ಮಾದಕ ದ್ರವ್ಯ ಪಿಡುಗಿಗೆ ಇಡೀ ಜಿಲ್ಲೆ ತತ್ತರಿಸುತ್ತಿದ್ದರೆ ಅದನ್ನು ಮಟ್ಟ ಹಾಕುವ ಕಾರ್ಯವನ್ನು ಜಿಲ್ಲಾ ಎಸ್ಪಿ ಭೂಷಣ್ ಬೊರಸೆ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ನೇತೃತ್ವದಲ್ಲಿ ಸಿಪಿಐ ಮಂಜಯ್ಯ ಹಾಗೂ ವಿಟ್ಲ ಪೊಲೀಸ್ ಎಸ್ ಐ ನಾಗರಾಜು ಮತ್ತು ತಂಡ ಶುಕ್ರವಾರ ಮಾಡಿ ತೋರಿಸಿದೆ.
13 ಕೆ.ಜಿ. ಗಾಂಜಾವನ್ನು ಹೊಂದಿದ್ದ ಇಬ್ಬರನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ವಿಟ್ಲ ಸಮೀಪ ಕಾಂತಡ್ಕದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯ ಇತರ ಗಾಂಜಾ ವ್ಯಾಪಾರಿಗಳಿಗೆ ನಡುಕ ಹುಟ್ಟಿಸಿದರೆ, ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಕನ್ಯಾನ ಗ್ರಾಮದ ಪೊಯ್ಯಗದ್ದೆ ಶಿರಂಕಲ್ಲು ನಿವಾಸಿ ಶಾಫಿ ಯಾನೆ ಖಲಂದರ್ ಶಾಫಿ (22), ಉತ್ತರ ಪ್ರದೇಶ ಬಸೊಳ್ಳಿ ಸೆದೆಪುರ ಗ್ರಾಮದ ಕಲ್ಲುರು ನಿವಾಸಿ ಅರ್ಮಾನ್ ಸಿಂಗರ್ (25) ಬಂಧಿತ ಆರೋಪಿಗಳು.
ಇವರಲ್ಲಿ ಖಲಂದರ ಶಾಫಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದ ಆರೋಪಿಯಾದರೆ, ಅರ್ಮಾನ್ ಕನ್ಯಾನದಲ್ಲೇ ಕ್ಷೌರದಂಗಡಿಯಲ್ಲಿ ಕೆಲಸಕ್ಕಿದ್ದ.
ಈ ಇಬ್ಬರು ಯುವಕರು ಸುಮಾರು 13 ಕೆ.ಜಿಯಷ್ಟು ಗಾಂಜಾ ಪೊಟ್ಟಣಗಳನ್ನು ಹೊಂದಿರುವುದನ್ನು ಪತ್ತೆಹಚ್ಚಲಾಗಿದೆ. ಡಿವೈಎಸ್ಪಿ ರವೀಶ್ ಮಾರ್ಗದರ್ಶನದಂತೆ ಸಿಪಿಐ ಮಂಜಯ್ಯ, ವಿಟ್ಲ ಪಿಎಸ್ ಐ ನಾಗರಾಜು ಸಹಿತ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದಾಗ ಸ್ಕೂಟರಿನಲ್ಲಿ ಸುಮಾರು ಒಂದೂವರೆ ಲಕ್ಷ ಮೌಲ್ಯದ ಗಾಂಜಾ ಸಾಗಿಸುತ್ತಿದ್ದುದು ಕಂಡುಬಂತು.
ಠಾಣೆಯಲ್ಲಿ ವಿಚಾರಣೆ ನಡೆಸಿದ ಸಂದರ್ಭ ವಿವಿಧೆಡೆ ಶಾಫಿ ಗಾಂಜಾ ವಿತರಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ. ಶಾಫಿ ಜತೆಗೆ ಹಲವು ಮಂದಿ ಸಂಪರ್ಕದಲ್ಲಿದ್ದು, ಈತನಿಗೆ ವಿತರಣೆ ಮಾಡಲು ಗಾಂಜ ವಿತರಿಸುತ್ತದ್ದರೆಂಬ ಮಾಹಿತಿಯನ್ನು ಪೊಲೀಸರ ಬಳಿ ತಿಳಿಸಿದ್ದಾನೆ. ಈ ಮಾಹಿತಿ ಹಿನ್ನಲೆಯಲ್ಲಿ ಕನ್ಯಾನದ ಕ್ಷೌರದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್ ನನ್ನು ವಶಕ್ಕೆ ಪಡೆಯಲಾಗಿದೆ.
ಕನ್ಯಾನ ಪೇಟೆಯಲ್ಲಿ 2014 ಜೂ.15 ರ ರಾತ್ರಿ ಪಿಲಿಂಗುಳಿ ಸತೀಶ ಶೆಟ್ಟಿ ಕನ್ಯಾನ ಪೇಟೆಯಲ್ಲಿ ವ್ಯಾಪಾರಿಯೋರ್ವರಲ್ಲಿ ಮಾತನಾಡುತ್ತಿದ್ದಾಗ ತಲವಾರು ಬೀಸಿದ ಘಟನೆಯಲ್ಲಿ ಶಾಫಿ ಪ್ರಮುಖ ಆರೋಪಿಯಾಗಿದ್ದು, ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ.
ಡಿ ವೈ ಎಸ್ ಪಿ ರವೀಶ್, ಸಿ ಆರ್, ಸಿ ಪಿ ಐ ಮಂಜಯ್ಯ, ವಿಟ್ಲ ಪಿ ಎಸ್ ಐ ನಾಗರಾಜು, ಎಎಸ್ಐ ರುಕ್ಮಯ್ಯ, ಎಚ್ ಸಿ ಬಾಲಕೈಷ್ಣ, ಹರಿಶ್ಚಂದ್ರ, ರಾಮಚಂದ್ರ, ಸೀತರಾಮ ಗೌಡ, ಪಿಸಿ ಗಳಾದ ಪ್ರವೀಣ್ ರೈ, ಭವಿತ್ ರೈ, ಸತ್ಯ ಪ್ರಕಾಶ್ ರೈ, ಉದಯ್, ವಿಜಯೇಶ್ವರ್ ಮುಂತಾದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೊಲೀಸರ ಕಾರ್ಯಾಚರಣೆಯನ್ನು ಎಸ್ಪಿ ಶ್ಲಾಘಿಸಿದ್ದು, ಬಹುಮಾನವನ್ನು ಘೋಷಿಸಿದ್ದಾರೆ.
Be the first to comment on "ಗಾಂಜಾ ಡೀಲ್: ಪ್ರಮುಖ ಆರೋಪಿ ಸಹಿತ ಇಬ್ಬರು ಪೊಲೀಸ್ ಬಲೆಗೆ"