ಬೇಡಿಕೆಗಳಿಗೆ ಮನ್ನಣೆ ದೊರೆಯದೇ ಇದ್ದಲ್ಲಿ ಜ.26ರ ಬಳಿಕ ಉಗ್ರಸ್ವರೂಪದ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಂಟ್ವಾಳ ಸಮೀಪ ದಡ್ಡಲಕಾಡು ಎಂಬಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ತಂಡ ರಚಿಸಿ, ಎತ್ತಿನ ಹೊಳೆ ಯೋಜನೆ ಕುರಿತ ಸಾಧಕಬಾಧಕಗಳನ್ನು ಅಧ್ಯಯನ ಮಾಡಲಿ, ದ.ಕ.ಜಿಲ್ಲೆಗೆ ಸಮಸ್ಯೆಯಾಗದು ಎಂದಿದ್ದರೆ ಜಾರಿಗೊಳಿಸಲಿ ಅಷ್ಟರವರೆಗೆ ಕಾಮಗಾರಿ ನಿಲ್ಲಿಸಲಿ ಎಂಬುದು ನಮ್ಮ ಒತ್ತಾಯ ಎಂದರು.
ಕಣ್ಣೊರೆಸುವ ನಾಟಕ:
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಎತ್ತಿನಹೊಳೆಯ ಸಭೆ ಹೋರಾಟಗಾರರ ಕಣ್ಣೊರೆಸುವ ನಾಟಕ ವಾಗಿದ್ದು, ಈ ಸಭೆಯಲ್ಲಿ ದ.ಕ.ಜಿಲ್ಲೆಯ ಕಾಂಗ್ರೇಸ್ ನ ಒಳಜಗಳದ ವೇದಿಕೆಯಾಗಿತ್ತು. , ಹೋರಾಟಗಾರರು ಹಾಗೂ ನಾವು ಸಭೆಯಲ್ಲಿ ಮಂಡಿಸಿದ ಮನವಿಗೆ ಯಾವುದೇ ಸ್ಪಂದನ ನೀಡದೇ, ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ದರ್ಪದ ಹಾಗೂ ಅಹಂಕಾರದ ವರ್ತನೆ ತೋರಿದ್ದಾರೆ ಎಂದರು.
ಸಭೆಯಲ್ಲಿ ಕೇವಲ ಮಾಹಿತಿ ನೀಡುವ ಕಾರ್ಯವಾಗಿತ್ತೇ ವಿನಃ, ಹೋರಾಟಗಾರರ ಪ್ರಶ್ನೆಗಳಿಗೆ ಅವರಲ್ಲಿ ಯಾವುದೇ ಉತ್ತರವಿರಲಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಹೋರಾಟಗಾರರನ್ನು ಗೋಡ್ಸೆವಾದಿಗಳೆಂದು ಕರೆಯುವ ಮೂಲಕ ಲಾಡೆನ್ ಗಿಂತಲೂ ಕ್ರೂರವಾಗಿದ್ದ ವರ್ತನೆ ತೋರಿದ್ದರು, ಹಾಗಿದ್ದರೆ ಅವರು ಲಾಡೆನ್ ವಾದಿಗಳಾ ಎಂದವರು ಪ್ರಶ್ನಿಸಿದರು. ಸಭೆ ನಮ್ಮ ನಿರೀಕ್ಷೆಯಂತೆ ನಡೆಯದ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಬಿ.ಸಿ.ರೋಡು-ಕಟ್ಟಡ ತೆರವಿಗೆ ಕ್ರಮ:
ಬಿ.ಸಿ.ರೋಡು ಮೇಲ್ಸೇತುವೆಯ ಸರ್ವೀಸ್ ರಸ್ತೆಯಲ್ಲಿ ಭೂಸ್ವಾಧೀನಗೊಂರುವ ಕಟ್ಟಡಗಳ ತೆರವಿಗೆ ಡಿ.26 ರ ದಿನ ನಿಗದಿಪಡಿಸಿದ್ದರೂ, ಇನ್ನೂಕಾರ್ಯಗತಗೊಂಡಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂತಿಮ ಹಂತದ ಗುರುತುಕಾರ್ಯ ನಡೆಸಿದ್ದು, ಸಂಪೂರ್ಣ ವಿವರವನ್ನು ಜಿಲ್ಲಾಧಿಕಾರಿಯವರಿಗೆ ನೀಡಿದ್ದಾರೆ, ಮುಂದಿನ ಎರಡು ಮೂರು ದಿನಗಳ ಒಳಗಾಗಿ ತೆರವು ಕಾರ್ಯಾಚರಣೆ ನಡೆಯಲಿದೆ , ಅಲ್ಲದೆ ಸರ್ವೀಸ್ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲು ಅನುದಾನ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಸರಕಾರದಿಂದಲೇ ಅತಿವೃಷ್ಟಿ, ಅನಾವೃಷ್ಟಿ ಸೃಷ್ಟಿ
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ನಾಮಕಾವಾಸ್ತೆ ಸಭೆ ನಡೆದಿದೆ. ಸರಕಾರದ ಈ ಸಭೆ ವಿಫಲವಾದ ಕಾರಣ, ಸರಕಾರದಿಂದಲೇ ಅತಿವೃಷ್ಟಿ ಮತ್ತು ಅನಾವೃಷ್ಟಿ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ. ಈ ಕುರಿತು ಸಂಸದ ನಳಿನ್ ಹಾಗೂ ಹೋರಾಟಗಾರರ ನೇತೃತ್ವದಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಹೇಳಿದರು.
ಮುಖಂಡರಾದ ಜಿ.ಆನಂದ , ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪ್ರಕಾಶ ಅಂಚನ್, ಅಬ್ದುಲ್ ರಝಾಕ್ ಮೊದಲಾದವರಿದ್ದರು.
Be the first to comment on "ಜ.26ರ ಬಳಿಕ ಉಗ್ರ ಹೋರಾಟ: ನಳಿನ್"