ಭಾರತೀಯ ಗೋತಳಿಗಳ ಸಂಶೋಧನೆ ನಡೆಯಲಿ: ಜಯರಾಮ ಭಟ್

ಭಾರತೀಯ ಗೋ ತಳಿಗಳ ಬಗ್ಗೆ ಸಂಶೋಧನೆ ಇನ್ನಷ್ಟು ಹೆಚ್ಚಬೇಕು. ಗೋವಿನ ಮಹತ್ವವನ್ನು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಗೋ ಸಂಸತ್ತು ಮಹತ್ವದ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ಬ್ಯಾಂಕಿನ ಆಡಳಿತ ನಿದೇರ್ಶಕ ಹಾಗೂ ಅಧ್ಯಕ್ಷ ಪಿ.ಜಯರಾಮ ಭಟ್ ಅಭಿಪ್ರಾಯಪಟ್ಟರು.

ಮಂಗಲ ಗೋಯಾತ್ರೆ ಮಹಾಮಂಗಲದ ಅಂಗವಾಗಿ ಹಮ್ಮಿಕೊಂಡ ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರಯ ಮಾತನಾಡಿದರು. ಮಣ್ಣಿನ ಮಡಿಕೆಯಲ್ಲಿ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಸೇರಿಸುವ ಮೂಲಕ ಪಂಚಗವ್ಯ ತಯಾರಿಸಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ಸಮರ್ಪಿಸುವ ಮೂಲಕ ಅವರು ವಿಚಾರ ಸಂಕಿರಣಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದರು.

 

ಸಾನ್ನಿಧ್ಯ ವಹಿಸಿದ್ದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಈ ಗೋಸಂಸತ್ತು ದೆಹಲಿಯ ಸಂಸತ್ತಿಗಿಂಗಲೂ ಮಹತ್ವದ್ದು. ಈ ಸಂಸತ್ತಿನ ನಿರ್ಣಯಗಳನ್ನು ದೆಹಲಿಯ ಸಂಸತ್ತು ಪರಿಗಣಿಸಿದರೆ ಇಡೀ ದೇಶಕ್ಕೆ ಒಳಿತಾಗುತ್ತದೆ. ಗೋವಿನ ಮಹತ್ವದ ವೈಜ್ಞಾನಿಕ ಅಂಶಗಳ ಬಗ್ಗೆ ವಿಜ್ಞಾನಿಗಳು ಬೆಳಕು ಚೆಲ್ಲಲಿದ್ದಾರೆ ಎಂದು ಹೇಳಿದರು.

 

ಗೋವಿನ ಒಂದೊಂದು ಉತ್ಪನ್ನದ ಬಗ್ಗೆಯೂ ಸಂಶೋಧನೆ ನಡೆಸಲು ಒಂದೊಂದು ವಿಶ್ವವಿದ್ಯಾನಿಲಯ ಬೇಕು. ದೇಹದ ದೋಷವನ್ನು ಪರಿಹರಿಸುವಂತೆ ದೇಶದ ದೋಷವನ್ನೂ ಪರಿಹರಿಸುವ ಶಕ್ತಿ ಗೋವಿಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಹಿರಿಯ ಗೋವಿಜ್ಞಾನಿ ಕರ್ನಾಲ್‍ನ ಡಾ. ಸದಾನ ಮಾತನಾಡಿ, ದೇಸಿ ಹಾಲಿಗೆ ಪರ್ಯಾಯ ಇಲ್ಲ. ಪಂಚಗವ್ಯ ಅತ್ಯಂತ ಪವಿತ್ರ ಮಾತ್ರವಲ್ಲದೇ ಔಷಧೀಯ ಮತ್ತು ಪೌಷ್ಟಿಕ ಗುಣವನ್ನೂ ಹೊಂದಿದೆ. ಇದು ನರ ಹಾಗೂ ನ್ಯಾನೊ ಕಣದ ಹಂತದಲ್ಲೂ ಪರಿಣಾಮ ಬೀರುವ ಸಾಮಥ್ರ್ಯ ಹೊಂದಿದೆ. ಇದು ಬಹಳಷ್ಟು ವಿಜ್ಞಾನಿಗಳಿಗೇ ಗೊತ್ತಿಲ್ಲ. ನಾಲ್ಕು ವರ್ಷಕ್ಕಿಂತ ಕಡಿಮೆ ಮಕ್ಕಳಿಗಂತೂ ದೇಸಿ ಹಸುವಿನ ಹಾಲು ಬಿಟ್ಟು ಬೇರೇನನ್ನೂ ನೀಡಬೇಕಿಲ್ಲ ಎಂದು ಹೇಳಿದರು.

