bantwalnews.com report
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮೂಡುಬಿದಿರೆ ಘಟಕವನ್ನು ಮೂಡುಬಿದಿರೆ ಸಮಾಜಮಂದಿರ ಬಯಲು ರಂಗವೇದಿಕೆಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು.
ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರ ಪಾಲಿಗೆ ಕಲ್ಪವೃಕ್ಷ. ಶ್ರೀಮಂತ ಮನಸ್ಸಿನ ಯೋಜನೆ, ಯಕ್ಷಗಾನ ಕಲೆಗೆ ಹೊಸ ಹುರುಪು ನೀಡುತ್ತದೆ ಎಂದು ಶುಭ ಹಾರೈಸಿದರು.
ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಪ್ರಾಮಾಣಿಕವಾಗಿ ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡರೆ ಕಲಾವಿದರು ಬದುಕು ಕಟ್ಟುಕೊಳ್ಳಲು ಸಾಧ್ಯ. ಮೂರು ವರ್ಷದಲ್ಲಿ ನೂರು ಕಲಾವಿದರಿಗೆ ಸೂರು ಕಲ್ಪಿಸುವ ಮಹತ್ವದ ಯೋಜನೆ ಟ್ರಸ್ಟ್ ಗೆ ಇದೆ. 15 ವರ್ಷ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿ 60 ವರ್ಷ ಪೂರೈಸಿದ ಕಲಾವಿದರಿಗೆ, ಶಾಶ್ವತ ಅಂಗವಿಕಲತೆಗೆ ಒಳಗಾದ ಅಶಕ್ತ ಕಲಾವಿದರಿಗೆ ರೂ 1 ಸಾವಿರ ಮಾಸಾಶನ ನೀಡುವ ಯೋಜನೆಯನ್ನೂ ರೂಪಿಸುತ್ತಿದ್ದೇವೆ ಎಂದರು.
ಪಟ್ಲ ಸತೀಶ್ ಶೆಟ್ಟಿಯವರನ್ನು ಮೂಡುಬಿದಿರೆ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಡಾ.ಎಂ ಮೋಹನ ಆಳ್ವ ಹಾಗೂ ಉದ್ಯಮಿ ಉದಯ ಶೆಟ್ಟಿ 1 ಲಕ್ಷ ರೂ. ದೇಣಿಗೆ ನೀಡಿದರು.ಮಾಜಿ ಸಚಿವ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮೂಡುಬಿದಿರೆ ಘಟಕದ ಅಧ್ಯಕ್ಷ ಕೆ.ಶ್ರೀಪತಿ ಭಟ್, ಕೇಂದ್ರೀಯ ಘಟಕದ ಉಪಾಧ್ಯಕ್ಷ ಡಾ.ಮನು, ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್, ತುಳು ಚಿತ್ರ ನಿರ್ಮಾಪಕ ಉದಯ ಶೆಟ್ಟಿ ಉಪಸ್ಥಿತರಿದ್ದರು.
ಮೂಡುಬಿದಿರೆ ಘಟಕದ ಸಂಚಾಲಕ ಶಾಂತರಾಮ ಕುಡ್ವ ಸ್ವಾಗತಿಸಿದರು. ಕಾರ್ಯದರ್ಶಿ ದೇವಾನಂದ ಭಟ್ ಪ್ರಾಸ್ತಾವಿಕ ಮಾತನಾಡಿದರು. ಧನಂಜಯ ಮೂಡುಬಿದಿರೆ ನಿರೂಪಿಸಿದರು. ಸದಾಶಿವ ರಾವ್ ವಂದಿಸಿದರು.
Be the first to comment on "ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಮೂಡುಬಿದಿರೆ ಘಟಕ ಉದ್ಘಾಟನೆ"