ಸಜೀಪ ನಾಸಿರ್ ಕೊಲೆ ಮತ್ತು ಸಜಿಪ ಮುಸ್ತಫಾ ಕೊಲೆ ಯತ್ನ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಎತ್ತಿಹಿಡಿದಿದೆ.
ತಾಲೂಕಿನ ಸಜಿಪ ಗ್ರಾಮದ ಮಲಾಯಿಬೆಟ್ಟು ನಿವಾಸಿ ಮುಹಮ್ಮದ್ ನಾಸೀರ್ ಎಂಬವರನ್ನು 2015 ಸೆಪ್ಟಂಬರ್ 7 ರಂದು ರಾತ್ರಿ ನಾಲ್ವರು ಮಾರಕಾಸ್ತ್ರಗಳಿಂದ ಕಡಿದು ಕೊಲೆ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಗಾರೆ ಕೆಲಸ ಮಾಡುತ್ತಿದ್ದ ನಾಸೀರ್ ಅದೇ ಊರಿನ ಮುಹಮ್ಮದ್ ಮುಸ್ತಫಾ ಎಂಬವರ ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದಾಗ ಮೆಲ್ಕಾರ್ ಸಮೀಪದ ಪಣೋಲಿಬೈಲ್ ಬಳಿ ಈ ಘಟನೆ ನಡೆದಿತ್ತು. ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ವಿಜೇತ್ ಕುಮಾರ್, ಕಿರಣ್ ಪೂಜಾರಿ, ಅನೀಶ್ ಯಾನೆ ಧನು ಪೂಜಾರಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದರು. ಇನ್ನೋರ್ವ ಆರೋಪಿ ಮಂಚಿ ಗ್ರಾಮದ ಅಭಿ ಯಾನೆ ಅಭಿಜಿತ್ ತಲೆಮರೆಸಿಕೊಂಡಿದ್ದ.
ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ತಿಂಗಳ ಒಳಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ನಾಸೀರ್ ಕುಟುಂಬ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿಗಳ ಜಾಮೀನು ರದ್ದು ಪಡಿಸಿ ಜ. 16ರ ಒಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ನೀಡಿತ್ತು.
ಹೈಕೋರ್ಟ್ ಆದೇಶವನ್ನು ರದ್ದು ಪಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದು ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದೆ.
Be the first to comment on "ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಮೇಲ್ಮನವಿ ಅರ್ಜಿ ವಜಾ"