ಮಂಗಲಗೋಯಾತ್ರೆ ದಿಗ್ದರ್ಶಕ ಡಾ.ವೈವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಗದರ್ಶನ ಮಂಡಳಿ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ವಿಜ್ಞಾನಿಗಳಾಧ ಡಾ.ಕೆ.ಪಿ.ರಮೇಶ್, ಡಾ.ನಾರಾಯಣ ರೆಡ್ಡಿ, ಡಾ.ವಡಿವೇಲ್, ಇಂಗ್ಲೆಂಡಿನಿಂದ ಆಗಮಿಸಿದ್ದ ಡಾ.ಅಲೆಕ್ಸ್ ಹಂಕಿ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ವಿನಯ ಹೆಗ್ಡೆ ಉಪಸ್ಥಿತರಿದ್ದರು.

 

ಗೋತಳಿಗಳಿಗೆ ಹವಾಮಾನ ಬದಲಾವಣೆ ಪರಿಣಾಮ ಎದುರಿಸುವ ಶಕ್ತಿ

ಭಾರತೀಯ ಗೋ ತಳಿಗಳಿಗೆ ಹವಾಮಾನ ಬದಲಾವಣೆ ಪರಿಣಾಮವನ್ನು ಎದುರಿಸುವ ಶಕ್ತಿ ಇದ್ದು, ಇದು ವಿಶ್ವದ ವಿಜ್ಞಾನಿಗಳು, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಕಾರಣವಾಗಿದೆ ಎಂದು ಬೆಂಗಳೂರಿನ ವಿಜ್ಞಾನಿ ಡಾ.ಕೆ.ಪಿ.ರಮೇಶ್ ಅಭಿಪ್ರಾಯಪಟ್ಟರು.

ಮಂಗಲ ಗೋಯಾತ್ರೆ ಮಹಾಮಂಗಲ ಅಂಗವಾಗಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಭಾರತೀಯ ಗೋತಳಿಗಳ ಬಗ್ಗೆ ಪ್ರಬಂಧ ಮಂಡಿಸಿದರು.

 

ಭಾರತದಲ್ಲಿ ಇಂದು 40 ದೇಸಿ ಗೋ ತಳಿಗಳು ಉಳಿದುಕೊಂಡಿವೆ. ಈ ಪೈಕಿ ನಾಲ್ಕು ಅಧಿಕ ಹಾಲು ನೀಡುವ ತಳಿಗಳು. 10 ಅವಳಿ ಉದ್ದೇಶದ ತಳಿಗಳು ಹಾಗೂ ಅಧಿಕ ಶ್ರಮ ವಹಿಸುವ 26 ತಳಿಗಳಿವೆ ಎಂದು ಹೇಳಿದರು. ದೇಶದಲ್ಲಿ ಶೇಕಡ 89ರಷ್ಟು ಹಸುಗಳನ್ನು ಭೂರಹಿತರು ಹಾಗೂ ಸಣ ರೈತರು ಹೊಂದಿದ್ದಾರೆ. ದೇಶದಲ್ಲಿ ಕಳೆದ ದಶಕದಲ್ಲಿ ಶೇಕಡ 91ರಷ್ಟು ಇದ್ದ ದೇಸಿ ಹಸುಗಳ ಸಂಖ್ಯೆ ಇದೀಗ ಶೇಕಡ 78ಕ್ಕೆ ಇಳಿದಿದೆ. ಕರ್ನಾಟಕ ಒಟ್ಟು ಹಸುಗಳ ಸಂಖ್ಯೆಯಲ್ಲಿ ದೇಶದಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದರೆ ಉತ್ಪಾದನೆಯಲ್ಲಿ 11 ಹಾಗೂ ಉತ್ಪಾದಕತೆಯಲ್ಲಿ 14ನೇ ಸ್ಥಾನದಲ್ಲಿದೆ ಎಂದು ಅಂಕಿ ಅಂಶ ವಿವರಿಸಿದರು.

