ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ 68ನೇ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಆಳ್ವಾಸ್‍ನ ವಿದ್ಯಾರ್ಥಿಗಳು ಸೇರಿದಂತೆ 30,000 ಜನ ಸಾಕ್ಷಿಯಾದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತ ಸೇನೆಯ ಬ್ರಿಗೇಡಿಯರ್ ಐ.ಎನ್.ರೈ ಪಾಲ್ಗೊಂಡಿದ್ದರು. ಇಂತಹ ಬೃಹತ್ ವಿದ್ಯಾರ್ಥಿ ಸಮೂಹದೊಂದಿಗೆ ಒಂದು ಶಿಕ್ಷಣ ಸಂಸ್ಥೆ ಗಣರಾಜ್ಯೋತ್ಸವವನ್ನು ಇಷ್ಟು ಅದ್ಭುತವಾಗಿ ಆಚರಿಸುವುದು ಅಪರೂಪ ಎಂದ ಅವರು ನೆರೆದಿದ್ದ ವಿದ್ಯಾರ್ಥಿಗಳಿಗೆ ಸದೃಢ ದೇಶ ಕಟ್ಟಬೇಕಾದ ಅವಶ್ಯಕತೆಯ ಬಗ್ಗೆ ತಿಳಿಸಿದರು.
`ನಮ್ಮ ದೇಶ ಬಡರಾಷ್ಟ್ರ ಎನಿಸಿಕೊಳ್ಳುತ್ತಿದೆಯೆಂದರೆ ಅದಕ್ಕೆ ಕಾರಣ ಸಂಪತ್ತಿನ ಕೊರತೆಯಲ್ಲ; ಬದಲಿಗೆ ನಮ್ಮಲ್ಲಿ ಕಡಿಮೆಯಾಗುತ್ತಿರುವ ಧನಾತ್ಮಕ ಚಿಂತನೆಗಳು, ಕುಗ್ಗುತ್ತಿರುವ ಸ್ವಾಭಿಮಾನ. ಇಂದಿನ ಯುವಶಕ್ತಿಯೇ ನಮ್ಮ ದೇಶದ ಶಕ್ತಿ, ಆಸ್ತಿ. ಭಾರತದ ಉಜ್ವಲ ಭವಿಷ್ಯ ಇಂದಿನ ಯುವಶಕ್ತಿಯ ಕೈಯಲ್ಲಿದೆ. ನಿಮ್ಮಲ್ಲಿರುವ ಸ್ವಾಭಿಮಾನ, ಆತ್ಮಗೌರವವನ್ನು ಬಡಿದೆಬ್ಬಿಸಿ. ಇದರಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ’ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, 70 ವರ್ಷಗಳ ಹಿಂದೆ ಬಡತನ, ಅನಕ್ಷರತೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಿ ನಮ್ಮ ದೇಶ ಹೈರಾಣಾಗುತ್ತಿದ್ದ ಸನ್ನಿವೇಶವಿತ್ತು. ಆದರೆ ಇಂದು ಭಾರತ ಎಲ್ಲವನ್ನೂ ಮೆಟ್ಟಿ ನಿಲ್ಲುವ ತಾಕತ್ತು ಹೊಂದುತ್ತಿದೆ. ಜಾಗತಿಕ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುತ್ತಿದೆ. ಇದು ಇಂದಿನ ಯುವಶಕ್ತಿಗೆ ಧನಾತ್ಮಕ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ ಎಂದರು.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ, ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Be the first to comment on "ಸ್ವಾಭಿಮಾನ, ಆತ್ಮಗೌರವ ಬಡಿದೆಬ್ಬಿಸಿ: ಬ್ರಿಗೇಡಿಯರ್ ಐ.ಎನ್.ರೈ"