘದ ವಿದ್ಯಾ ಸಂಸ್ಥೆಗಳು ಸಂಖ್ಯೆಯಲ್ಲಿ ಹಾಗೂ ಗುಣಮಟ್ಟದಲ್ಲಿ ಇನ್ನಿಲ್ಲದಂತೆ ಬೆಳೆದಿವೆ ಎಂದು ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಕಾಲೇಜುಗಳ ಆಸುಪಾಸಿನ ಅಂಗಡಿ ಮುಂಗಟ್ಟಿನವರೂ ಹೇಳುತ್ತಾರೆ. ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳೂ ಸೇರಿದಂತೆ ನೂರು-ನೂರೈವತ್ತು ಸಂಸ್ಥೆಗಳಿಗೆ ಮುಖ್ಯಸ್ಥರಾದ ಚರಂತಿಮಠರು ಈಗಲೂ ದಿನಕ್ಕೆ ಎರಡು ಮೂರು ಗಂಟೆ ತಮ್ಮ ಅಂಗಡಿಯಲ್ಲಿ ಕುಳಿತುಕೊಳ್ಳುವಷ್ಟು ಸಮಯ ಉಳಿಸಿಕೊಂಡಿದ್ದಾರೆ ಎಂದರೆ ಅವರದು ಸರಳ, ನೇರ ಮತ್ತು ಕಾರ್ಯಶೀಲ ವ್ಯಕ್ತಿತ್ವ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನೀವು ಯಾವುದೇ ದೊಡ್ಡ ಸಂಸ್ಥೆಗಳಲ್ಲಿ ನಡೆಯುವ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ  ವಿಚಾರಸಂಕಿರಣಗಳನ್ನು ನೋಡಿದರೂ ಗೊತ್ತಾಗುತ್ತದೆ; ಆಡಳಿತ ಮಂಡಳಿಯವರು ಉದ್ಘಾಟನೆ ಹೊತ್ತಿಗೆ ಬಂದು ಉದ್ಘಾಟನೆ ಮಾಡಿಯೋ ಅಧ್ಯಕ್ಷತೆ ವಹಿಸಿಯೋ ಆ ಔಪಚಾರಿಕ ಅವಧಿ ಮುಗಿದ ತಕ್ಷಣ ತಮ್ಮ ಬ್ಯುಸಿ ಶೆಡ್ಯೂಲಿನಿಂದಾಗಿ ಮಾಯವಾಗುತ್ತಾರೆ. ನ್ಯಾಕ್ ವರದಿಯಲ್ಲಿ ಒಳ್ಳೆಯ ಅಂಕ ಬರಲು ವಿಚಾರಸಂಕಿರಣಗಳ ಅಗತ್ಯ ಇದೆ ಎಂದು ಹೇಳುವ ಪ್ರಾಂಶುಪಾಲರ ಒತ್ತಾಯಕ್ಕೆ ಒಪ್ಪಿ, ಕಡಿಮೆ ಖರ್ಚಿನಲ್ಲಿ ಮುಗಿಯಬೇಕು ಎಂಬ ಸೂಚನೆಯನ್ನು ಪ್ರಾಂಶುಪಾಲರಿಗೆ ನೀಡಬಹುದು ಹೊರತು ವಿಚಾರಸಂಕಿರಣದಲ್ಲಿ ಏನು ಚರ್ಚೆಯಾಗುತ್ತದೆ ಇತ್ಯಾದಿ ಬಗ್ಗೆ ಬಹಳ ಮಂದಿ ಅಧ್ಯಕ್ಷ ಅಥವಾ ಕಾರ್ಯದರ್ಶಿಗಳಿಗೆ ಆಸಕ್ತಿ ಇರುವುದಿಲ್ಲ. ಆದರೆ ಇಲ್ಲಿ ಚರಂತಿಮಠರು ಮತ್ತು ಅವರ ಸಹವರ್ತಿಗಳು ವಿಚಾರಸಂಕಿರಣ ಹಾಗೂ ಇತರೆಲ್ಲ ಕಾರ್ಯಕ್ರಮಗಳಲ್ಲಿ ಉದ್ದಕ್ಕೂ ಇದ್ದರು ಅನ್ನುವುದನ್ನು ವಿಶೇಷವಾಗಿ ಉಲ್ಲೇಖಿಸಬೇಕು.

ಬಿವಿವಿ ಸಂಘದ ವಿವಿಧ ಕಾಲೇಜುಗಳ ಬೋಧಕ ವರ್ಗದವರು ತೊಡಗಿಸಿಕೊಂಡಿದ್ದರು ಅಂದೆನಲ್ಲ; ಅದಕ್ಕೆ ಒಂದು ಉದಾಹರಣೆ: ವಿಚಾರ ಸಂಕಿರಣದ ಮೊದಲ ದಿನ ರಾತ್ರಿಯ ಊಟಕ್ಕೆ ಅತ್ಯಂತ ರುಚಿಕಟ್ಟಾದ ಬೇರೆ ಬೇರೆ ಪದಾರ್ಥಗಳನ್ನು ಒಬ್ಬೊಬ್ಬ ಪ್ರಾಧ್ಯಾಪಕರು/ಕಿಯರು ತಮ್ಮ ಮನೆಗಳಲ್ಲಿ ತಯಾರಿಸಿ ತಂದಿದ್ದರು.ನಾನು ಬಾಗಲಕೋಟೆ ತಲುಪಿದಲ್ಲಿಂದ ಹಿಡಿದು ಅಲ್ಲಿಂದ ಹೊರಡುವವರೆಗೆ ಎಡೆಬಿಡದೆ ಯೋಗಕ್ಷೇಮ ನೋಡಿಕೊಂಡ ಪ್ರೊ. ಗಿರೀಶ್ ಕಲಾ ಕಾಲೇಜಿನವರಲ್ಲ; ವಿಜ್ಞಾನ ಕಾಲೇಜಿನ ಗಣಕವಿಜ್ಞಾನ ಪ್ರಾಧ್ಯಾಪಕರು. ಹಾಗೆಯೇ ನನ್ನನ್ನು ಬೈಕಿನಲ್ಲಿ ಸುತ್ತಾಡಿಸಿ ಬಾಗಲಕೋಟೆಪೇಟೆಯನ್ನು ಪರಿಚಯಿಸಿದ ಕಲಾ ಕಾಲೇಜಿನ ಪ್ರೊ. ಎಂ ಎಂ ಹಿರೇಮಠ ಮತ್ತು ಸಿ ಆರ್ ಚೌಕಿಮಠ ಇವರ ಉಪಕಾರವನ್ನೂ ನಾನು ಮರೆಯಲಾಗದು. ಒಟ್ಟಿನಲ್ಲಿ, ಹಿಂತಿರುಗಿ ಬರಬೇಕಾದ ಬಸ್ಸಿನ ಹೊತ್ತಾಗುವಾಗ ಛೆ, ಮತ್ತೆ ಊರಿಗೆ ಹೊರಡಬೇಕಲ್ಲಾ ಎಂಬ ಭಾವ ಮನಸ್ಸಿಗೆ ಬರುವಂತೆ ಮಾಡಿದ ಬಾಗಲಕೋಟೆಗೆ ನಮಃ.

 

 

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಬಾಗಲಕೋಟೆಯೆಂಬ ಮುಳುಗದ ನಗರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*