ಎ-1 ಹಾಲು ಮಕ್ಕಳಿಗೆ ನೀಡಲು ಯೋಗ್ಯವಲ್ಲ. ದೇಸಿ ಹಸುವಿನ ಹಾಲಿನ ಪ್ರಮಾಣ ಕಡಿಮೆಯಾದರೂ, ಗುಣಮಟ್ಟ ಅತ್ಯಧಿಕ. ಇದರಲ್ಲಿ ರೋಗನಿರೋಧಕ ಶಕ್ತಿ ಮತ್ತು ಲ್ಯಾಕ್ಟೊಫಿರಿನ್ ಅಂಶಗಳೂ ಅಧಿಕ ಎಂದರು. ಮಲೆನಾಡು ಗಿಡ್ಡ ತಳಿಯ ಹಾಲಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರೊಟೀನ್‍ಗಳು ಇರುವುದು ಪತ್ತೆಯಾಗಿದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ಬಹಿರಂಗಪಡಿಸಿದರು.ಪಂಚಗವ್ಯ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಅಮರ್‍ನಾಥ್ ಅವರು ಅನುಭವ ಹಂಚಿಕೊಂಡರು.

ಮನುಷ್ಯನ ಸಮಸ್ಯೆಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರವಿತ್ತು. ಪೂರ್ವಜರನ್ನು ಅನುಸರಿಸುತ್ತಿದ್ದರು. ಆದರೆ  ರಾಸಾಯಿನಿಕತಂತ್ರಜಾನದಿಂದಾಗಿ ಮನುಶ್ಯ ಪ್ರಕ್ರತಿ ನಾಶದತ್ತ ಮುಖಮಾಡಿತು ಎಂದು ಕೊಯಂಬುತ್ತೂರಿನ ಅಗ್ರಿ ಸಿಸ್ಟಮ್ ಫೌಂಡೇಶನ್ ಅಧ್ಯಕ್ಷ ಡಾ.ಇ. ವಡಿವೇಲು ಹೇಳಿದರು.

ದೇಶಿ ಗೋ ಆಧಾರಿತ ಕೃಷಿ, ಸಾವಯವ ಕೃಷಿಯಲ್ಲಿ ಪಂಚಗವ್ಯದ ಪಾತ್ರ ಹಾಗು ಆಹಾರ ಕೃಷಿ ಪದಾರ್ಥಗಳ ಗುಣಮಟ್ಟ ಹೆಚ್ಚಿಸುವಲ್ಲಿ ಪಂಚಗವ್ಯದ ಪಾತ್ರದ ವಿಚಾರವಾಗಿ ಮಾತನಾಡಿದರು.ಗುರುಪುರ ಚರ್ಚ್ ಫಾದರ್ ಅಂತೋನಿ ಲೋಬೊ ವಿಚಾರಸಂಕಿರಣದ ಮಧ್ಯೆ ಸಭಾಂಗಣಕ್ಕೆ ಆಗಮಿಸಿದ್ದು ,ಶುಭಸಂದೇಶ ನೀಡಿದರು.

ಹಾಲು, ತುಪ್ಪ ಮತ್ತು ಮೊಸರಿನ ಮಹತ್ವ ಹೇಳಿದ ಇಂಗ್ಲೆಂಡ್ ವಿಜ್ಞಾನಿ

ವೇದ ವಿಜ್ಞಾನ ಆಧುನಿಕ ವಿಜ್ಞಾನಕ್ಕಿಂತಲೂ ಶ್ರೇಷ್ಠ. ಭಾರತದ ಸಾಂಪ್ರದಾಯಿಕ ಜ್ಞಾನಪರಂಪರೆಯಲ್ಲಿ ಕೇವಲ ದೈಹಿಕ ಮಾತ್ರವಲ್ಲದೇ ಮಾನಸಿಕ ರೋಗಗಳಿಗೂ ಔಷಧಿ ಇದೆ ಎಂದು ಇಂಗ್ಲೆಂಡಿನ ಖ್ಯಾತ ವಿಜ್ಞಾನಿ ಡಾ.ಅಲೆಕ್ಸ್ ಹಾಂಕಿ ಅಭಿಪ್ರಾಯಪಟ್ಟರು.

ಮಂಗಲಗೋಯಾತ್ರೆ ಮಹಾಮಂಗಲ ಅಂಗವಾಗಿ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಹಾಲು, ತುಪ್ಪ ಮತ್ತು ಮೊಸರಿನ ಮಹತ್ವ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು.

