ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಪ್ರಯುಕ್ತ ವಿದ್ಯಾರ್ಥಿಗಳ ಭೇಟಿ
www.bantwalnews.com report
ಕೇಂದ್ರ ಸರಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ಎಪ್ಪತ್ತು ಮಕ್ಕಳು ಶುಕ್ರವಾರ ಮಂಗಳೂರು ಹೊರವಲಯದ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣದ ವಿವರವಾದ ಮಾಹಿತಿ ಪಡೆದುಕೊಂಡರು.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜಿನ ಬೋಧಕ ವರ್ಗದ ತಂಡ ಇಡೀ ಕಾಲೇಜಿನಲ್ಲಿ ನಡೆಯುವ ತಾಂತ್ರಿಕ ಶಿಕ್ಷಣದ ವಿವಿಧ ವಿಭಾಗ, ಅವುಗಳ ಮಹತ್ವ ಹಾಗೂ ಶಿಕ್ಷಣಕ್ಕೆ ಪೂರಕವಾದ ಭೂಮಿಕೆ ಸಿದ್ಧಪಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ಹೇಳಿಕೊಟ್ಟಿತು. ಬಳಿಕ ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಮಕ್ಕಳ ಶೈಕ್ಷಣಿಕ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಮಾಹಿತಿ ಪಡೆಯಲು ಈ ಮಾರ್ಗದರ್ಶನ ರೂಪಿಸಲಾಗಿದ್ದು, ಗರಿಷ್ಠ ಪ್ರಯೋಜನ ಪಡೆಯಿರಿ ಎಂದು ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಲೋಕೇಶ್ ಸಿ. ಈ ಸಂದರ್ಭ ಹೇಳಿದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಂ.ಭೂಷಿ, ಅಕಾಡೆಮಿಕ್ ಡೀನ್ ಪ್ರೊ. ಬಿ.ಎಸ್. ಬಾಲಕೃಷ್ಣ, ಆಡಳಿತಾಧಿಕಾರಿ ಮಂಜುನಾಥ್, ಉಪಪ್ರಾಂಶುಪಾಲ ಪ್ರೊ.ಬಾಲಕೃಷ್ಣ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಪ್ರಕಾಶ್, ತಾಂತ್ರಿಕ ಸಹಾಯಕ ಪ್ರಸನ್ನ, ಕಚೇರಿ ಸಹಾಯಕ ಪ್ರಕಾಶ್, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡುಬಿದರೆ ವಲಯಗಳ ಹತ್ತನೇ ತರಗತಿ ವಿದ್ಯಾರ್ಥಿಗಳು, ಅಧ್ಯಾಪಕರು ಈ ಸಂದರ್ಭ ಉಪಸ್ಥಿತರಿದ್ದರು.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಜಾನ್ಸನ್ ವಿದ್ಯಾರ್ಥಿಗಳಿಗೆ ಉದಾಹರಣೆಗಳೊಂದಿಗೆ ಯಶಸ್ವಿ ಕಲಿಕೆ ಹಾಗೂ ತಾಂತ್ರಿಕ ಶಿಕ್ಷಣದ ಒಳನೋಟಗಳ ಬಗ್ಗೆ ಮಾಹಿತಿ ಒದಗಿಸಿದರು.
ಮಕ್ಕಳು ತಮ್ಮ ಶೈಕ್ಷಣಿಕ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಮಾಹಿತಿ ಪಡೆದು ಮಾರ್ಗದರ್ಶನ ನೀಡುವುದು, ಮಕ್ಕಳಲ್ಲಿ ಸಹಕಾರ, ಹೊಂದಾಣಿಕೆ, ನಾಯಕತ್ವ ಮನೋಭಾವ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗುವಂತೆ ಮಾಡುವುದು, ತರಗತಿ ಕಲಿಕೆಗೆ ಪೂರಕವಾಗುವಂತೆ, ಇದರಿಂದ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಾಗೂ ಸ್ವಾವಲಂಬಿ ಬದುಕು ಸಾಗಿಸಲು ವಾತಾವರಣ ಕಲ್ಪಿಸುವುದು, ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ಹಾಗೂ ಹೊರಪ್ರಪಂಚದ ಅರಿವು ಈ ಅಭಿಯಾನದ ಉದ್ದೇಶ.
Be the first to comment on "ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಪಾಠ ಕಲಿತ ಹತ್ತನೇ ತರಗತಿ ಮಕ್ಕಳು"