ಪುಣಚ ಸಮೀಪದ ಮಲೆತ್ತಡ್ಕದಲ್ಲಿ ಸೋಮವಾರ ಕೇಪು ಗ್ರಾಮದ ಅಡ್ಯನಡ್ಕ ಅಮೈ ನಿವಾಸಿ ಪ್ರಗತಿಪರ ಕೃಷಿಕ ಸಂಜೀವ ನಾಯಕ್ (58) ಬೈಕ್ ರಸ್ತೆ ಬದಿ ದಿಬ್ಬಕ್ಕೆ ತಾಗಿ ನಿಯಂತ್ರಣ ತಪ್ಪಿ ಅದರಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ತೋರಣಕಟ್ಟೆ ಮೂಲಕ ಪುಣಚ ಗ್ರಾಮದ ಆಜೇರು ಶ್ರೀ ಮಹಿಷಮರ್ದಿನಿ ಭಜನಾ ಮಂದಿರಕ್ಕೆ ಭಾನುವಾರ ರಾತ್ರಿ ಯಕ್ಷಗಾನ ಕಲಾವಿದರಾಗಿ ಭಾಗವಹಿಸಲು ಬೈಕ್‌ನಲ್ಲಿ ತೆರಳಿದ್ದಾಗ, ಮಲೆತ್ತಡ್ಕ ಎಂಬಲ್ಲಿ ಎಸ್ ರೀತಿಯಲ್ಲಿ ರಸ್ತೆ ತಿರುವಿದ್ದು, ನಿಯಂತ್ರಣ ಕಳೆದುಕೊಂದು ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿಹೊಡೆದು ಬೈಕ್ ಅವರ ಮೇಲೆ ಬಿದ್ದಿದೆ. ಜನ ಸಂಚಾರ ವಿರಳವಾಗಿರುವ ಈ ರಸ್ತೆಯಲ್ಲಿ ಸೋಮವಾರ ಬೆಳಗ್ಗಿನಜಾವ ಪಾದಾಚಾರಿಯೊಬ್ಬರು ಬೈಕ್ ಗಮನಿಸಿ ಠಾಣೆಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಕೇಪು ವಲಯ ಕಾಂಗ್ರೆಸ್ ಸಮಿತಿಯ ಅಮೈ ಬೂತ್ ಅಧ್ಯಕ್ಷರಾಗಿ, ತೆಂಗುಬೆಳೆಗಾರರ ಸಂಘದ ಕೋಶಾಧಿಕಾರಿಯಾಗಿ, ಕಲ್ಲಂಗಳ ಪ್ರೌಡ ಶಾಲೆಯ ಅಭಿವೃಧಿ ಸದಸ್ಯರಾಗಿ, ಅಮೈ ಶಾಲೆಯ “70 ರ ಸಂಭ್ರಮ”ದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು.
ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆಯ ಅಮೈ ಒಕ್ಕೂಟದ ಅಧ್ಯಕ್ಷರಾಗಿ ಎರಡು ಬಾರಿ ಕರ್ತವ್ಯ ನಿರ್ವಹಿಸಿದ್ದರು. ಹಲವಾರು ವರ್ಷಗಳಿಂದ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಉತ್ತಮ ಕೃಷಿಕರಾಗಿ, ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕಾಟುಕುಕ್ಕೆ ಗ್ರಾಮದ ಮುಗೇರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘದ ಹಾಲಿ ಅಧ್ಯಕ್ಷರಾಗಿ ತಿಂಗಳಿಗೆ ಒಮ್ಮೆ ಯಕ್ಷಗಾನ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದರು. ಅಮೈ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಅಡ್ಯನಡ್ಕ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಗ್ರಹಾಲಯಕ್ಕೆ ಮಾಜಿ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿರುತ್ತಾರೆ.
ಜಿಪಂ ಸದಸ್ಯ ಎಂ ಎಸ್ ಮಹಮ್ಮದ್, ಕೇಪು ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ಅಧ್ಯಕ್ಷೆ ಯಶಸ್ವಿನೀ ಶಾಸ್ತ್ರಿ ನೆಕ್ಕರೆ, ಸದಸ್ಯ ಅಬ್ದುಲ್ ಕರೀಂ ಕುದ್ದುಪದವು, ಪುಣಚ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ, ಪುಣಚ ಗ್ರಾ.ಪ ನ ಮಾಜಿ ಅಧ್ಯಕ್ಷ ಜಯಂತ ನಾಯಕ್ ಅಂತಿಮ ದರ್ಶನ ಪಡೆದರು.
Be the first to comment on "ನಿಯಂತ್ರಣ ಕಳೆದುಕೊಂಡ ಬೈಕ್, ಪ್ರಗತಿಪರ ಕೃಷಿಕ ಸಂಜೀವ ನಾಯಕ್ ಸಾವು"