ಸಾಂಪ್ರದಾಯಿಕ ಶೈಲಿಯಲ್ಲಿ ಹಾಲಿನ ಉತ್ಪನ್ನಗಳನ್ನು ತಯಾರಿಸುವುದು ಉತ್ತಮ. ಹೀಗೆ ತಯಾರಿಸಿದ ಉತ್ಪನ್ನಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ನಾಗಪುರ ಗೋವಿಜ್ಞಾನ ಅನುಸಂಧಾನ ಪರಿಷತ್‍ನ ಸಂಯೋಜಕ ಸುನಿಲ್ ಮಾನ್‍ಸಿಂಗ್‍ಕಾ ಮಾತನಾಡಿ, ಕೃಷಿ, ಆರೋಗ್ಯ, ಪರ್ಯಾವರಣದ ರಕ್ಷೆ, ಗ್ರಾಮೋದ್ಯೋಗ ಹೀಗೆ ವಿವಿಧ ಆಯಾಮಗಳಿಂದ ಗೋಮಹತ್ವವನ್ನು ವಿಶ್ಲೇಷಿಸಬೇಕು ಎಂದು ಅಭಿಪ್ರಾಯಪಟ್ಟರು. ಶ್ರೀಕೃಷ್ಣ ನೀರಮೂಲೆ ಹಾಗೂ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

 

ಎ2 ಹಾಲಿನ ಬೇಡಿಕೆ ಹೆಚ್ಚಿಸುವುದು ಅನಿವಾರ್ಯ

ಆರೋಗ್ಯಕರ ಸಮಾಜ ನಿರ್ಮಿಸುದ ದೃಷ್ಟಿಯಿಂದ ದೇಶದ ಮಾರುಕಟ್ಟೆಯಲ್ಲಿ ಎ2 ಹಾಲಿನ ಬೇಡಿಕೆ ಹೆಚ್ಚಿಸುವುದು ಅನಿವಾರ್ಯ ಎಂದು ಐಸಿಎಲ್‍ನ ನಿವೃತ್ತ ವಿಜ್ಞಾನಿ ಡಿ.ಕೆ.ಸದಾನ ಹೇಳಿದರು. ಮಾರುಕಟ್ಟೆಯಲ್ಲಿ ಎ2 ಹಾಲಿನ ಬೇಡಿಕೆ ಹೆಚ್ಚಿದಷ್ಟೂ ಅದು ಆರೋಗ್ಯಕ್ಕೆ ಪೂರಕವಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ಎ2 ಹಾಲನ್ನಷ್ಟೇ ನೀಡಬೇಕು. ಈ ಬಗ್ಗೆ ತಂದೆ ತಾಯಂದಿರಲ್ಲಿ ಹಾಗೂ ಸಮಾಜದಲ್ಲಿ ಅರಿವು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ.ಎಂದು ಹೇಳಿದರು. ಪಂಚಗವ್ಯ ಮತ್ತು ಆಯರ್ವೇದ ಎಂಬ ವಿಷಯದ ಬಗ್ಗೆ ಹೈದ್ರಾಬಾದ್‍ನ ವೈದ್ಯ ಡಾ.ಜಯಕೃಷ್ಣ ಮಾತನಾಡಿದರು,

ವಿಚಾರವಿನಿಮಯ

ಡಾ.ನಾರಾಯಣ ರೆಡ್ಡಿ, ಡಾ.ವಡಿವೇಲ್, ಜಯರಾಮ ಭಟ್, ರಘುನಾಥ ರೆಡ್ಡಿ, ಜೆ.ಸಿ.ಸ್ವಾಮಿ ಅವರಿಂದ ಸಾವಯವ ಕೃಷಿ ಕುರಿತು ವಿಚಾರ ವಿನಿಮಯ ನಡೆಯಿತು. ಶಿವಸುಬ್ರಹ್ಮಣ್ಯ ಪೆಲತ್ತಡ್ಕ ಸಂವಾದ ನಡೆಸಿಕೊಟ್ಟರು.

 

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಭಾರತೀಯ ಗೋತಳಿಗಳ ಸಂಶೋಧನೆ ನಡೆಯಲಿ: ಜಯರಾಮ ಭಟ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*