- ಹೊರಬಂತು ವರ್ಷದ ಹಿಂದೆ ಹೂತಿಟ್ಟ ಶವ
- ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿನ ಕಲ್ಲು ಕೋರೆಯಲ್ಲಿ ಸಿಕ್ಕಿದೆ ಅಸ್ಥಿಪಂಜರ
- ಪೊಲೀಸರ ಪ್ರಕಾರ ಇದು 60 ವರ್ಷದೊಳಗಿನ ಪುರುಷನ ಸ್ಕೆಲಿಟನ್
- ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಂದ ಪರಿಶೀಲನೆ
- ಊಹಾಪೋಹಗಳು ಇನ್ನೂ ಜೀವಂತ, ಶವವನ್ನು ಹೂತಿಟ್ಟದ್ದು ಯಾರು, ಶವ ಯಾರದ್ದು ಎಂಬ ಪ್ರಶ್ನೆ
- ಕೊಲೆ ಮಾಡಿ ಹುಗಿದು ಹಾಕಿರುವ ಶಂಕೆ
- ನಾಪತ್ತೆಯಾದವರ ಶೋಧ ಕಾರ್ಯ ಆರಂಭ
- www.bantwalnews.com report
ಭಾನುವಾರ ಸಂಜೆ ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿನ ಕೆಂಪು ಕೋರೆಯಲ್ಲಿ ಹುಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವವನ್ನು ಹೊರಗೆಳೆಯಲಾಗಿದೆ.
ಇದು ಪುರುಷನ ಮೃತದೇಹವಾಗಿದ್ದು, ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿದೆ. ಕಳೆದ 9 ರಿಂದ 12 ತಿಂಗಳ ಅವಧಿಯಲ್ಲಿ ಇದನ್ನು ಹೂತಿರಬಹುದು. ಸುಮಾರು 55ರಿಂದ 60 ವರ್ಷದ ಪುರುಷನ ಶವ ಇದು ಎಂದು ಅಂದಾಜಿಸಲಾಗಿದೆ. ದೇಹದ ನಾನಾಭಾಗಗಳ ಕುರುಹುಗಳನ್ನು ವಿಧಿವಿಜ್ಞಾನ ಇಲಾಖೆಯ ವೈದ್ಯರುಗಳು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಅದರ ಆಧಾರದಲ್ಲಿ ಮುಂದಿನ ತನಿಖೆ ನಡೆಸುವುದಾಗಿ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ www.bantwalnews.com ಗೆ ತಿಳಿಸಿದ್ದಾರೆ.
ಆದರೂ ಊಹಾಪೋಹಗಳು ಕಡಿಮೆಯಾಗಿಲ್ಲ. ಇದು ಮಹಿಳೆಯ ಶವವಾಗಿದ್ದು ಆಕೆಯನ್ನು ಅತ್ಯಾಚಾರಗೈದು ಕೊಲೆ ಮಾಡಿ ಹೂತಿಟ್ಟಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸುವವರೂ ಇದ್ದಾರೆ. ಆದರೆ ಸೋಮವಾರ ಮಹಜರು ಮಾಡಿದ ವಿಧಿವಿಜ್ಞಾನ ಪ್ರಯೋಗಾಲಯದವರು ಇದು ಪುರುಷನ ಶವ ಎಂದು ಅಂದಾಜಿಸಿದ್ದಾರೆ .
12 ಗಂಟೆ ಹೆಣ ಕಾದರು
ಮಂಗಳೂರು ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಉಪಸ್ಥಿತಿಯಲ್ಲಿ ಸೋಮವಾರ ಶವಮಹಜರು ನಡೆಸುವುದೆಂದು ನಿರ್ಧರಿಸಲಾಯಿತು. ಆದರೆ ಬೇರೊಂದು ಕಾರ್ಯಕ್ರಮದಲ್ಲಿದ್ದ ಎ.ಸಿ. ಬರುವುದು ತಡವಾದ ಕಾರಣ ಮಧ್ಯಾಹ್ನದ ಬಳಿಕ ಮಹಜರು ನಡೆಯಿತು. ಅಷ್ಟು ಹೊತ್ತು ಅಂದರೆ ಸುಮಾರು 12 ಗಂಟೆ ಕಾಲ ಪೊಲೀಸರು ಶವವನ್ನು ಕಾಯುತ್ತಿರಬೇಕಾಯಿತು .
ಕೊಳ್ನಾಡು ಮತ್ತು ಇರಾ ಗ್ರಾಮದ ಗಡಿ ಪ್ರದೇಶವಾದ ಕಡಂತಬೆಟ್ಟುವಿನ ಕೆಂಪು ಕಲ್ಲಿನ ಕೋರೆಯಲ್ಲಿ ಹೂತ ಸ್ಥಿತಿಯಲ್ಲಿದ್ದ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿತ್ತು.
ಸ್ಥಳೀಯರು ನೀಡಿದ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಎಸ್ಸೈ ಎ.ಕೆ.ರಕ್ಷಿತ್ ಗೌಡ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಬಳಿಕ ಸೋಮವಾರ ಮಂಗಳೂರಿನ ವಿಧಿವಿಜ್ಞಾನ ಇಲಾಖೆಯ ಡಾ.ಮಹಾಬಲ ಶೆಟ್ಟಿ ತಂಡ, ಬೆರಳಚ್ಚು ತಜ್ಞರ ತಂಡದ ಗೌರೀಶ್ ಮತ್ತವರ ತಂಡ ಸ್ಥಳ ತನಿಖೆ ನಡೆಸಿದೆ.
ಮೃತದೇಹ ಹೂತ ಸ್ಥಿತಿಯಲ್ಲಿ ಪತ್ತೆಯಾದ ವಿಚಾರ ತಿಳೀಯುತ್ತಿದ್ದಂತೆಯೇ ಭಾನುವಾರ ಸಂಜೆಯಿಂದಲೇ ಸ್ಥಳದಲ್ಲಿ ಭಾರೀ ಸಂಖ್ಯೆಯ ಜನಸ್ತೋಮ ನೆರೆದಿತ್ತು. ಸೋಮವಾರವೂ ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳ ಭೇಟಿ ವೇಳೆಯೂ ನೂರಾರು ಗ್ರಾಮಸ್ಥರು ನೆರೆದಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್, ಅಮಾನುಲ್ಲಾ, ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ , ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ದೊರಕಿತು ಅಸ್ಥಿಪಂಜರ, ಪ್ರಶ್ನೆಗಳು ಜೀವಂತ"